ADVERTISEMENT

38 ವಾರ್ಡ್‌ಗಳಲ್ಲಿ ಮೂರು ತಿಂಗಳಲ್ಲಿ ಶೇ 100 ಕಸ ವಿಂಗಡಣೆ

ಕಸ ವಿಲೇವಾರಿ: ಹೊಸ ಟೆಂಡರ್‌ ಅನುಷ್ಠಾನಕ್ಕೆ ಬಿಬಿಎಂಪಿ ಸಿದ್ಧತೆ * ನಿಗಾ ಇಡಲು ಕೇಂದ್ರೀಕೃತ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 19:30 IST
Last Updated 16 ಸೆಪ್ಟೆಂಬರ್ 2020, 19:30 IST
ಕಸ ವಿಲೇವಾರಿ ಕುರಿತ ಹೊಸ ಟೆಂಡರ್‌ ಅನುಷ್ಠಾನದ ಕುರಿತು ಚರ್ಚಿಸಲು ಬಿಬಿಎಂಪಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ
ಕಸ ವಿಲೇವಾರಿ ಕುರಿತ ಹೊಸ ಟೆಂಡರ್‌ ಅನುಷ್ಠಾನದ ಕುರಿತು ಚರ್ಚಿಸಲು ಬಿಬಿಎಂಪಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ   

ಬೆಂಗಳೂರು: ನಗರದ 38 ವಾರ್ಡ್‌ಗಳಲ್ಲಿ ಹಸಿ ಕಸ, ಒಣ ಕಸ ಹಾಗೂ ನೈರ್ಮಲ್ಯ ಕಸಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡುವ ಹೊಸ ಟೆಂಡರ್‌ಗಳನ್ನು ಜಾರಿಗೊಳಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಈ ವಾರ್ಡ್‌ಗಳ ಕಸ ವಿಂಗಡಣೆಯಲ್ಲಿ ಮೂರು ತಿಂಗಳುಗಳಲ್ಲಿ ಶೇ 100 ರಷ್ಟು ಗುರಿ ಸಾಧನೆ ಆಗಬೇಕು. ಎಲ್ಲೂ ಕಸದ ರಾಶಿ ಕಾಣಿಸಬಾರದು ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ವಾರ್ಡ್‌ಗಳ ಕಸ ವಿಲೇವಾರಿ ವ್ಯವಸ್ಥೆ ಮೇಲೆ ನಿಗಾ ಇಡಲು ಪಾಲಿಕೆಯ ಕಸ ನಿರ್ವಹಣಾ ವಿಭಾಗವು ಕಂದ್ರೀಕೃತ ನಿಯಂತ್ರಣ ಕೊಠಡಿಯನ್ನು ಹೊಂದಲಿದೆ. ಆಟೊಟಿಪ್ಪರ್‌ಗಳಲ್ಲಿ ಹಾಗೂ ಕಾಂಪ್ಯಾಕ್ಟರ್‌ಗಳಲ್ಲಿ ಜಿಪಿಎಸ್‌ ಅಳವಡಿಸುವುದನ್ನು ಕಡ್ಡಾಯ ಮಾಡಲಾಗಿದ್ದು, ಅಧಿಕಾರಿಗಳು ಕಚೇರಿಯಿಂದಲೇ ಕಸ ವಿಲೇವಾರಿ ಮೇಲೆ ನಿಗಾ ಇಡಬಹುದು.

ಕಸ ವಿಲೇವಾರಿಯ ಹೊಸ ಟೆಂಡರ್‌ಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಸಲುವಾಗಿ ಆಯುಕ್ತರು ಬುಧವಾರ ಅಧಿಕಾರಿಗಳ ಹಾಗೂ ಸಿಬ್ಬಂದಿಯ ಸಭೆ ನಡೆಸಿ, ಸಲಹೆ ಸೂಚನೆ ನೀಡಿದರು.

ADVERTISEMENT

ಪ್ರತಿ ವಾರ್ಡ್‌ನಲ್ಲೂ 700 ಮನೆಗಳಿಗೆ ಒಂದು ಘಟಕವನ್ನು ಗುರುತಿಸಲಾಗಿದೆ. ಅದಕ್ಕನುಗುಣವಾಗಿ ಆಟೊಟಿಪ್ಪರ್/ಕಾಂಪ್ಯಾಕ್ಟರ್‌ಗಳು, ಪೌರಕಾರ್ಮಿಕರು/ ಚಾಲಕ ಮತ್ತು ಸ್ವಚ್ಚತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಬ್ಬಂದಿ ಬಯೋ ಮೆಟ್ರಿಕ್ ಹಾಜರಾತಿ ಪಡೆಯುವುದು, ಅವರು ಕೆಲಸದ ಸಂದರ್ಭದಲ್ಲಿ ಸಮವಸ್ತ್ರ ಮತ್ತು ಸುರಕ್ಷತಾ ಪರಿಕರ ಧರಿಸುವುದು ಕಡ್ಡಾಯವಾಗಲಿದೆ.

