ADVERTISEMENT

ಡಾಂಬರಿಗಾಗಿ ಕಾದಿರುವ ರಸ್ತೆಗಳು

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಬಿಎಂಪಿ ಸೇರಿದ 28 ಹಳ್ಳಿಗಳ ಚಿತ್ರಣ

ವಿಜಯಕುಮಾರ್ ಎಸ್.ಕೆ.
Published 6 ಜುಲೈ 2021, 22:26 IST
Last Updated 6 ಜುಲೈ 2021, 22:26 IST
ಚಿಕ್ಕತೋಗೂರು ರಸ್ತೆಯ ಪ್ರಗತಿನಗರದಲ್ಲಿ 110 ಹಳ್ಳಿ ಯೋಜನೆ ಕಾಮಗಾರಿ ನಡೆಯುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರಗಳು/ಎಂ.ಎಸ್. ಮಂಜುನಾಥ್‌
ಚಿಕ್ಕತೋಗೂರು ರಸ್ತೆಯ ಪ್ರಗತಿನಗರದಲ್ಲಿ 110 ಹಳ್ಳಿ ಯೋಜನೆ ಕಾಮಗಾರಿ ನಡೆಯುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರಗಳು/ಎಂ.ಎಸ್. ಮಂಜುನಾಥ್‌   

ಬೆಂಗಳೂರು: ಒಂದೆಡೆ ಮುಗಿಯದ ಒಳಚರಂಡಿ ಮತ್ತು ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ, ಇನ್ನೊಂದೆಡೆ ಕಾಮಗಾರಿ ಮುಗಿದರೂ ನಲ್ಲಿಗಳಲ್ಲಿ ಬಾರದ ಕಾವೇರಿ ನೀರು, ಡಾಂಬರಿಗಾಗಿ ಕಾದಿರುವ ರಸ್ತೆಗಳು...

ಇದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ 28 ಹಳ್ಳಿಗಳ ಸ್ಥಿತಿ. 2007ರಲ್ಲೇ ಬಿಬಿಎಂಪಿ ಸೇರ್ಪಡೆಗೊಂಡ ಈ ಹಳ್ಳಿಗಳಲ್ಲಿ ಮೂಲಸೌಕರ್ಯ ಕಾಮಗಾರಿ ಪೂರ್ಣಗೊಳ್ಳದೆ ಜನರು ರೋಸಿ ಹೋಗಿದ್ದಾರೆ.

ದಕ್ಷಿಣ ಬೆಂಗಳೂರು ಎಂದ ಕೂಡಲೇ ಸುಸಜ್ಜಿತ ಬಡಾವಣೆಗಳು ಎಂಬ ಕಲ್ಪನೆ ಕಣ್ಮುಂದೆ ಬರುತ್ತದೆ. ಆದರೆ, ಈ ವಿಧಾನಸಭಾ ಕ್ಷೇತ್ರದ ಚಿತ್ರಣವೇ ಬೇರೆ ಇದೆ. ಬಿಬಿಎಂಪಿ ಸೇರ್ಪಡೆಗೊಂಡ 110 ಹಳ್ಳಿಗಳಲ್ಲಿ 28 ಹಳ್ಳಿಗಳನ್ನು ಇದೊಂದೇ ಕ್ಷೇತ್ರ ಒಳಗೊಂಡಿದೆ. ಈ ಹಳ್ಳಿಗಳ ಸುತ್ತಲೂ ಹೊಸ ಹೊಸ ಬಡಾವಣೆಗಳು ಹೆಣೆದುಕೊಂಡಿವೆ.

ADVERTISEMENT

ಕೆಲವು ಹಳ್ಳಿಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದ್ದರೂ, ಕಾವೇರಿ ನೀರಿನ ಸಂಪರ್ಕ ಇನ್ನೂ ಲಭ್ಯವಾಗಿಲ್ಲ. ಒಳಚರಂಡಿ ಕಾಮಗಾರಿ ಬಹುತೇಕ ಹಳ್ಳಿಗಳಲ್ಲಿ ಮುಗಿದಿಲ್ಲ.

