ADVERTISEMENT

ರಸ್ತೆ ಮೇಲೆ ಕೊಳಚೆನೀರು: ಸಾರ್ವಜನಿಕರಿಗೆ ತೊಂದರೆ

ಬ್ಯಾಟರಾಯನಪುರ ಕ್ಷೇತ್ರದ ರಾಚೇನಹಳ್ಳಿ ಕೆರೆ ಸಮೀಪ ಒಳಚರಂಡಿ ಪೈಪ್‌ಗಳಲ್ಲಿ ಸಮಸ್ಯೆ

ಡಿ.ಸುರೇಶ್
Published 16 ಅಕ್ಟೋಬರ್ 2019, 20:11 IST
Last Updated 16 ಅಕ್ಟೋಬರ್ 2019, 20:11 IST
ರಸ್ತೆಯ ಮೇಲೆ ಹರಿಯುತ್ತಿರುವ ಕೊಳಚೆನೀರು
ರಸ್ತೆಯ ಮೇಲೆ ಹರಿಯುತ್ತಿರುವ ಕೊಳಚೆನೀರು   

ಯಲಹಂಕ: ಬ್ಯಾಟರಾಯನಪುರ ಕ್ಷೇತ್ರದ ದಾಸರಹಳ್ಳಿ ಮುಖ್ಯರಸ್ತೆಯ ರಾಚೇನಹಳ್ಳಿ ಕೆರೆ ಸಮೀಪದಲ್ಲಿ ಒಳಚರಂಡಿ ಪೈಪ್‌ಗಳು ಕಟ್ಟಿಕೊಂಡು ಹಾಳಾಗಿರುವುದರಿಂದ ಕೊಳಚೆನೀರು ಹಿಮ್ಮುಖವಾಗಿ ರಸ್ತೆಯ ಮೇಲೆ ಹರಿಯುತ್ತಿರುವ ಪರಿಣಾಮ, ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸಬೇಕಾಗಿದೆ.

ನಾಗವಾರ ವರ್ತುಲ ರಸ್ತೆಯಿಂದ ದಾಸರಹಳ್ಳಿ ಮಾರ್ಗವಾಗಿ ಅಮೃತಹಳ್ಳಿ, ಜಕ್ಕೂರು, ಬಳ್ಳಾರಿ ಮುಖ್ಯರಸ್ತೆ ಸೇರಿದಂತೆ ಹಲವಾರು ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದಾಗಿದ್ದು, ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ.

ಸುಮಾರು ಒಂದು ತಿಂಗಳಿಂದ ರಸ್ತೆಯ ಮೇಲೆ ಕೊಳಚೆನೀರು ಹರಿಯುತ್ತಿರುವುದರಿಂದ ಈ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿದ್ದು ಪ್ರತಿನಿತ್ಯ ಕೆರೆಗೆ ವಾಯುವಿಹಾರಕ್ಕಾಗಿ ಬರುವ ನಾಗರಿಕರು ಕಿರಿಕಿರಿ ಅನುಭವಿಸಬೇಕಾಗಿದೆ. ವಾಹನ ಸವಾರರು ಕೊಳಚೆ ನೀರಿನಲ್ಲೇ ಪ್ರಯಾಸದಿಂದ ತಮ್ಮ ವಾಹನಗಳನ್ನು ಚಾಲನೆ ಮಾಡಬೇಕಿದೆ. ಸಮಸ್ಯೆ ಇಷ್ಟೊಂದು ಗಂಭೀರವಾಗಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬಗೆಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಸ್ಥಳೀಯರ ಆರೋಪ.

ADVERTISEMENT

ಹಲವಾರು ದಿನಗಳಿಂದ ಈ ಸಮಸ್ಯೆ ಮರುಕಳಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಶಾಶ್ವತ ಪರಿಹಾರ ಒದಗಿಸದೆ ಆಗಾಗ ತೇಪೆ ಹಾಕುವ ಕಾಮಗಾರಿ ಕೈಗೊಂಡು ಕೈಚೆಲ್ಲುತ್ತಿರುವುದರಿಂದ ಸಮಸ್ಯೆ ಮರುಕಳಿಸುತ್ತಿದೆ. ವಾಹನಗಳು ಚಲಿಸುವ ವೇಳೆ ಕೊಳಚೆನೀರು ಪರಸ್ಪರ ವಾಹನಗಳ ಮೇಲೆ ಸಿಡಿದು, ಸವಾರರ ನಡುವೆ ಗಲಾಟೆ ನಡೆಯಲು ಆಸ್ಪದ ಮಾಡಿಕೊಟ್ಟಿದೆ. ಪಕ್ಕದಲ್ಲೇ ಹೋಟೆಲ್ ಸಹ ಇದ್ದು, ಕೂಲಿಕಾರ್ಮಿಕರು ಇಂತಹ ವಾತಾವರಣದ ನಡುವೆಯೇ ಊಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಸ್ಥಳೀಯ ನಿವಾಸಿ ವೆಂಕಟೇಶ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.