ಬೆಂಗಳೂರು: ‘ಈ ಬಾರಿಯ ಕೇಂದ್ರದ ಬಜೆಟ್ ಸಾಕಷ್ಟು ಬದಲಾವಣೆಗಳಿಲ್ಲದ ಮತ್ತು ಹೊಸ ಯೋಜನೆಗಳಿಲ್ಲದ ಸಮತೋಲನದ ಬಜೆಟ್ ಆಗಿದೆ’ ಎಂದು ನ್ಯಾಷನಲ್ ಪದವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಬೆಂಗಳೂರು ಸಾಮಾಜಿಕ ವಿಜ್ಞಾನ ವೇದಿಕೆಯು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕೇಂದ್ರ ಬಜೆಟ್–2014’ ಕುರಿತು ಉಪನ್ಯಾಸ ನೀಡಿದರು.
‘ಚುನಾವಣೆಯ ದೃಷ್ಟಿಯಿಂದ ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು ಸಮತೋಲನವನ್ನು ಕಾಪಾಡಿಕೊಂಡಿದ್ದಾರೆ. ಮಧ್ಯಮವರ್ಗದವರನ್ನು ದೃಷ್ಟಿಯಲ್ಲಿರಿಸಿ ನೀಡಿದ ಬಜೆಟ್ ಇದಾಗಿದೆ’ ಎಂದರು.
‘ನೇರ ತೆರಿಗೆಯ ಸಂಗ್ರಹದಲ್ಲಿ ಏನೂ ಬದಲಾವಣೆಯಿಲ್ಲ. ಆದರೆ, ಮನೆಯನ್ನು ಹೊಸದಾಗಿ ಖರೀದಿಸುವವರಿಗೆ ಮತ್ತು ಕಟ್ಟುವವರಿಗೆ ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ರೀತಿಯ ರಿಯಾಯಿತಿಗಳನ್ನು ನೀಡಿಲ್ಲ. ನೌಕರರ ಭವಿಷ್ಯ ನಿಧಿಯ ಮೇಲೂ ತೆರಿಗೆಯನ್ನು ವಿಧಿಸಲಾಗಿದೆ’ ಎಂದರು.
‘ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಮನೆ ಬಳಕೆಯ ಸಾಮಾನುಗಳ ಮೇಲೆ ಹೆಚ್ಚಿನ ರಿಯಾಯಿತಿ ನೀಡಿದ್ದಾರೆ. ಲ್ಯಾಪ್ಟಾಪ್, ಬೈಕ್, ಕಾರು, ವಾಷಿಂಗ್ ಮೆಷಿನ್ ಇವುಗಳನ್ನು ಖರೀದಿಸುವವರು ಜೂನ್ ತಿಂಗಳ ಒಳಗೆ ಖರೀದಿಸಬೇಕಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.