110 ಹಳ್ಳಿ ಯೋಜನೆಯ ಕಾಮಗಾರಿ ನಡೆಯುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿದ ‘ಪ್ರಜಾವಾಣಿ’ ತಂಡಕ್ಕೆ ದರ್ಶನವಾಗಿದ್ದು ಧೂಳು ತುಂಬಿದ ರಸ್ತೆಗಳು. ಬಸಾಪುರ ಮುಖ್ಯ ರಸ್ತೆಯಲ್ಲಿ ಹಾದು ಹೋಗಬೇಕೆಂದರೆ ಗಂಡೆದೆ ಬೇಕು ಎನ್ನುತ್ತಾರೆ ನಿವಾಸಿಗಳು. ಅಗೆದು ಬಿಟ್ಟಿರುವ ಈ ರಸ್ತೆಯೇ ಸುತ್ತಮುತ್ತಲ ಬಡಾವಣೆಗಳ ನಿವಾಸಿಗಳಿಗೆ ಇರುವ ಪ್ರಮುಖ ಸಂಚಾರ ಮಾರ್ಗ.

‘ಕಾರಿನ ಚಾಲಕರು ಕಿಟಕಿ ಗಾಜು ಏರಿಸಿಕೊಂಡು ಜೋರಾಗಿ ಹೊರಟರೆ, ದ್ವಿಚಕ್ರ ವಾಹನ ಚಾಲಕರು ಮತ್ತು ಪಾದಚಾರಿಗಳು ಧೂಳು ಮುಕ್ಕದೆ ಬೇರೆ ದಾರಿ ಇಲ್ಲ. ಈ ರಸ್ತೆಯಲ್ಲಿ ಹೋಗುವಾಗ ಬೆನ್ನಿಗೊಂದು ಆಮ್ಲಜನಕ ಸಿಲಿಂಡರ್ ಕಟ್ಟಿಕೊಳ್ಳುವುದು ಸೂಕ್ತ’ ಎಂದು ಪಾದಚಾರಿಗಳು ಹೇಳುತ್ತಾರೆ.

ಈ ಧೂಳು ಸೀಳಿಕೊಂಡು ಮುಂದೆ ಸಾಗಿದಾಗ ಚರಂಡಿ ಸ್ವಚ್ಛಗೊಳಿಸುವ ಕೆಲಸ ನೋಡಿಕೊಳ್ಳುತ್ತಿದ್ದ ಬಿಬಿಎಂಪಿ ಸಿಬ್ಬಂದಿ ಎದುರಾದರು. ‘ದಯವಿಟ್ಟು ಈ ರಸ್ತೆ ಬಗ್ಗೆ ಬರೆಯಿರಿ, ಜನ ಧೂಳು ಕುಡಿಯಲು ಆರಂಭವಾಗಿ ವರ್ಷವೇ ಕಳೆದಿದೆ. ಈ ರಸ್ತೆಯಲ್ಲಿ ಓಡಾಡಲು ಹೆದರಿ ಕೆಲಸವನ್ನೇ ಬಿಡಬೇಕೆಂಬ ಯೋಚನೆ ಮೂಡುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಿರಿಯ ಅಧಿಕಾರಿಯೊಬ್ಬರು ಅಸಹಾಯಕತೆ ತೋಡಿಕೊಂಡರು.

‘ಒಂದೆಡೆ ಬೇಗೂರಿನಿಂದ ಚಿಕ್ಕಬೇಗೂರಿಗೆ ಹೋಗುವ ರಸ್ತೆಯ ಸಂಪರ್ಕವೇ ಕಡಿತಗೊಂಡಿದೆ. ಮಳೆಯಲ್ಲಿ ಕೊಚ್ಚಿಹೋದ ಸೇತುವೆ ದುರಸ್ತಿ ಕಾರ್ಯ ಸ್ಥಗಿತಗೊಂಡಿದೆ. ಇನ್ನೊಂದೆಡೆ, ಚಿಕ್ಕಬೇಗೂರಿನ ಮುಖ್ಯ ರಸ್ತೆಯಲ್ಲಿ ಒಳಚರಂಡಿ ಕೆಲಸ ಮಾಡಿದ ಬಳಿಕ ರಸ್ತೆ ಅಭಿವೃದ್ಧಿ ಕಾಣದಾಗಿದೆ. ಎರಡು ವರ್ಷಗಳಿಂದ ಇದೇ ಸ್ಥಿತಿ ಎದುರಿಸುತ್ತಿದ್ದೇವೆ’ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

ಚಿಕ್ಕತೋಗೂರು, ಬೆರಟೇನ ಅಗ್ರಹಾರ, ಪರಪ್ಪನ ಅಗ್ರಹಾರ ಸೇರಿ 110 ಹಳ್ಳಿ ಯೋಜನೆ ಕಾಮಗಾರಿ ನಡೆಯುತ್ತಿರುವ ಬಡಾವಣೆಗಳ ಸ್ಥಿತಿ ಇದಕ್ಕೆ ಹೊರತಾಗಿಲ್ಲ.

