ADVERTISEMENT

ಕೇಂದ್ರದಿಂದ ₹12 ಸಾವಿರ ಕೋಟಿ ಸಾಲ: ಬಸವರಾಜ ಬೊಮ್ಮಾಯಿ

ಜಿಎಸ್‌ಟಿ ಆಯ್ಕೆ 1 ರಡಿ ಸಾಲ ಪಡೆಯಲು ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 4:52 IST
Last Updated 17 ಅಕ್ಟೋಬರ್ 2020, 4:52 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಜಿಎಸ್‌ಟಿ ಮಂಡಳಿಯ ಸಲಹೆಯಂತೆ ಕೇಂದ್ರದಿಂದ ಸಾಲ ಪಡೆಯಲು (ಆಯ್ಕೆ1) ರಾಜ್ಯಸರ್ಕಾರ ನಿರ್ಧರಿಸಿದ್ದು, ಇದರಡಿ ₹12,407 ಕೋಟಿ ಸಾಲ ಪಡೆಯಲು ಅರ್ಹತೆ ಹೊಂದಿದೆ ಎಂದು ಜಿಎಸ್‌ಟಿ ಮಂಡಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರಾಜ್ಯಗಳ ಆರ್ಥಿಕ ಹೊರೆ ಇಳಿಸುವ ಉದ್ದೇಶದಿಂದ ಜಿಎಸ್‌ಟಿ ಪರಿಹಾರ ಸಂಬಂಧ ವಿಶೇಷ ಗವಾಕ್ಷಿ ಸಾಲ ಪಡೆಯಲು ಕೇಂದ್ರ ಸೂಚಿಸಿತ್ತು. ರಾಜ್ಯದಲ್ಲಿ ಕೋವಿಡ್‌ ನಿರ್ವಹಣೆ ಮತ್ತು ಆರ್ಥಿಕ ಪುನಶ್ಚೇತನಕ್ಕಾಗಿ ಹಣಕಾಸು ನೆರವು ಪಡೆಯಲು ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿಗೆ ನೀಡಿದ್ದಾರೆ ಎಂದು ಬೊಮ್ಮಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರದಿಂದ ಪಡೆದ ಸಾಲಕ್ಕೆ ಭವಿಷ್ಯದಲ್ಲಿ ಸೆಸ್‌ ಆದಾಯದಿಂದ ಪೂರ್ತಿ ಅಸಲು ಮತ್ತು ಬಡ್ಡಿಯನ್ನು ಭರಿಸಲಾಗುವುದು. ಇದರಿಂದಾಗಿ ರಾಜ್ಯದ ಆಯವ್ಯಯ ಸಂಪನ್ಮೂಲಗಳಿಂದ ಅಸಲು ಮತ್ತು ಬಡ್ಡಿ ಪಾವತಿಸಬೇಕಾಗಿಲ್ಲ ಎಂದೂ ಅವರು ಹೇಳಿದ್ದಾರೆ.

ADVERTISEMENT

ಅಲ್ಲದೆ, ರಾಜ್ಯದ ಪಾಲಿನ ಸಂಪೂರ್ಣ ಜಿಎಸ್‌ಟಿ ಪರಿಹಾರವನ್ನು ಪಾವತಿಸಲು ಮತ್ತು ಈ ಸಂಬಂಧದ ಎಲ್ಲ ಕಾನೂನಾತ್ಮಕ ಹೊಣೆಗಾರಿಕೆಗಳನ್ನು ನಿರ್ವಹಿಸಲೂ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಬಾಕಿ ಪರಿಹಾರ ಸಂಬಂಧ ಪರಿಹಾರ ಸೆಸ್‌ ವಿಧಿಸಲು 2022 ರ ಜುಲೈ ನಂತರವೂ ವಿಸ್ತರಿಸಲು ಜಿಎಸ್‌ಟಿ ಮಂಡಳಿ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.