ADVERTISEMENT

12ನೇ ಶತಮಾನಕ್ಕೆ ಸೇರಿದ ಮಾಸ್ತಿಗಲ್ಲು, ವೀರಗಲ್ಲು ಪತ್ತೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 19:30 IST
Last Updated 4 ಮಾರ್ಚ್ 2014, 19:30 IST

ನೆಲಮಂಗಲ: ತಾಲ್ಲೂಕಿನ ಬೂದಿಹಾಳ್‌ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾಚೋ ನಾಯಕನಹಳ್ಳಿ ಬಳಿ 12ನೇ ಶತಮಾನಕ್ಕೆ ಸೇರಿದ ಸ್ಮಾರಕಗಳನ್ನು ಪಟ್ಟಣದ ಸಿದ್ದಗಂಗಾ ಪದವಿ ಕಾಲೇಜಿನ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಪತ್ತೆ ಹಚ್ಚಿದರು.

ಸಿದ್ದಗಂಗಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಶಿಬಿರದಲ್ಲಿ ವಿದ್ಯಾ ರ್ಥಿಗಳು ಸ್ವಚ್ಛತಾ ಕಾರ್ಯ ದಲ್ಲಿದ್ದಾಗ 25ಅಡಿ ಸುತ್ತಳತೆಯುಳ್ಳ ವೃತ್ತಾಕಾರದ 8 ಸಮಾಧಿಗಳು, 12ನೇ ಶತಮಾನಕ್ಕೆ ಸೇರಿದ 2 ಮಾಸ್ತಿಗಲ್ಲು ಮತ್ತು 6ವಿಶಿಷ್ಟ  ವೀರಗಲ್ಲುಗಳು ಪತ್ತೆಯಾಗಿವೆ.

ಸ್ಥಳಕ್ಕಾಗಮಿಸಿದ ಇತಿಹಾಸ ತಜ್ಞ ಡಾ.ಎಚ್‌. ಎಸ್‌. ಗೋಪಾಲರಾವ್‌ ಪತ್ತೆಯಾಗಿರುವ ಶಿಲಾಶಾಸನಗಳು ಭಿನ್ನವಾಗಿದ್ದು, ಕುತೂಹಲ ಮೂಡಿಸುತ್ತದೆ. ಇವುಗಳು 12ನೇ ಶತಮಾನದ ಶಾಸನಗಳಾಗಿರಬಹುದು ಎಂದು ಅಂದಾಜಿಸಿದರು.

ಸುಮಾರು 7ಅಡಿ ಉದ್ದ, 4ಅಡಿ ಅಗಲ, ಒಂದು ಅಡಿ ದಪ್ಪವಿರುವ ಶಿಲೆಯ ಮುಂಭಾಗದಲ್ಲಿ ಮೂವರು ಜಠಾಧಾರಿ ವೀರ ಪುರುಷರ ಚಿತ್ರಗಳಿವೆ. ಉದ್ದನೆ ಜಡೆ ಹೊಂದಿರುವುದರಿಂದ  ಶೈವ ಪಂಥಕ್ಕೆ ಸೇರಿದ ಕುರುಹು ಇದಾ ಗಿರಬಹುದು. ಧಾರ್ಮಿಕ ಸಂಘರ್ಷದ ಸಂದರ್ಭದಲ್ಲಿ  ಮರಣ ಅಪ್ಪಿದ ವೀರರ ಚಿತ್ರಗಳಾಗಿರಬಹುದು ಎಂದು ಅಭಿಪ್ರಾ ಯಪಟ್ಟರು.

ಮಾಸ್ತಿಗಲ್ಲು: ಇದೇ ಭಾಗದ ನೈರುತ್ಯ ದಿಕ್ಕಿನಲ್ಲಿರುವ ಪಾಪಾ ಭೋವಿಪಾಳ್ಯದ ಬಳಿ ಹೊಲದ ಮಧ್ಯೆ ದೊಡ್ಡಗಾತ್ರದ 2 ಮಾಸ್ತಿಗಲ್ಲು (ಮಹಾಸತಿ ಗಲ್ಲು) ಪತ್ತೆಯಾಗಿದ್ದು, ಶಿಲೆಯ ತಳಭಾಗ ಮಣ್ಣಲ್ಲಿ ಹೂತಿರುವುದರಿಂದ ಇದರ ಮೇಲೆ ಶಾಸನ ಇದೆಯೆ? ಎಂಬುದನ್ನು ಪತ್ತೆಹಚ್ಚ ಬೇಕಿದೆ. ಇವು ಸಹ 12ನೇ ಶತಮಾನಕ್ಕೆ ಸೇರಿರಬ ಹುದು ಎಂದು ಊಹಿಸಿದರು.

ಒಂದು ಶಿಲೆಯಲ್ಲಿ ಆಯುಧಗಳನ್ನು ಹಿಡಿದ ಇಬ್ಬರು ಪುರುಷರ ಜೊತೆ ಹಂದಿ ಮತ್ತು ನಾಯಿಯ ಚಿತ್ರಗಳಿದ್ದು, ಹಂದಿ ಬೇಟೆಗೆ ಹೋಗಿ ಸಾವನ್ನ ಪ್ಪಿರಬಹುದು ಅದರ ಕುರುಹಾಗಿ ಈ ಶಿಲೆ ಕೆತ್ತಿರ ಬಹುದು, ಈವರೆಗೆ ಪತ್ತೆಯಾಗಿರುವ ಶಿಲೆಗಳಿಗಿಂತ ಇವು ವಿಭಿನ್ನವಾಗಿವೆ ಎಂದರು.

ವಿಶಿಷ್ಟ ಸಮಾಧಿಗಳು: ಮಾಚೋನಾ ಯಕನಹಳ್ಳಿ ಗ್ರಾಮದ ಪೂರ್ವಈಶಾನ್ಯ ದಿಕ್ಕಿನ ನೀಲಗಿರಿ ತೋಪಿನಲ್ಲಿ 20ರಿಂದ 30ಅಡಿ ಅಂತರದಲ್ಲಿ ಸುಮಾರು 25 ಅಡಿ ಸುತ್ತಳತೆಯುಳ್ಳ ದೊಡ್ಡ ದೊಡ್ಡ ಕಲ್ಲುಗಳಿಂದ ಜೋಡಿಸಲ್ಪಟ್ಟ ವೃತ್ತಾ ಕಾರದ 8ಕಲ್ಲುಗಳು ಪತ್ತೆಯಾ ಗಿದ್ದು ಇವು  ಶಿಲಾಯುಗಕ್ಕೆ ಸೇರಿದ ಸಮಾಧಿ ಗಳಾ ಗಿರಬಹುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.