ADVERTISEMENT

‘ಸಕಾಲ’ಕ್ಕೆ ಮಾರುಹೋದ ಪಾಕಿಸ್ತಾನ

ಪ್ರಜಾವಾಣಿ ವಾರ್ತೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 19:49 IST
Last Updated 17 ಡಿಸೆಂಬರ್ 2013, 19:49 IST

ಬೆಂಗಳೂರು: ಕರ್ನಾಟಕದಲ್ಲಿ ಜಾರಿ­ಯಲ್ಲಿ­ರುವ ‘ಸಕಾಲ’ ಯೋಜನೆ­ಯಿಂದ ಪ್ರಭಾವಕ್ಕೆ ಒಳಗಾಗಿರುವ ಪಾಕಿಸ್ತಾನದ ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯದ ಸರ್ಕಾರಗಳು ಇದೇ ಮಾದರಿಯ ಯೋಜನೆಯನ್ನು  ಅನುಷ್ಠಾನಗೊಳಿಸಲು ಆಸಕ್ತಿ ತೋರಿವೆ.

‘ಸಕಾಲ’ ಯೋಜನೆಯ ಕಾರ್ಯ­ವಿಧಾನ ಅತ್ಯುತ್ತಮ­ವಾಗಿದೆ ಎಂದು ಆ ಕುರಿತು ಅಧ್ಯಯನ ನಡೆಸಲು ಬಂದಿರುವ ಪಾಕಿಸ್ತಾನದ ನಿಯೋಗ ಅಭಿಪ್ರಾಯಪಟ್ಟಿದೆ.

ಪಾಕಿಸ್ತಾನದ ತಂಡಕ್ಕೆ ಯೋಜನೆ ಕುರಿತು ವಿವರ ನೀಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು, ತಂತ್ರ­ಜ್ಞಾನದ ಸಹಾಯದಿಂದ ಸಾರ್ವ­ಜ­ನಿಕರಿಗೆ ಸಕಾಲದಲ್ಲಿ ಸರ್ಕಾರಿ ಸೇವೆ­ಗಳನ್ನು ಒದಗಿಸಲು ಸಾಧ್ಯವಾಗಿದೆ ಎಂಬು­ದನ್ನು ಮನವರಿಕೆ ಮಾಡಿಕೊಟ್ಟರು.

ಪಾರದರ್ಶಕ, ಭ್ರಷ್ಟಾಚಾರ ಮುಕ್ತ ಮತ್ತು ತ್ವರಿತ ಸೇವೆ ಒದ­ಗಿಸುವಲ್ಲಿ ‘ಸಕಾಲ’ ಬಹುತೇಕ ಯಶಸ್ವಿಯಾಗಿದೆ. ಹಿಂದಿನ ಸರ್ಕಾರ ಜಾರಿಗೊಳಿಸಿದ ಉತ್ತಮ ಕಾರ್ಯಕ್ರಮ­ಗಳನ್ನು ಪ್ರಸಕ್ತ ಸರ್ಕಾರ ಮುಂದುವರಿಸಿಕೊಂಡು ಬಂದಿದೆ. ಈ ಯೋಜನೆ ಅಡಿ ಇನ್ನಷ್ಟು ಸೇವೆಗಳನ್ನು ತರಲು ಸರ್ಕಾರ ಉದ್ದೇಶಿಸಿದೆ ಎಂದರು.

ತಂಡದಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಸಭೆಯ ಸದಸ್ಯರಾದ ಮಜೀದ್ ಜಹೂರ್, ಮಕ್ದಮ್ ಹಶೀಮ್ ಜವಾನ್ ಭಕ್ತ್, ಪಾಕಿಸ್ತಾನದ ಹಣಕಾಸು ಇಲಾಖೆ ಕಾರ್ಯದರ್ಶಿ ಮಹಮದ್  ಸೊಹೈಲ್ ಖಾನ್ ಹಾಗೂ ವಿಶ್ವ ಬ್ಯಾಂಕ್‌ ಪ್ರತಿನಿಧಿಗಳು ಇದ್ದರು.

‘ಸಕಾಲ’ ಯೋಜನೆಯ ಹೆಚ್ಚುವರಿ ನಿರ್ದೇಶಕ  ಆರ್. ಮನೋಜ್, ನೋಡಲ್ ಅಧಿಕಾರಿ ಡಾ. ಬಿ.ಆರ್. ಮಮತಾ,  ಆಡಳಿತಾಧಿಕಾರಿ  ವರಪ್ರಸಾದ್‌ರೆಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.