ADVERTISEMENT

100 ಹಾಸಿಗೆಗಳ ಕೋವಿಡ್‌ ಆರೈಕೆ ಕೇಂದ್ರ ಉದ್ಘಾಟನೆ

₹ 5.5 ಕೋಟಿ ವೆಚ್ಚದಲ್ಲಿ ಕೇವಲ 20 ದಿನಗಳಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 20:26 IST
Last Updated 19 ಜೂನ್ 2021, 20:26 IST
B S Yediyurappa inaugurates Boeing Covid Care hospital by Boeing India, Selco foundation, Doctors ForU at Yalahanka in Bengaluru on Saturday, 19 June 2021. CM office photo
B S Yediyurappa inaugurates Boeing Covid Care hospital by Boeing India, Selco foundation, Doctors ForU at Yalahanka in Bengaluru on Saturday, 19 June 2021. CM office photo   

ಬೆಂಗಳೂರು: ಬೋಯಿಂಗ್ ಸಂಸ್ಥೆಯು ಸೆಲ್ಕೊ ಹಾಗೂ ಡಾಕ್ಟರ್ಸ್‌ ಫಾರ್‌ ಯೂ ಸಹಯೋಗದೊಂದಿಗೆ ಯಲಹಂಕದಲ್ಲಿ ನಿರ್ಮಿಸಿರುವ100 ಹಾಸಿಗೆಗಳ ಅತ್ಯಾ ಧುನಿಕ ಕೋವಿಡ್‌ ಆರೈಕೆ ಕೇಂದ್ರವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಶನಿವಾರ ಉದ್ಘಾಟಿಸಿದರು.

ಈ ಕೇಂದ್ರವನ್ನು₹5.5 ಕೋಟಿ ವೆಚ್ಚದಲ್ಲಿ ಕೇವಲ20 ದಿನಗಳಲ್ಲಿ ನಿರ್ಮಿಸಲಾಗಿದೆ.

ಸೌರ ವಿದ್ಯುತ್‌ ಹಾಗೂ ತಾಪಮಾನ ನಿಯಂತ್ರಣ ವ್ಯವಸ್ಥೆ ಒಳಗೊಂಡಿರುವ ಈ ಕೇಂದ್ರದಲ್ಲಿ ಔಷಧಾಲಯ, ಪ್ರಯೋಗಾಲಯ, ವಿಶ್ರಾಂತಿ ಕೊಠಡಿ, ಶುಶ್ರೂಷಕಿ ಹಾಗೂ ತಾಯಂದಿರ ಆರೈಕೆ ಕೇಂದ್ರವೂ ಇದೆ. 10 ಐಸಿಯು ಹಾಗೂ 20 ಎಚ್‌ಡಿಯು ಹಾಸಿಗೆಗಳಿವೆ. ಉಳಿದ ಹಾಸಿಗೆಗಳು ವೈದ್ಯಕೀಯ ಆಮ್ಲಜನಕ ವ್ಯವಸ್ಥೆ ಹೊಂದಿವೆ.

ADVERTISEMENT

ಆಸ್ಪತ್ರೆ ನಿರ್ಮಾಣಕ್ಕೆ ಕರ್ನಾಟಕ ವಿದ್ಯುತ್‌ ನಿಗಮವು ಅರ್ಧ ಎಕರೆ ಜಾಗ ಬಿಟ್ಟುಕೊಟ್ಟಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ‘ಕೋವಿಡ್‌ ಎರಡನೇ ಅಲೆಯ ನಿಯಂತ್ರಣ, ಚಿಕಿತ್ಸೆ ಹಾಗೂ ಲಸಿಕೆ ಕಾರ್ಯಕ್ರಮದಲ್ಲಿ ಸರ್ಕಾರದ ಜೊತೆ ಖಾಸಗಿ ಸಂಸ್ಥೆಗಳು ಕೈ ಜೋಡಿಸಿರುವುದು ಶ್ಲಾಘನೀಯ. ಬೋಯಿಂಗ್‌ ಸಂಸ್ಥೆ ಕಡಿಮೆ ಅವಧಿಯಲ್ಲಿ ಅತ್ಯಾಧುನಿಕ ಕೋವಿಡ್‌ ಆರೈಕೆ ಕೇಂದ್ರ ನಿರ್ಮಿಸಿರುವುದು ಸಂತಸದ ವಿಷಯ’ ಎಂದರು.

ಡಿ.ವಿ.ಸದಾನಂದ ಗೌಡ, ‘ಕೋವಿಡ್‌ ಸಾಂಕ್ರಾಮಿಕ ಆರಂಭವಾದಾಗಿನಿಂದಲೂ ರಾಜ್ಯ ಸರ್ಕಾರಗಳಿಗೆ ಕೇಂದ್ರವು ಎಲ್ಲ ರೀತಿಯ ಬೆಂಬಲ ನೀಡಿದ್ದು ಮುಂದೆಯೂ ಸಹಕಾರ ಮುಂದು ವರಿಯಲಿದೆ’ ಎಂದು ಹೇಳಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಎಸ್‌.ಆರ್.ವಿಶ್ವನಾಥ್‌, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ರಾಜ್‌ಕುಮಾರ್‌ ಖತ್ರಿ,ಬೋಯಿಂಗ್ ಇಂಡಿಯಾ ಅಧ್ಯಕ್ಷ ಸಲೀಲ್ ಗುಪ್ತೆ, ‘ಡಾಕ್ಟರ್ಸ್ ಫಾರ್ ಯೂ’ ಸಂಸ್ಥೆಯ ಅಧ್ಯಕ್ಷ ರಜತ್ ಜೈನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.