ADVERTISEMENT

18ರಿಂದ ಮತ್ಸ್ಯಮೇಳ 2011

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 20:20 IST
Last Updated 14 ಫೆಬ್ರುವರಿ 2011, 20:20 IST

ಬೆಂಗಳೂರು: ‘ರಾಜ್ಯ ಮೀನುಗಾರಿಕೆ ಇಲಾಖೆ ಇದೇ 18ರಿಂದ ನಾಲ್ಕು ದಿನಗಳ ಕಾಲ ‘ಮತ್ಸ್ಯಮೇಳ 2011- ಕರ್ನಾಟಕ’ ಕಾರ್ಯಕ್ರಮವನ್ನು ಆಯೋಜಿಸಿದೆ. ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ 24ರವರೆಗೆ ಮೇಳ ನಡೆಯಲಿದೆ.

ಮೀನುಕೃಷಿಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಪರಿಚಯಿಸುವ ಜತೆಗೆ ರೈತರು, ಖಾಸಗಿ ಕಂಪೆನಿಗಳು, ವಿಜ್ಞಾನಿಗಳು, ವಿದ್ಯಾರ್ಥಿಗಳು ಹಾಗೂ ಜನ ಸಾಮಾನ್ಯರಿಗೆ ಮೀನುಗಾರಿಕೆ ಕುರಿತು ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ.

ಮೇಳದಲ್ಲಿ ದೇಶದ ವಿವಿಧ ಸರ್ಕಾರಿ ಸಂಸ್ಥೆ, ಖಾಸಗಿ ಕಂಪೆನಿಗಳ ಮಳಿಗೆಗಳು ಇರಲಿದ್ದು ಆಲಂಕಾರಿಕ ಮೀನುಗಳ ಗ್ಯಾಲರಿ, ಸ್ವ ಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳು, ಮೀನಿನ ತಿನಿಸು, ಖಾದ್ಯ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಸಮುದಾಯ ಬೇಸಾಯ, ಆಹಾರ ಆಧಾರಿತ ಮೀನು ಕೃಷಿ, ರಫ್ತು ಉತ್ತೇಜನ, ಉಪಗ್ರಹ ನೆರವು, ತಳಿ ಅಭಿವೃದ್ಧಿ ಕುರಿತು ಮೇಳದಲ್ಲಿ ವಿಚಾರ ಮಂಥನಗಳು ನಡೆಯಲಿವೆ. ಮೇಳದಲ್ಲಿ ಸುಮಾರು 3 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ.

ಮೀನುಕೃಷಿ ಚಟುವಟಿಕೆಗಳ ಜೀವಂತ ಮಾದರಿಗಳು, ಆಲಂಕಾರಿಕ ಮೀನುಗಳ ಪ್ರದರ್ಶನ ಮತ್ತು ಮಾರಾಟ ಮತ್ತು ಆಕ್ವೇರಿಯಂ ಸ್ಪರ್ಧಾ ಗ್ಯಾಲರಿ, ವಿವಿಧ ಸರ್ಕಾರಿ ಮತ್ತು ಸಂಶೋಧನಾ ಸಂಸ್ಥೆಗಳ ಕಾರ್ಯವ್ಯಾಪ್ತಿ ಸೌಲಭ್ಯ ಹಾಗೂ ತಂತ್ರಜ್ಞಾನಗಳ ಪರಿಚಯ, ಖಾಸಗಿ ಸಂಸ್ಥೆಗಳ ಭಾಗವಹಿಸುವಿಕೆ, ಮೀನಿನ ತಿನಿಸು ಮತ್ತು ಖಾದ್ಯ ಪದಾರ್ಥಗಳ ಮಾರಾಟ, ವೈಜ್ಞಾನಿಕ ಮೀನುಗಾರಿಕೆಯ ವೀಡಿಯೊ ಚಿತ್ರ ಪ್ರದರ್ಶನ ಹಾಗೂ ಮನರಂಜನಾ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.