ADVERTISEMENT

ಸುರಂಗ ರಸ್ತೆ: ಕಿ.ಮೀ.ಗೆ ₹19 ನಿಗದಿ

ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ವರೆಗಿನ ಸಂಚಾರಕ್ಕೆ 45 ನಿಮಿಷ

ಆರ್. ಮಂಜುನಾಥ್
Published 2 ಜುಲೈ 2025, 0:42 IST
Last Updated 2 ಜುಲೈ 2025, 0:42 IST
‘ಸುರಂಗ ರಸ್ತೆ’ಯ ಮಾದರಿ
‘ಸುರಂಗ ರಸ್ತೆ’ಯ ಮಾದರಿ   

ಬೆಂಗಳೂರು: ನಗರದಲ್ಲಿ 2030ರ ವೇಳೆಗೆ ನಿರ್ಮಾಣವಾಗಲಿರುವ ಸುರಂಗ ರಸ್ತೆಯಿಂದಾಗಿ ಹೆಬ್ಬಾಳ– ಸಿಲ್ಕ್‌ಬೋರ್ಡ್‌ ನಡುವಿನ ಸಂಚಾರ ಸಮಯ ಅರ್ಧದಷ್ಟು ಕಡಿಮೆಯಾಗಲಿದೆ. ಆದರೆ, ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ಪ್ರತಿ ಕಿ.ಮೀಗೆ ₹19 ಪಾವತಿಸಬೇಕಾಗುತ್ತದೆ. 

ಸುಮಾರು ₹18 ಸಾವಿರ ಕೋಟಿ ವೆಚ್ಚದಲ್ಲಿ ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ ನಡುವಿನ ಸುರಂಗ ರಸ್ತೆ ಬೂಟ್‌ (ಅಭಿವೃದ್ಧಿ, ಕಾರ್ಯಾಚರಣೆ, ವರ್ಗಾವಣೆ) ಆಧಾರದಲ್ಲಿ ನಿರ್ಮಾಣವಾಗಲಿದೆ. ಸುರಂಗ ರಸ್ತೆಯಲ್ಲಿ ಪೂರ್ಣವಾಗಿ ಒಂದು ಬಾರಿ ಸಂಚರಿಸಲು ಸುಮಾರು ₹317 ಶುಲ್ಕ ಪಾವತಿಸಬೇಕಾಗುತ್ತದೆ.

ಮೂಲಸೌಕರ್ಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪ್ರತಿ ವರ್ಷ ಒದಗಿಸಲಿರುವ ₹7 ಸಾವಿರ ಕೋಟಿ ಅನುದಾನದಲ್ಲಿ ಬೃಹತ್‌ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ವಿಶೇಷ ಉದ್ದೇಶದ ಸಂಸ್ಥೆ (ಎಸ್‌ಪಿವಿ)– ‘ಬೆಂಗಳೂರು ಸ್ಮಾರ್ಟ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಸಂಸ್ಥೆ’ (ಬಿ–ಸ್ಮೈಲ್‌) ಅನ್ನು ಸ್ಥಾಪಿಸಲಾಗಿದೆ. ಬಿ–ಸ್ಮೈಲ್‌ ಮೂಲಕವೇ ಸುರಂಗ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. 

ADVERTISEMENT

ಯೋಜನೆಗೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಿದ್ದು, ಹಣಕಾಸು ಇಲಾಖೆಯ ಸಮ್ಮತಿಗಾಗಿ ಕಾಯಲಾಗುತ್ತಿದೆ. ಒಪ್ಪಿಗೆ ದೊರೆತ ನಂತರ ಜಾಗತಿಕ ಟೆಂಡರ್‌ ಆಹ್ವಾನಿಸಿ, ಮೂರು ವರ್ಷದೊಳಗೆ ಸುರಂಗ ರಸ್ತೆ ನಿರ್ಮಿಸುವ ಗುರಿ ಹೊಂದಲಾಗಿದೆ.

ಸುರಂಗ ರಸ್ತೆಯ ಎರಡೂ ಬದಿಯ ಉದ್ದ 33.49 ಕಿ.ಮೀ. ಇದನ್ನು 26 ತಿಂಗಳಲ್ಲಿ ಕೊರೆಯಲಾಗುತ್ತದೆ. ನಂತರ 12 ತಿಂಗಳಲ್ಲಿ ನಿರ್ಮಾಣ ಕಾಮಗಾರಿ ನಡೆಯಲಿದೆ ಎಂದು ಸಚಿವ ಸಂಪುಟದ ಟಿಪ್ಪಣಿಯಲ್ಲಿ ವಿವರಿಸಿದ್ದು, ಅದಕ್ಕೆ ಸಮ್ಮತಿಯೂ ದೊರೆತಿದೆ.

