ADVERTISEMENT

₹2 ಲಕ್ಷಕ್ಕೆ ಬೇಡಿಕೆ: ಇನ್‌ಸ್ಪೆಕ್ಟರ್‌ ಅಮಾನತು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 19:30 IST
Last Updated 4 ಅಕ್ಟೋಬರ್ 2017, 19:30 IST

ಬೆಂಗಳೂರು: ವಶದಲ್ಲಿದ್ದ ಮೂವರು ವ್ಯಕ್ತಿಗಳನ್ನು ಬಿಡುಗಡೆ ಮಾಡಲು ₹2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ತಿಲಕ್‌ನಗರ ಠಾಣೆಯ ಇನ್‌ಸ್ಪೆಕ್ಟರ್‌ ತನ್ವೀರ್‌ ಹಾಗೂ ಮುಖ್ಯ ಕಾನ್‌ಸ್ಟೆಬಲ್‌ ರಾಘವೇಂದ್ರ ಅವರನ್ನು ಬುಧವಾರ ಅಮಾನತು ಮಾಡಲಾಗಿದೆ.

‘ಠಾಣೆ ವ್ಯಾಪ್ತಿಯ ಬಾರೊಂದರಲ್ಲಿ ನಿಗದಿತ ಅವಧಿ ಮುಗಿದರೂ ವ್ಯಾಪಾರ ನಡೆಯುತ್ತಿತ್ತು. ಅಲ್ಲಿಗೆ ಹೋಗಿದ್ದ ಇನ್‌ಸ್ಪೆಕ್ಟರ್‌ ಹಾಗೂ ಮುಖ್ಯ ಕಾನ್‌ಸ್ಟೆಬಲ್‌, ಮೂವರನ್ನು ಹಿಡಿದುಕೊಂಡು ಬಂದು ರಾತ್ರಿಯಿಡಿ ಠಾಣೆಯಲ್ಲಿ ಇರಿಸಿಕೊಂಡಿದ್ದರು. ಅವರನ್ನು ಬಿಡಿಸಿಕೊಳ್ಳಲು ಬೆಳಿಗ್ಗೆ ಬಾರ್‌ ಮಾಲೀಕರು ಠಾಣೆಗೆ ಬಂದಾಗ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಬಂದ ದೂರಿನನ್ವಯ ಪ್ರಾಥಮಿಕ ತನಿಖೆ ನಡೆಸಿ, ಅವರಿಬ್ಬರನ್ನು ಅಮಾನತು ಮಾಡಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇತ್ತೀಚೆಗೆ ಸಭೆ ನಡೆಸಿದ್ದ ಗೃಹ ಸಚಿವರು, ಹಲವು ಸೂಚನೆಗಳನ್ನು ನೀಡಿದ್ದಾರೆ. ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು, ಅಪರಾಧಗಳಿಗೆ ಕಡಿವಾಣ ಹಾಕುವಂತೆ ಎಲ್ಲ ಪೊಲೀಸ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಯಾರಾದರೂ ಕರ್ತವ್ಯಲೋಪ ಎಸಗಿದರೆ ಕಠಿಣ ಕ್ರಮ ಕೈಗೊಳ್ಳುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.