ಕಸ ಸಂಗ್ರಹಿಸುವ ವಾಹನಗಳು ಸಾಗುವ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಜನ ಜಾಗೃತಿ ಮೂಡಿಸಲು ಆಟೋಟಿಪ್ಪರ್‌ಗಳಲ್ಲಿ ಧ್ವನಿವರ್ಧಕ ಅಳವಡಿಸಲಾಗಿದೆ. ಸಂಪರ್ಕ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಜನರಲ್ಲಿ ಕಸ ವಿಂಗಡಣೆ ಬಗ್ಗೆ ಅರಿವು ಮೂಡಿಸಲಿದ್ದಾರೆ. ಒಣ ಕಸವನ್ನು ವಾರದಲ್ಲಿ ಎರಡು ದಿನ ಸಂಗ್ರಹಿಸಲಾಗುತ್ತದೆ. ಈ ಕಾರ್ಯಕ್ಕೆ ಕಸ ಆಯುವವರನ್ನು ಹಾಗೂ ಸ್ತ್ರೀಶಕ್ತಿ ಗುಂಪುಗಳಿಗೆ ಆದ್ಯತೆ ನೀಡಲಾಗುತ್ತದೆ. ಒಣ ಕಸ ಸಂಗ್ರಹ ಕೇಂದ್ರಗಳನ್ನು ಮಾದರಿ ಕೇಂದ್ರಗಳನ್ನಾಗಿ ರೂಪಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

ಜನ ಪದೇ ಪದೇ ಕಸ ಸುರಿಯುವ ಸ್ಥಳಗಳನ್ನು ಪತ್ತೆಹಚ್ಚಿ ಅಲ್ಲಿನ ಕಸವನ್ನು ಹಂತ-ಹಂತವಾಗಿ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು. ಆರೋಗ್ಯಾಧಿಕಾರಿಗಳು, ಸಂಪರ್ಕ ಕಾರ್ಯಕರ್ತೆಯರು, ಮಾರ್ಷಲ್‌ಗಳು ಹಾಗೂ ಪೌರಕಾರ್ಮಿಕರೆಲ್ಲ ಸಮನ್ವಯದಿಂದ ಕೆಲಸ ಮಾಡಿದರೆ ನಗರವನ್ನು ಇನ್ನಷ್ಟು ಸ್ವಚ್ಛವಾಗಿಡಲು ಸಾಧ್ಯ ಎಂದು ಆಯುಕ್ತರು ತಿಳಿಸಿದರು.

ದೂರುಗಳಿಗೆ ತ್ವರಿತ ಸ್ಪಂದನೆ: ಕಸ ವಿಲೇವಾರಿಯ ನ್ಯೂನತೆ ಬಗ್ಗೆ ಜನ ಸಹಾಯ 2.0 ತಂತ್ರಾಂಶಕ್ಕೆ, ಕಸ ನಿರ್ವಹಣೆ ನಿಯಂತ್ರಣ ಕೊಠಡಿಗೆ, ಪಾಲಿಕೆ ಆಯುಕ್ತರ ಫೇಸ್ ಬುಕ್, ಟ್ವಿಟರ್ ಖಾತೆಗಳ ಮೂಲಕ ದೂರು ನೀಡಬಹುದು. ದೂರುಗಳನ್ನು ಕಾಲಮಿತಿಯೊಳಗೆ ಬಗೆಹರಿಸಬೇಕು. ಈ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಅವರು ಸೂಚಿಸಿದರು. ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಕಸ ವಿಲೇವಾರಿ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್, ಜಂಟಿ ಆಯುಕ್ತ ಸರ್ಫರಾಜ್ ಖಾನ್, ಮುಖ್ಯ ಎಂಜಿನಿಯರ್‌ ವಿಶ್ವನಾಥ್, ಸೂಪರಿಂಟೆಂಡಿಂಗ್‌ ಎಂಜಿನಿಯರ್ ಬಸವರಾಜ್ ಕಬಾಡೆ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳನ್ನು (ಡಿಡಬ್ಲ್ಯುಸಿಸಿ) ನಿರ್ವಹಿಸುವ ಸ್ತ್ರೀಶಕ್ತಿ ಗುಂಪು, ಸಂಪರ್ಕ ಕಾರ್ಯಕರ್ತೆಯರು, ಭಾಗವಹಿಸಿದ್ದರು.