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಹೆಬ್ಬಾಳದಿಂದ ರೇಷ್ಮೆ ಮಂಡಳಿಯವರೆಗಿನ  ‘ಸುರಂಗ ರಸ್ತೆ’ ಯೋಜನೆಗೆ 2024ರ ಸೆಪ್ಟೆಂಬರ್, ಡಿಸೆಂಬರ್ ಹಾಗೂ 2025ರ ಫೆಬ್ರುವರಿ ಅಂತ್ಯದೊಳಗೆ ಟೆಂಡರ್‌ ಕರೆಯಲಾಗುತ್ತದೆ ಎಂದು ಹಲವು ಬಾರಿ ಹೇಳಿಕೆ ನೀಡಿದ್ದರು. ಡಿಪಿಆರ್‌ ಸಿದ್ಧಪಡಿಸಿದ್ದ ಸಂಸ್ಥೆಯೊಂದು ಮುಂಬೈ ಯೋಜನೆಯೊಂದಕ್ಕೆ ಸಿದ್ಧಪಡಿಸಿದ್ದ ಹಾಳೆಗಳನ್ನೂ ಸೇರಿಸಿ, ಪಾಲಿಕೆಗೆ ನೀಡಿತ್ತು. ಅದು ‘ಒಂದು ಹಾಳೆ ಅಷ್ಟೆ’ ಎಂದು ಎಂಜಿನಿಯರ್‌ಗಳು ಸಮಜಾಯಿಷಿಯನ್ನೂ ನೀಡಿದ್ದರು. ನಂತರ ಡಿಪಿಆರ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ, ಆಗುತ್ತಲೂ ಇವೆ. ಆದರೆ, ಹಲವು ತಾಂತ್ರಿಕ ಕಾರಣಗಳಿಂದಾಗಿ ಟೆಂಡರ್‌ ಆಹ್ವಾನಿಸಲು ಇನ್ನೂ ಸಾಧ್ಯವಾಗಿಲ್ಲ ಎಂದು ಬಿಬಿಎಂಪಿ ಎಂಜಿನಿಯರ್‌ಗಳು ಸಬೂಬು ನೀಡುತ್ತಿದ್ದಾರೆ.

ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ವರೆಗಿನ ಸುರಂಗ ರಸ್ತೆಯ ನಕ್ಷೆ
ಕೆ.ಆರ್‌. ಪುರದಿಂದ ನಾಯಂಡಳ್ಳಿವರೆಗಿನ ಸುರಂಗ ರಸ್ತೆಯ ನಕ್ಷೆ

‘ವಿನ್ಯಾಸ ವೇಗ’ ವ್ಯವಸ್ಥೆ: ಪ್ರಹ್ಲಾದ್‌

‘ಪ್ರತಿ ಗಂಟೆಗೆ 80 ಕಿ.ಮೀ ವೇಗದಲ್ಲಿ ಸಂಚರಿಸಬಹುದಾದ ‘ವಿನ್ಯಾಸ ವೇಗ’ ವ್ಯವಸ್ಥೆಯಲ್ಲಿ ಸುರಂಗ ರಸ್ತೆಯನ್ನು ನಿರ್ಮಿಸಲಾಗುತ್ತದೆ. ಹಾಗೆಂದು 80 ಕಿ.ಮೀ ವೇಗದಲ್ಲೇ ಸಂಚರಿಸಬಹುದು ಎಂದೇನೂ ಇಲ್ಲ.  ನಗರಗಳಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಚಾಲನೆ ಮಾಡುತ್ತಾರೆ. ಮುಂದಿನ ವಾಹನ 30 ಕಿ.ಮೀ.ನಲ್ಲಿ ಚಲಿಸಿದರೆ ನೀವು 60 ಕಿ.ಮೀ ವೇಗದಲ್ಲಿ ಹೋಗಲು ಸಾಧ್ಯವಿಲ್ಲ. ವೃದ್ಧರು ಮಹಿಳೆಯರು ಸೇರಿದಂತೆ ಹಲವರು ಭಿನ್ನವಾಗಿ ವಾಹನ ಚಾಲನೆ ಮಾಡುತ್ತಾರೆ. ಹೀಗಾಗಿ 16 ಕಿ.ಮೀ ದೂರವನ್ನು ಸುರಂಗ ರಸ್ತೆಯಲ್ಲಿ ಇಷ್ಟೇ ಸಮಯದಲ್ಲಿ ಕ್ರಮಿಸಬಹುದು ಎಂದು ಹೇಳಲು ಸಾಧ್ಯವಿಲ್ಲ. ಒಂದೇ ರೀತಿಯ ವೇಗದಲ್ಲಿ ಹೋಗಲು ಇದೇನು ರಾಷ್ಟ್ರೀಯ ಹೆದ್ದಾರಿ ಅಲ್ಲ. ಈಗ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ರಸ್ತೆಯಲ್ಲಿ ಸರಾಸರಿ ಗಂಟೆಗೆ 8 ಕಿ.ಮೀ ವೇಗದಲ್ಲಿ ವಾಹನಗಳು ಸಂಚರಿಸುತ್ತಿವೆ. ಇದನ್ನು ಪರಿಗಣಿಸಿ ಈಗಿನ 90 ನಿಮಿಷದ ಅವಧಿ 45 ನಿಮಿಷವಾಗಲಿದೆ ಎಂದು ಹೇಳುತ್ತಿದ್ದೇವೆ. ಸುರಂಗ ರಸ್ತೆಯಲ್ಲಿ 2030ರಿಂದ ಪ್ರತಿ ಕಿ.ಮೀಗೆ ₹19 ಶುಲ್ಕವನ್ನು ಸಂಗ್ರಹಿಸಲು ಅಂದಾಜಿಸಲಾಗಿದೆ’ ಎಂದು ಬಿ–ಸ್ಮೈನ್‌ನ ತಾಂತ್ರಿಕ ನಿರ್ದೇಶಕ ಬಿ.ಎಸ್‌. ಪ್ರಹ್ಲಾದ್‌ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.