ADVERTISEMENT

2ಜಿ ತರಂಗಾಂತರ ಹಗರಣಕ್ಕೆ ಮಾರನ್ ಮೂಲ: ಜೋಷಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2011, 19:30 IST
Last Updated 26 ಜೂನ್ 2011, 19:30 IST
2ಜಿ ತರಂಗಾಂತರ ಹಗರಣಕ್ಕೆ ಮಾರನ್ ಮೂಲ: ಜೋಷಿ
2ಜಿ ತರಂಗಾಂತರ ಹಗರಣಕ್ಕೆ ಮಾರನ್ ಮೂಲ: ಜೋಷಿ   

ಬೆಂಗಳೂರು: ಕೇಂದ್ರ ದೂರಸಂಪರ್ಕ ಖಾತೆಯ ಮಾಜಿ ಸಚಿವ ದಯಾನಿಧಿ ಮಾರನ್ ಅವರೇ 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಮೂಲ ಕಾರಣರಾಗಿದ್ದು, ಪ್ರಧಾನಿಯವರ ಮೌನ ಹಗರಣ ಮುಂದುವರಿಯಲು ಸಹಕಾರ ನೀಡಿತ್ತು ಎಂದು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷ, ಬಿಜೆಪಿ ಹಿರಿಯ ಮುಖಂಡ ಡಾ.ಮುರಳಿ ಮನೋಹರ ಜೋಷಿ ಆರೋಪಿಸಿದರು.

ಕೇಂದ್ರ ಸರ್ಕಾರದ ಹಗರಣಗಳು ಹಾಗೂ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಆರಂಭಿಸಿರುವ `ಜನಸಂಘರ್ಷ ಅಭಿಯಾನ~ದ ಅಂಗವಾಗಿ ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, `ಮಾರನ್ ಅವರು ಸಂಪುಟ ಸಭೆಯ ನಿರ್ಣಯ ಉಲ್ಲಂಘಿಸಿ ತೀರ್ಮಾನ ಕೈಗೊಂಡಿದ್ದೇ ಹಗರಣಕ್ಕೆ ನಾಂದಿಯಾಯಿತು~ ಎಂದು ದೂರಿದರು.


1994ರಿಂದಲೂ ದೂರಸಂಪರ್ಕ ಕ್ಷೇತ್ರದಲ್ಲಿ ತರಂಗಾಂತರ ಹಂಚಿಕೆ ಪ್ರಕ್ರಿಯೆ ನಡೆದಿದೆ. ಎಲ್ಲ ಸಂದರ್ಭಗಳಲ್ಲೂ ತರಂಗಾಂತರಕ್ಕೆ ದರ ನಿಗದಿ ಮಾಡುವ ಅಧಿಕಾರವನ್ನು ದೂರಸಂಪರ್ಕ ಖಾತೆ ಮತ್ತು ಹಣಕಾಸು ಖಾತೆ ಸಚಿವರಿಗೆ ಜಂಟಿಯಾಗಿ ನೀಡಲಾಗಿತ್ತು. ಈ ಬಗ್ಗೆ ಸಂಪುಟ ಸಭೆಯಲ್ಲೇ ನಿರ್ಣಯ ಕೈಗೊಳ್ಳಲಾಗುತ್ತಿತ್ತು. ಆದರೆ ಮಾರನ್ ಸಚಿವರಾದ ಬಳಿಕ ಹಣಕಾಸು ಸಚಿವರನ್ನು ದೂರ ಇಟ್ಟು, ತಾವೊಬ್ಬರೇ ನಿರ್ಧಾರ ಕೈಗೊಂಡರು. ಇದು ಅಕ್ರಮಗಳಿಗೆ ಕಾರಣವಾಯಿತು ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಆರ್.ಅಶೋಕ, ಸಂಸದ ಡಿ.ವಿ.ಸದಾನಂದಗೌಡ, ಮೇಯರ್ ಪಿ.ಶಾರದಮ್ಮ, ಬಿಜೆಪಿ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಸುಬ್ಬನರಸಿಂಹ, ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಮತ್ತಿತರರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT