
ಬೆಂಗಳೂರು: ‘ನಗರದಲ್ಲಿ ಪರಿಷೆ ಮತ್ತು ಕರಗಕ್ಕೆ ಜನ ಸೇರಿದಷ್ಟು ಬೇರೆ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಸೇರುವುದಿಲ್ಲ. ಬಸವನಗುಡಿಯಲ್ಲಿ ಪ್ರತಿವರ್ಷ ಎರಡು ದಿನ ನಡೆಯುತ್ತಿದ್ದ ಕಡಲೆಕಾಯಿ ಪರಿಷೆಯನ್ನು ಈ ಬಾರಿ ಐದು ದಿನಕ್ಕೆ ವಿಸ್ತರಿಸಲಾಗಿತ್ತು, ಒಟ್ಟು 12.50 ಲಕ್ಷ ಜನರು ಭಾಗವಹಿಸಿದ್ದರು’ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಬಸವನಗುಡಿ ದೊಡ್ಡಬಸವೇಶ್ವರ ದೇಗುಲ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಡಲೆಕಾಯಿ ಪರಿಷೆಯ ಯಶಸ್ಸಿಗೆ ಕಾರಣರಾದ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪರಿಷೆ ಹಾಗೂ ಕರಗ ಬೆಂಗಳೂರಿನ ಹೆಗ್ಗುರುತು. ಈ ಬಾರಿ ಪರಿಷೆಗೆ ಹೆಚ್ಚಿನ ಭಕ್ತರನ್ನು ಆಕರ್ಷಿಸಲು ದೀಪಾಲಂಕಾರ ಹಾಗೂ ಪುಷ್ಪಾಲಂಕಾರ ಮಾಡಲಾಗಿತ್ತು. ಇದು ಪರಿಷೆಗೆ ಬರುವವರ ಪ್ರಮಾಣವನ್ನು ಹೆಚ್ಚಿಸಿತು’ ಎಂದು ವಿವರಿಸಿದರು.
‘ವ್ಯಾಪಾರಸ್ಥರಿಗೆ ಅನುಕೂಲ ಆಗುವಂತೆ ಕರ ವಸೂಲಿಯನ್ನು ಎರಡು ವರ್ಷದಿಂದ ರದ್ದುಪಡಿಸಲಾಗಿದೆ. ಪ್ಲಾಸ್ಟಿಕ್ ನಿರ್ಬಂಧಿಸಲಾಗಿತ್ತು. ಆದರೂ ಪ್ಲಾಸ್ಟಿಕ್ ಬಳಸಿದ ಅಂಗಡಿಗಳಿಗೆ ದಂಡ ವಿಧಿಸಿ, ಆ ಅಂಗಡಿಗಳ ತೆರವಿಗೆ ಅಧಿಕಾರಿಗಳು ಕ್ರಮಕೈಗೊಂಡಿದ್ದರು’ ಎಂದರು.
ಪರಿಷೆ ಮುಗಿದ ಬಳಿಕ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಾಗ 135 ಟನ್ ಒಣ ಮತ್ತು ಹಸಿ ಕಸ ಸಂಗ್ರಹವಾಗಿತ್ತು. ತ್ಯಾಜ್ಯ ವಿಲೇವಾರಿ ಮಾಡಲಾಗಿದೆ ಎಂದು ಹೇಳಿದರು.
ಬಿಎಂಎಸ್ ಕಾಲೇಜಿನ ಗುತ್ತಿಗೆ ಅವಧಿ ಮುಗಿದಿತ್ತು. ಈಗ ಗುತ್ತಿಗೆ ನವೀಕರಣಗೊಂಡಿದ್ದು ಇನ್ನು ಮುಂದೆ ದೇವಸ್ಥಾನಕ್ಕೆ ಪ್ರತಿ ವರ್ಷ ₹ 4-5 ಕೋಟಿ ಆದಾಯ ಬರಲಿದೆ ಎಂದು ತಿಳಿಸಿದರು.
‘ಪರಿಷೆಗಾಗಿ 800 ಪೊಲೀಸರು ಕರ್ತವ್ಯ ನಿರ್ವಹಿಸಿದ್ದಾರೆ. ಜತೆಗೆ ಸ್ವಯಂಸೇವಾ ಸಂಘಟನೆಗಳು ಭಾಗವಹಿಸಿ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸಿವೆ. ಮುಂದಿನ ವರ್ಷ ದಾಖಲೆಯ ಪ್ರಮಾಣದಲ್ಲಿ ಭಕ್ತರು ಬರುವಂತೆ ನೋಡಿಕೊಳ್ಳಬೇಕಿದೆ’ ಎಂದರು.
ಎಐಸಿಸಿ ಕಾರ್ಯದರ್ಶಿ ಯು.ಬಿ. ವೆಂಕಟೇಶ್ ಮಾತನಾಡಿ, ‘ಮುಜರಾಯಿ ಸಚಿವರ ಅಧ್ಯಕ್ಷತೆಯಲ್ಲಿ ಈ ಬಾರಿಯ ಪರಿಷೆ ಬಹಳ ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ಜರುಗಿತು. ಮೂರೂವರೆ ಸಾವಿರ ವ್ಯಾಪಾರಸ್ಥರು ಮಳಿಗೆಗಳನ್ನು ಹಾಕಿದ್ದರು’ ಎಂದು ಹೇಳಿದರು.
ಮುಜರಾಯಿ ಇಲಾಖೆಯ ಆಯುಕ್ತ ಶರತ್, ಡಿಸಿಪಿ ಲೋಕೇಶ್ ಬಿ. ಜಗಲಾಸರ್, ಎಸಿಪಿ ಮಂಜುನಾಥ, ಉಮಾಶಂಕರ, ಪಶ್ಚಿಮ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಕೆ.ವಿ., ಎಇಇ ಶಶಿಕಲಾ, ಲೋಹಿತ್, ಸಚಿನ್ ಪಾಟೀಲ, ದೇವಸ್ಥಾನ ಸಿಬ್ಬಂದಿ ಭಾಗವಹಿಸಿದ್ದರು.
ಬೆಂಗಳೂರು ಕರಗಕ್ಕೆ ತಯಾರಿ..
ಬೆಂಗಳೂರು ಕರಗ 2026ರ ಏಪ್ರಿಲ್ ತಿಂಗಳಲ್ಲಿ ನಡೆಯಬಹುದು. ಆದ್ದರಿಂದ ಜನವರಿ ತಿಂಗಳಿಂದಲೇ ಕರಗದ ರೂಪುರೇಷೆ ತಯಾರಿಸಲಾಗುವುದು’ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು. ‘ಕಳೆದ ಬಾರಿ ಸಾಲು ಸಾಲು ರಜೆಗಳು ಬಂದಿದ್ದರಿಂದ ಹಣ ಬಿಡುಗಡೆಯಲ್ಲಿ ಅನನುಕೂಲವಾಗಿತ್ತು. ಈ ಬಾರಿ ಮುಂಚಿತವಾಗಿಯೇ ಹಣ ಬಿಡುಗಡೆ ಮಾಡಲಾಗುವುದು. ಕರಗಕ್ಕೆ ಬೇರೆ ರಾಜ್ಯದ ಜನರೂ ಬರುವಂತೆ ಮಾಡಲು ಯೋಜನೆ ರೂಪಿಸಲಾಗುವುದು. ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.