ADVERTISEMENT

ಅಗರ ಕೆರೆ ಅಭಿವೃದ್ಧಿಗೆ ₹5 ಕೋಟಿ ಬಿಡುಗಡೆ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 10:51 IST
Last Updated 17 ಸೆಪ್ಟೆಂಬರ್ 2019, 10:51 IST
ಬಿ.ಎಸ್.ಯಡಿಯೂರಪ್ಪ ಗಿಡವನ್ನು ನೆಡುವ ಮೂಲಕ ವೃಕ್ಷೋತ್ಸವಕ್ಕೆ ಚಾಲನೆ ನೀಡಿದರು. ಶಾಸಕ ಸತೀಶ್ ರೆಡ್ಡಿ, ಮೇಯರ್ ಗಂಗಾಂಬಿಕೆ, ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ್ ಇದ್ದಾರೆ.
ಬಿ.ಎಸ್.ಯಡಿಯೂರಪ್ಪ ಗಿಡವನ್ನು ನೆಡುವ ಮೂಲಕ ವೃಕ್ಷೋತ್ಸವಕ್ಕೆ ಚಾಲನೆ ನೀಡಿದರು. ಶಾಸಕ ಸತೀಶ್ ರೆಡ್ಡಿ, ಮೇಯರ್ ಗಂಗಾಂಬಿಕೆ, ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ್ ಇದ್ದಾರೆ.   

ಬೊಮ್ಮನಹಳ್ಳಿ: ‘ಅಗರ ಕೆರೆಯ ಅಭಿವೃದ್ಧಿಗಾಗಿ ₹5 ಕೋಟಿ ಬಿಡುಗಡೆ ಮಾಡಲಿದ್ದು, ಸ್ಥಳೀಯರ ಅಭಿಪ್ರಾಯ ಪಡೆದು ಅಭಿವೃದ್ಧಿ ನೀಲನಕ್ಷೆ ತಯಾರಿಸಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಸೂಚಿಸಿದರು.

ಎಚ್ಎಸ್ಆರ್ ಬಡಾವಣೆಯ ಅಗರ ಕೆರೆ ಬಳಿ ಮಂಗಳವಾರ ನಡೆದ ‘ವೃಕ್ಷೋತ್ಸವ – 2019’ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಗ್ಗಿ ವಾಸುದೇವ್ (ಸದ್ಗುರು) ನೇತೃತ್ವದಲ್ಲಿ ನಡೆಯುತ್ತಿರುವ ‘ಕಾವೇರಿ ಕೂಗು‘ ಆಂದೋಲನಕ್ಕೆ 2 ಕೋಟಿ ಗಿಡಗಳನ್ನು ಉಚಿತವಾಗಿ ನೀಡಲಾಗುವುದು ಎಂದರು.

ADVERTISEMENT

‘ವಿಶ್ವ ಬಿದಿರು ದಿನದ ಅಂಗವಾಗಿ ಬಿದಿರು ಬೆಳೆಯನ್ನು ಪ್ರೋತ್ಸಾಹಿಸಲು ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ಸಹಾಯಧನ ನೀಡಲಾಗುವುದು’ ಎಂದು ಅವರು ಪ್ರಕಟಿಸಿದರು.

ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ‘ನಗರದಲ್ಲಿ ಸುಮಾರು 15 ಸಾವಿರ ಎಕರೆ ಅರಣ್ಯ ಕಣ್ಮರೆಯಾಗಿದ್ದು, ಸದ್ಯ ಇರುವ ಅರಣ್ಯವನ್ನು ಜತನದಿಂದ ಕಾಪಾಡಿಕೊಳ್ಳಬೇಕಾದ ಹೊಣೆ ನಮ್ಮ ಮೇಲಿದೆ’ ಎಂದರು.

’ನಗರದ ಸುತ್ತ ಲಾಲ್‌ಬಾಗ್ ಹಾಗೂ ಕಬ್ಬನ್ ಉದ್ಯಾನದ ಮಾದರಿಯ ಉದ್ಯಾನಗಳನ್ನು ನಿರ್ಮಿಸಲಾಗುವುದು. ಕೆರೆಗಳನ್ನು ಸಂರಕ್ಷಿಸಿ, ನೀರಿನ ಗುಣಮಟ್ಟ ಹೆಚ್ಚಿಸುವ ಕುರಿತು ಸರ್ಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಕೇಂದ್ರ ಸರ್ಕಾರವು ಜಲ ಸಂರಕ್ಷಣೆಗಾಗಿ ₹1.5 ಲಕ್ಷ ಕೋಟಿ ತೆಗೆದಿರಿಸಿದ್ದು, ಇದನ್ನೂ ಬಳಸಿಕೊಂಡು ನಗರದ ಕೆರೆಗಳನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಲಾಗುವುದು’ ಎಂದರು.

ಸಂಸದ ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಟಿ ಶ್ರೀಧರ್, ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.