ADVERTISEMENT

ಆಸ್ತಿ ತೆರಿಗೆ 2 ವರ್ಷ ಬಾಕಿ ಉಳಿದರೆ ಶೇ 100 ದಂಡ: ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 20:14 IST
Last Updated 21 ಮಾರ್ಚ್ 2025, 20:14 IST
ಬಿಬಿಎಂಪಿ ಕೇಂದ್ರ ಕಚೇರಿಯ ಸಂಗ್ರಹ ಚಿತ್ರ
ಬಿಬಿಎಂಪಿ ಕೇಂದ್ರ ಕಚೇರಿಯ ಸಂಗ್ರಹ ಚಿತ್ರ   

ಬೆಂಗಳೂರು: ಆಸ್ತಿ ತೆರಿಗೆಯನ್ನು ಎರಡು ವರ್ಷಗಳಿಗೂ ಹೆಚ್ಚು ಅವಧಿಗೆ ಬಾಕಿ ಉಳಿಸಿಕೊಂಡವರಿಗೆ ತೆರಿಗೆ ಶೇ 100ರಷ್ಟು ದಂಡ ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.

ಆಸ್ತಿ ತೆರಿಗೆಯನ್ನು ಎರಡು ವರ್ಷದವರೆಗೆ ಪಾವತಿಸದೇ ಇರುವವರಿಗೆ ಹಲವಾರು ನೋಟಿಸ್‌ಗಳು, ಎಸ್‌ಎಂಎಸ್‌ ಸಂದೇಶಗಳು ಕಳುಹಿಸುವುದು ಮತ್ತು ಜಾಹೀರಾತುಗಳನ್ನೂ ನೀಡಲಾಗುತ್ತದೆ. ಆದರೂ ತೆರಿಗೆ ಪಾವತಿಸದವರಿಗೆ ತೆರಿಗೆಯ ಶೇ 100ರಷ್ಟು ದಂಡ ವಿಧಿಸಲಾಗುತ್ತದೆ.

2024-25 ಆಸ್ತಿ ತೆರಿಗೆಯನ್ನು ಪಾವತಿಸದಿದ್ದರೆ, 2025ರ ಏಪ್ರಿಲ್‌ 1ರಿಂದಲೇ ಶೇ 100ರಷ್ಟು ದಂಡ ವಿಧಿಸುವುದಿಲ್ಲ. ಶೇ 15ರಷ್ಟು ಸರಳ ಬಡ್ಡಿ ವಿಧಿಸಲಾಗುತ್ತದೆ. 2026 ಏಪ್ರಿಲ್‌ 1ರವರೆಗೂ ಪಾವತಿಸಿದ್ದರೆ, ಶೇ 100 ರಷ್ಟು ದಂಡ ಅನ್ವಯವಾಗಲಿದೆ ಎಂದು ವಿವರ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

₹23.24 ಕೋಟಿ ಮೌಲ್ಯದ ಒತ್ತುವರಿ ತೆರವು

ಬೆಂಗಳೂರು: ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ₹23.24 ಕೋಟಿ ಮೌಲ್ಯದ ಒಟ್ಟು 9 ಎಕರೆ 19.08 ಗುಂಟೆ ಸರ್ಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ಅವರ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿಯ ವಿಟ್ಟಸಂದ್ರ ಗ್ರಾಮ, ಉತ್ತರಹಳ್ಳಿ ಹೋಬಳಿಯ ಸೋಮನಹಳ್ಳಿ ಗ್ರಾಮ, ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿಯ ಯಾರಂಡಹಳ್ಳಿ ಗ್ರಾಮ, ಜಿಗಣಿ ಹೋಬಳಿಯ ಬನ್ನೇರುಘಟ್ಟ ಗ್ರಾಮ, ಕಸಬಾ ಹೋಬಳಿಯ ಸಮಂದೂರು ಗ್ರಾಮ, ಚಿಕ್ಕಹೆಗಡೆ ಗ್ರಾಮ, ಅತ್ತಿಬೆಲೆ ಹೋಬಳಿಯ ನೆರಳೂರು, ಯಲಹಂಕ ತಾಲ್ಲೂಕಿನ ಯಲಹಂಕ ಹೋಬಳಿಯ ತಿಂಡ್ಲು ಗ್ರಾಮ, ಚಿಕ್ಕಬೆಟ್ಟಹಳ್ಳಿಗಳಲ್ಲಿ ಒತ್ತುವರಿ ತೆರವು ಮಾಡಲಾಗಿದೆ.

ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಕಡಬಗೆರೆ ಗ್ರಾಮ, ಹುಲ್ಲೇಗೌಡನಹಳ್ಳಿ ಗ್ರಾಮ, ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಹಂಚರಹಳ್ಳಿ ಗ್ರಾಮ, ವರ್ತೂರು ಹೋಬಳಿಯ ದೇವರಬೀಸನಹಳ್ಳಿ ಒತ್ತುವರಿಯಾಗಿದ್ದ ಪ್ರದೇಶವನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು ನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಕೆ. ನಾಯಕ್ ಹಾಗೂ  ವಿವಿಧ ತಾಲ್ಲೂಕಿನ ತಹಶೀಲ್ದಾರ್ ಅವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.