ADVERTISEMENT

ನಾರಾಯಣ ಗುರು 167ನೇ ಜಯಂತಿ ಆಚರಣೆ

ಬಿಲ್ಲವ ಅಸೋಸಿಯೇಷನ್ ವತಿಯಿಂದ ಸಮಾಜಮುಖಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 19:58 IST
Last Updated 6 ಅಕ್ಟೋಬರ್ 2021, 19:58 IST
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಿಲ್ಲವ ಸಮುದಾಯದ ಜನರು
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಿಲ್ಲವ ಸಮುದಾಯದ ಜನರು   

ಬೊಮ್ಮನಹಳ್ಳಿ: ‘ಬೆಂಗಳೂರು ಬಿಲ್ಲವ ಅಸೋಸಿಯೇಷನ್ ದಶಕಗಳಿಂದ ನಡೆಸುತ್ತಿರುವ ಸಮಾಜಮುಖಿ ಕಾರ್ಯಗಳು ಮಾದರಿಯಾಗಿವೆ. ಸಮಾಜದ ಕಟ್ಟಕಡೆಯ ಜನರಿಗೆ ಸಹಾಯಹಸ್ತ ಚಾಚುತ್ತಿರುವುದು ಶ್ಲಾಘನೀಯ ಕಾರ್ಯ’ ಎಂದು ಇಂಧನ ಹಾಗೂ ಕನ್ನಡ– ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.

ಬೆಂಗಳೂರು ಬಿಲ್ಲವ ಅಸೋಸಿಯೇಷನ್ ವತಿಯಿಂದ ಬನ್ನೇರುಘಟ್ಟ ರಸ್ತೆಯ ಅರಕೆರೆಯಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮರ್ಷಿ ನಾರಾಯಣ ಗುರುಗಳ 167ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾರಾಯಣಗುರು ಶಾಲೆ ಪ್ರಾರಂಭಿಸಲು ಬೇಕಾದ ಒಂದು ಎಕರೆ ಜಾಗವನ್ನು ವಸತಿ ಸಚಿವರು ಮತ್ತು ಹೌಸಿಂಗ್ ಬೋರ್ಡ್ ಅಧಿಕಾರಿಗಳೊಂದಿಗೆ ಚರ್ಚಿಸಿ ಮಂಜೂರು ಮಾಡಿಸುವುದಾಗಿ ಸಚಿವರು ಭರವಸೆ ನೀಡಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಸೋಲೂರಿನ ಶ್ರೀನಾರಾಯಣಗುರು ಮಠದ ನಿಯೋಜಿತ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ, ‘ಬ್ರಹ್ಮಶ್ರೀ ನಾರಾಯಣ ಗುರುಗಳು ಮನುಕುಲದ ಉದ್ಧಾರವನ್ನು ಬಯಸಿದ್ದರು. ಅವರು ತೋರಿದ ದಾರಿಯಲ್ಲೇ ನಾವೆಲ್ಲರೂ ಸಾಗೋಣ’ ಎಂದರು.

ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ಎಂ.ವೇದಕುಮಾರ್, ‘ಬಡ ವಿದ್ಯಾರ್ಥಿಗಳಿಗೆ ವಿವಿಧ ರೀತಿ ಶೈಕ್ಷಣಿಕ ನೆರವು ನೀಡಲಾಗುತ್ತಿದೆ’ ಎಂದರು.

ರಾಜ್ಯ ಸರ್ಕಾರದ ಮುಖ್ಯ ಸಚೇತಕ ಎಂ. ಸತೀಶ್‌ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಮಾಜಿ ಸದಸ್ಯೆ ಭಾಗ್ಯಲಕ್ಷ್ಮಿ ಮುರಳಿ, ಕಾಂಗ್ರೆಸ್‌ ಮುಖಂಡ ವಿನಯಕುಮಾರ್ ಸೊರಕೆ, ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ಡಾ.ಎಂ.ತಿಮ್ಮೇಗೌಡ, ಜೆ.ಪಿ.ನಾರಾಯಣ ಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ಜೆ.ಪಿ.ಸುಧಾಕರ್, ಶ್ರೀ ಬ್ರಹ್ಮಶ್ರೀ ನಾರಾಯಣಗುರು ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಇದ್ದರು. ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮೂಡ ಅಧ್ಯಕ್ಷ ರವಿಶಂಕರ್ ಮಿಜಾರ್‌ ಅವರನ್ನು ಸನ್ಮಾನಿಸಲಾಯಿತು. ಸಮಾಜದ 132 ಬಡ ವಿದ್ಯಾರ್ಥಿಗಳಿಗೆ ಧನ ಸಹಾಯದ ಚೆಕ್ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.