‘ಹೆಚ್ಚುವರಿ ಅನುದಾನ ನಿರೀಕ್ಷೆ’
‘ನಮ್ಮ ಕ್ಷೇತ್ರದ 28 ಹಳ್ಳಿಗಳೂ ಗ್ರಾಮ ಪಂಚಾಯಿತಿಯಿಂದ ನೇರವಾಗಿ ಬಿಬಿಎಂಪಿಗೆ ಸೇರ್ಪಡೆಯಾದವು. ಹೀಗಾಗಿ, ಸಮಸ್ಯೆಗಳು ಹೆಚ್ಚಿಗೆ ಇವೆ’ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಹೇಳಿದರು.

ಗ್ರಾಮ ಪಂಚಾಯಿತಿಯಿಂದ ಪುರಸಭೆ, ನಗರಸಭೆಯಾಗಿ ಮೇಲ್ದರ್ಜೆಗೆ ಏರಿ ಕೊನೆಗೆ ಬಿಬಿಎಂಪಿಗೆ ಸೇರ್ಪಡೆಯಾದರೆ ಮೂಲ ಸೌಕರ್ಯ ಇರುತ್ತದೆ. ಆದರೆ, ಈ ಕ್ಷೇತ್ರದ ಪರಿಸ್ಥಿತಿ ಬೇರೆಯೇ ಇದೆ. ಒಳಚರಂಡಿ ಕಾಮಗಾರಿಯನ್ನು ಸಂಪೂರ್ಣ ಹೊಸದಾಗಿ ಮಾಡಲಾಗುತ್ತಿದೆ. ಇನ್ನೂ ಕೆಲವೆಡೆ ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳಬೇಕಿದೆ ಎಂದರು.

‘ಅಗೆದಿರುವ ರಸ್ತೆಗಳ ದುರಸ್ತಿಗೆ ಈಗ ನೀಡಿರುವ ಅನುದಾನ ಸಾಕಾಗುವುದಿಲ್ಲ. ಬೇರೆ ಕ್ಷೇತ್ರಗಳಿಗೆ ಎಷ್ಟು ಅನುದಾನ ಕೊಟ್ಟಿದ್ದಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಹೆಚ್ಚಿನ ಹಳ್ಳಿಗಳಿರುವ ಕಾರಣ ಹೆಚ್ಚುವರಿ ಅನುದಾನ ಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದೇನೆ’ ಎಂದು ಹೇಳಿದರು.

28 ಹಳ್ಳಿಗಳು
ಪಿಲ್ಲಗಾನಹಳ್ಳಿ, ಅಂಜನಾಪುರ, ಗೊಲ್ಲಹಳ್ಳಿ, ಕೆಂಬತ್ತಹಳ್ಳಿ, ತಿಪ್ಪಸಂದ್ರ, ಕಮ್ಮನಹಳ್ಳಿ, ಬಸವಾಪುರ, ಕಾಳೇನ ಅಗ್ರಹಾರ, ಬೇಗೂರು, ಎಳೇನಹಳ್ಳಿ, ಚಂದ್ರಶೇಖರಪುರ, ಆಲಹಳ್ಳಿ, ದೊಡ್ಡಕಲ್ಲಸಂದ್ರ, ಬಸಾಪುರ, ಚಿಕ್ಕತೋಗೂರು, ದೊಡ್ಡತೋಗೂರು, ಗೊಟ್ಟಿಗೆರೆ, ಬೆರಟೇನ ಅಗ್ರಹಾರ, ನಾಗನಾಥಪುರ, ಪರಪ್ಪನ ಅಗ್ರಹಾರ, ಕೂಡ್ಲು, ಗುಬ್ಬಲಾಳು, ವಸಂತಪುರ, ಸುಬ್ರಹ್ಮಣ್ಯಪುರ, ವಡ್ಡರಪಾಳ್ಯ, ಉತ್ತರಹಳ್ಳಿ, ಅರೇಹಳ್ಳಿ ಮತ್ತು ತುರಹಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.