ಕಸ ವಿಂಗಡಿಸದಿದ್ದರೆ ದಂಡ

ಕಸವನ್ನು ಸಮರ್ಪಕವಾಗಿ ವಿಂಗಡಿಸಿ ಕೊಡುವ ಬಗ್ಗೆ ಬಿಬಿಎಂಪಿ ಬಿತ್ತಿಪತ್ರ ಹಂಚಿ ಜಾಗೃತಿ ಮೂಡಿಸಲಿದೆ. ಬಳಿಕವೂ ಕಸವನ್ನು ವಿಂಗಡಿಸಿ ಕೊಡದಿದ್ದರೆ ಮಾರ್ಷಲ್‌ಗಳು ದಂಡ ವಿಧಿಸಲಿದ್ದಾರೆ.

ಗುತ್ತಿಗೆದಾರರಿಗೆ ರ‍್ಯಾಂಕಿಂಗ್‌

ಕಸ ವಿಲೇವಾರಿ ಪದ್ದತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪಾಲಿಕೆಯು ಸ್ವಚ್ಛತೆ ಆಧಾರದಲ್ಲಿ ವಾರ್ಡ್‌ವಾರು ರ್‍ಯಾಂಕಿಂಗ್‌ ನೀಡಲಿದೆ. ಯಾವುದಾದರೂ ಸಂಸ್ಥೆ ಸತತವಾಗಿ ಮೂರ್ನಲ್ಕು ಸಲ ಕಳಪೆ ಶ್ರೇಣಿ ಪಡೆದರೆ ಆ ಸಂಸ್ಥೆಗೆ ಪಾಲಿಕೆ ನೋಟಿಸ್ ನೀಡಿ ಕ್ರಮಕೈಗೊಳ್ಳಲಿದೆ.

ವಾಹನ ಸ್ವಚ್ಛವಾಗಿರಲಿ: ಆಟೊ ಟಿಪ್ಪರ್ ಹಾಗೂ ಕಾಂಪ್ಯಾಕ್ಟರ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಸ ಸಂಗ್ರಹಿಸುವಾಗ ರಸ್ತೆಮೇಲೆ ಚೆಲ್ಲಬಾರದು. ಕಸ ಸಾಗಿಸುವ ವಾಹನದಿಂದ ದ್ರವತ್ಯಾಜ್ಯ (ಲಿಚೆಟ್) ಎಲ್ಲಿಯೂ ಸೋರಿಕೆ ಆಗದಂತೆ ಕೊಳ್ಳಬೇಕು. ವಾಹನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ಗುತ್ತಿಗೆ ಸಂಸ್ಥೆಗೆ ದಂಡ ವಿಧಿಸುತ್ತೇವೆ ಎಂದು ಗುತ್ತಿಗೆದಾರರಿಗೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಕಸ ಸಂಗ್ರಹಣೆ ಯಾವಾಗ?

ಬೆಳಿಗ್ಗೆ 6.30 ರಿಂದ 10.30: ಮನೆ-ಮನೆಗಳಿಂದ

ಬೆಳಿಗ್ಗೆ 11ರಿಂದ ಮಧ್ಯಾಹ್ನ 1: ಸಣ್ಣ ಉದ್ದಿಮೆಗಳಿಂದ

ಬೆಳಿಗ್ಗೆ 11ರಿಂದ ಮಧ್ಯಾಹ್ನ 2: ಬೀದಿಗಳನ್ನು ಗುಡಿಸಿದ ಕಸ


ಯಾವೆಲ್ಲ ವಾರ್ಡ್‌ಗಳಲ್ಲಿ ಹೊಸ ವ್ಯವಸ್ಥೆ: (ವಾರ್ಡ್ ಸಂಖ್ಯೆ) 1, 2, 3, 9, 15, 32, 39, 48, 51, 52, 53, 54, 82, 91, 92, 97, 99, 100, 104, 127, 128, 131, 137, 138, 141, 144, 146, 147, 156, 157, 158, 161, 165, 167, 169, 175, 190, 191

***

ಸ್ವಚ್ಛತೆಯಲ್ಲಿ ಬೆಂಗಳೂರು ಅಗ್ರಸ್ಥಾನ ಪಡೆಯುವುದಕ್ಕೆ ಬಿಬಿಎಂಪಿ ಅಧಿಕಾರಿಗಳು ಶಕ್ತಿ ಮೀರಿ ಶ್ರಮಿಸಲಿದ್ದಾರೆ. ಈ ಕುರಿತ ಫಲಿತಾಂಶ ಶೀಘ್ರವೇ ಕಾಣಿಸಲಿದೆ

– ಎನ್‌.ಮಂಜುನಾಥಪ್ರಸಾದ್‌, ಬಿಬಿಎಂಪಿ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.