ADVERTISEMENT

‘ಸ್ಪರ್ಧೆಯಿಂದ ಪ್ರತಿಭೆ ಅನಾವರಣ’

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 19:48 IST
Last Updated 23 ಮಾರ್ಚ್ 2014, 19:48 IST

ಬೆಂಗಳೂರು: ‘ಅಣಕು ನ್ಯಾಯಾಲ­ಯ-­ದಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ’ ಎಂದು ಹಿರಿಯ ವಕೀಲ ಡಾ.ಬಿ.ವಿ. ಆಚಾರ್ಯ ಅಭಿಪ್ರಾಯಪಟ್ಟರು.

ಬಿಎಂಎಸ್‌ ಕಾನೂನು ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಬಿ.ಎಂ.ಶ್ರೀನಿವಾಸಯ್ಯ ಸ್ಮಾರಕ ರಾಷ್ಟ್ರ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಾವು ವಿದ್ಯಾರ್ಥಿಗಳಾಗಿದ್ದಾಗ ಇಂತಹ ಪ್ರಾಯೋಗಿಕ ಕಾರ್ಯಕ್ರಮ­ಗಳು ಹೆಚ್ಚು ನಡೆಯುತ್ತಿರಲಿಲ್ಲ. ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿದರೆ ಆತ್ಮವಿಶ್ವಾಸ ಹೆಚ್ಚುತ್ತದೆ. ಪ್ರತಿಭೆಯನ್ನು ಹೊರಹಾ­ಕಲು ಸ್ಪರ್ಧೆಗಳು ಉತ್ತಮ ವೇದಿಕೆ­ಯಾಗಿವೆ’  ಎಂದು ಹೇಳಿದರು.

ಎಲ್ಲ ವಿಷಯಗಳಲ್ಲಿಯೂ ಜ್ಞಾನ ಹೊಂದಿದಾಗ ಮಾತ್ರ ವಕೀಲಿ ವೃತ್ತಿಯಲ್ಲಿ ಯಶಸ್ವಿಯಾಗಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ನಿರಂತರ­ವಾಗಿ ಅಧ್ಯಯನ ಮಾಡಬೇಕು. ಆಗ ಮಾತ್ರ ವೃತ್ತಿಗೆ ನ್ಯಾಯ ಸಲ್ಲಿಸಬಹುದು ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಆರ್.­ಹರೀಶ್‌ ಮಾತನಾಡಿ, ಅಣಕು ನ್ಯಾಯಾಲಯದಂತಹ ಸ್ಪರ್ಧೆ­ಗಳು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಭ­ವವನ್ನು ನೀಡುತ್ತವೆ. ವಿವಿಧ  ರಾಜ್ಯಗಳಿಂದ 21 ತಂಡಗಳು ಸ್ಪರ್ಧೆ­ಯಲ್ಲಿ ಭಾಗವಹಿಸಿದ್ದವು ಎಂದರು.

ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ತಂಡವು ಪ್ರಥಮ ಮತ್ತು ತಿರುವನಂತಪುರದ ಕೇರಳ ಲಾ ಅಕಾಡೆಮಿಯ ಕಾಲೇಜಿನ ತಂಡದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.