ಬೆಂಗಳೂರು: ರಾಜ್ಯದಲ್ಲಿ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆಲುವಿನ ಗುರಿಯೊಂದಿಗೆ ಐದು ಹಂತಗಳ 100 ದಿನಗಳ ಪ್ರಚಾರ ಆರಂಭಿಸಲು ಸೋಮವಾರ ನಡೆದ ಬಿಜೆಪಿ ಚಿಂತನ–ಮಂಥನ ಸಭೆಯಲ್ಲಿ ನಿರ್ಧರಿಸಲಾಗಿದೆ.
ನಗರದ ಹೊರ ವಲಯದ ರಮಾಡ ರೆಸಾರ್ಟ್‌ನಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ರಾಜ್ಯ ಉಸ್ತುವಾರಿಯಾಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 40ಕ್ಕೂ ಹೆಚ್ಚು ಮುಖಂಡರು ಪಾಲ್ಗೊಂಡಿದ್ದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದ ಡಿ.ವಿ. ಸದಾನಂದಗೌಡ, ಶಾಸಕ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ಹಲವು ಹಿರಿಯ ಮುಖಂಡರು ಸಭೆಯಲ್ಲಿದ್ದರು. ಬಿಜೆಪಿ ರಾಜ್ಯ ಘಟಕದ ನೂತನ ಪ್ರಧಾನ ಕಾರ್ಯದರ್ಶಿಗಳೂ ಭಾಗವಹಿಸಿದ್ದರು.
ಬಿಜೆಪಿ–ಜೆಡಿಎಸ್ ಮೈತ್ರಿಕೂಟವು ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಕ್ಕೆ ಅನುಕೂಲವಾಗುವಂತೆ ತ್ವರಿತವಾಗಿ ಚುನಾವಣಾ ಪ್ರಚಾರ ಆರಂಭಿಸಲು ಸಭೆಯಲ್ಲಿ ತಿರ್ಮಾನಿಸಲಾಗಿದೆ. ಎಲ್ಲ ಪ್ರಮುಖ ನಾಯಕರನ್ನು ಒಳಗೊಂಡ ಹಲವು ತಂಡಗಳ ಪ್ರವಾಸಕ್ಕೂ ನಿರ್ಧರಿಸಲಾಗಿದೆ.
ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಸಚಿವ ಸಿ.ಟಿ. ರವಿ, ‘100 ದಿನಗಳ ಚುನಾವಣಾ ಪ್ರಚಾರ ಯೋಜನೆಯೊಂದನ್ನು ಸಭೆಯಲ್ಲಿ ಅಂತಿಮಗೊಳಿಸಲಾಗಿದೆ. ಪಕ್ಷದ ಒಳಗೆ ಮತ್ತು ಸಾರ್ವಜನಿಕವಾಗಿ ನಿರಂತರ ಚಟುವಟಿಕೆಗಳನ್ನು ನಡೆಸುವುದು ಈ ಯೋಜನೆಯ ಗುರಿ’ ಎಂದರು.
ಐದು ಹಂತದಲ್ಲಿ ಸಿದ್ಧತೆ: ಮತಗಟ್ಟೆ, ಮಂಡಲ, ಲೋಕಸಭಾ ಕ್ಷೇತ್ರ, ಮೂರರಿಂದ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡ ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ಚುನಾವಣಾ ಸಿದ್ಧತೆ ಆರಂಭಿಸುವ ಯೋಜನೆಯನ್ನು ಬಿಜೆಪಿ ಅಂತಿಮಗೊಳಿಸಿದೆ.
ಕೇಂದ್ರ ಸರ್ಕಾರದ ಪ್ರಮುಖ ನಿರ್ಧಾರಗಳ ಕುರಿತ ಮಾಹಿತಿಯನ್ನು ಮತದಾರರಿಗೆ ತಲುಪಿಸುವುದು, ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶದ ಮೂಲಕ ಅವರನ್ನು ಪಕ್ಷದೆಡೆಗೆ ಆಕರ್ಷಿಸುವುದು, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಕುರಿತು ಜನಜಾಗೃತಿ ನಡೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಭ್ಯರ್ಥಿ ಆಯ್ಕೆ: ಜ.10–13ಕ್ಕೆ ಸಭೆ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆಮಾಡಲು ಸಂಭವನೀಯರ ಪಟ್ಟಿಯನ್ನು ಅಂತಿಮಗೊಳಿಸುವುದಕ್ಕಾಗಿ ಇದೇ 10 ಮತ್ತು 13ರಂದು ಕ್ಷೇತ್ರವಾರು ಮುಖಂಡರ ಸಭೆ ನಡೆಸಲು ಬಿಜೆಪಿ ನಿರ್ಧರಿಸಿದೆ. ‘ಪಕ್ಷದ ವರಿಷ್ಠರ ನಿರ್ಣಯಕ್ಕೆ ಬದ್ಧರಾಗಿರಬೇಕು ಎಂಬ ಷರತ್ತಿನೊಂದಿಗೆ ಎಲ್ಲ ಲೋಕಸಭಾ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳು ಮಾಜಿ ಸಚಿವರು ಶಾಸಕರು ಮಾಜಿ ಶಾಸಕರು ಮತ್ತು ಪ್ರಮುಖ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಬಳಿಕ ಕ್ಷೇತ್ರವಾರು ವರದಿಗಳನ್ನು ಪಕ್ಷದ ವರಿಷ್ಠರಿಗೆ ರವಾನಿಸಲಾಗುವುದು’ ಎಂದು ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಿಜೆಪಿ ಪರವಾದ ವಾತಾವರಣ’
‘ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಬಳಿಕ ದೇಶದಾದ್ಯಂತ ಬಿಜೆಪಿ ಪರವಾದ ವಾತಾವರಣ ಇದೆ. ರಾಜ್ಯದಲ್ಲಿ ಬಿಜೆಪಿ ಮೈತ್ರಿಕೂಟವು ಎಲ್ಲ ಲೋಕಸಭಾ ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಚಿಂತನ– ಮಂಥನ ಸಭೆಯ ಆರಂಭದಲ್ಲಿ ಮಾತನಾಡಿದ ಅವರು ‘ಕಾಂಗ್ರೆಸ್ ಸರ್ಕಾರದ ಗಿಮಿಕ್ ಗ್ಯಾರಂಟಿಗಳನ್ನು ಜನರು ನಂಬುವುದಿಲ್ಲ. ಅಭಿವೃದ್ಧಿ ಕುಂಠಿತವಾಗಿರುವುದರಿಂದ ಜನರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ’ ಎಂದರು. ‘ತುಷ್ಟೀಕರಣವೇ ಗುರಿ’: ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ‘ಅಲ್ಪಸಂಖ್ಯಾತರ ತುಷ್ಟೀಕರಣೇ ಕಾಂಗ್ರೆಸ್‌ನವರ ಗುರಿ. ಇದಕ್ಕಾಗಿ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.