ಹುಬ್ಬಳ್ಳಿ ನಗರದ ಐಟಿ ಪಾರ್ಕ್
ಬೆಂಗಳೂರು: ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದ ಉದ್ಯೋಗಿಗಳಿಗೆ ದುಡಿಮೆಯ ಅವಧಿಯನ್ನು 14 ಗಂಟೆಗೆ ವಿಸ್ತರಿಸಬೇಕು ಎಂದು ಉದ್ಯಮಿಗಳು ರಾಜ್ಯ ಸರ್ಕಾರದ ಮುಂದೆ ಇಟ್ಟಿರುವ ಪ್ರಸ್ತಾವಕ್ಕೆ ವಿವಿಧ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಪ್ರಸ್ತುತ 12 ಗಂಟೆ ಇರುವ ಕೆಲಸದ ಅವಧಿಯನ್ನು 2 ಗಂಟೆ ಹೆಚ್ಚಿಸಿ 14 ಗಂಟೆಗೆ ವಿಸ್ತರಣೆ ಮಾಡಲು ಅನುಕೂಲವಾಗುವಂತೆ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ–1961ಕ್ಕೆ ತಿದ್ದುಪಡಿ ತರಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿವೆ.
ಈಗಲೇ 12 ಗಂಟೆ ಕೆಲಸ ಮಾಡಿ ಉದ್ಯೋಗಿಗಳು ಹೈರಾಣ ಆಗುತ್ತಿದ್ದಾರೆ. ಆರೋಗ್ಯದ ಸಮಸ್ಯೆಗಳು ಕಾಡುತ್ತಿವೆ. ಈಗ ದುಡಿಮೆಯ ಅವಧಿಯನ್ನು 14 ಗಂಟೆಗೆ ಏರಿಸುವ ಮೂಲಕ ಉದ್ಯೋಗಿಗಳನ್ನು ಹಿಂಡಿ ಹಿಪ್ಪೆ ಮಾಡಲು ಐಟಿ ಕಂಪನಿಗಳು ಹೊರಟಿವೆ ಎಂದು ಐಟಿ ಉದ್ಯೋಗಿ ಸೂರಜ್ ಬೇಸರ ವ್ಯಕ್ತಪಡಿಸಿದ್ದಾರೆ.
ಐಟಿ ಕಂಪನಿಗಳು ಸಲ್ಲಿಸಿರುವ ಪ್ರಸ್ತಾವವನ್ನು ಈಗ ಸರ್ಕಾರ ಒಪ್ಪದೇ ಇರಬಹುದು. ಮುಂದೆ ಒತ್ತಡಕ್ಕೆ ಮಣಿದು ಜಾರಿಗೆ ತರಬಹುದು. 8 ಗಂಟೆಯಿಂದ 12 ಗಂಟೆಗೆ ಏರಿಸಿರುವುದೇ ಕಾರ್ಮಿಕ ವಿರೋಧಿ ನೀತಿಯಾಗಿದ್ದು, ಇದೀಗ 14 ಗಂಟೆಗೆ ಏರಿಸುವ ಪ್ರಸ್ತಾವ ಕಾರ್ಮಿಕರ ಜೀವ ವಿರೋಧಿಯಾಗಿದೆ ಎಂದು ಎಐಯುಟಿಯುಸಿ ರಾಜ್ಯ ಘಟಕದ ಕಾರ್ಯದರ್ಶಿ ಕೆ. ಸೋಮಶೇಖರ್ ಯಾದಗಿರಿ ಟೀಕಿಸಿದ್ದಾರೆ.
ಕಾರ್ಮಿಕರ ಮೂಲಭೂತ ಹಕ್ಕಿನ ಮೇಲಿನ ಆಕ್ರಮಣ ಇದಾಗಿದೆ. ಉದ್ಯೋಗಿಗಳಿಗೆ ವೈಯಕ್ತಿಕ ಬದುಕು ಇಲ್ಲದಂತೆ ಮಾಡುವ ಹುನ್ನಾರ ಇದು. ದುಡಿಮೆಯ ಅವಧಿ ಹೆಚ್ಚಿಸಿದರೆ ಕಾರ್ಮಿಕರ ಕ್ಷಮತೆ ಕೂಡ ಕಡಿಮೆಯಾಗಲಿದೆ. ಜೊತೆಗೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಮೂರು ಪಾಳಿಗಳನ್ನು ಎರಡೇ ಪಾಳಿಗೆ ಇಳಿಸುವ ಈ ದುಷ್ಟ ಯೋಚನೆಯಿಂದ ಮೂರನೇ ಒಂದು ಭಾಗದಷ್ಟು ನೌಕರರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಸಿಐಟಿಯು ಮುಖಂಡರಾದ ಎಸ್. ವರಲಕ್ಷ್ಮೀ ಆತಂಕ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರವು ಕಾರ್ಖಾನೆ ಕಾಯ್ದೆಗೆ ತಿದ್ದುಪಡಿ ಸಹಿತ ವಿವಿಧ ಕಾನೂನುಗಳ ಮೂಲಕ ಕಾರ್ಮಿಕರ ಮೇಲೆ ಪ್ರಹಾರ ಮಾಡಿತ್ತು. ಇನ್ಫೊಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಸೇರಿದಂತೆ ಉದ್ಯಮಿಗಳ ಸಲಹೆಯನ್ನು ಆಧರಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಐಟಿ ಕಂಪನಿಗಳ ಪರವಾಗಿ ಉದಾರವಾದಿ ನೀತಿಯನ್ನು ರೂಪಿಸಿದೆ. ಕಾಂಗ್ರೆಸ್ ನೇತೃತ್ವದ ಈಗಿನ ರಾಜ್ಯ ಸರ್ಕಾರವು ಅದೇ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ದುಡಿಮೆ ಅವಧಿಯನ್ನು 14 ಗಂಟೆಗೆ ಏರಿಸುವ ಪ್ರಸ್ತಾವವನ್ನು ತಿರಸ್ಕರಿಸದೇ ಇದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.