ADVERTISEMENT

ನಿತ್ಯ 2 ಲಕ್ಷ ಲೀಟರ್‌ ನೀರು ಉಳಿತಾಯ!

ರೈಲು ಗಾಲಿ ಕಾರ್ಖಾನೆಯಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ

ಚಿರಂಜೀವಿ ಕುಲಕರ್ಣಿ
Published 12 ನವೆಂಬರ್ 2018, 20:15 IST
Last Updated 12 ನವೆಂಬರ್ 2018, 20:15 IST
ರೈಲು ಗಾಲಿ ಕಾರ್ಖಾನೆಯಲ್ಲಿ ಮಾಡಲಾದ ಮಳೆ ನೀರು ಸಂಗ್ರಹದ ವ್ಯವಸ್ಥೆ
ರೈಲು ಗಾಲಿ ಕಾರ್ಖಾನೆಯಲ್ಲಿ ಮಾಡಲಾದ ಮಳೆ ನೀರು ಸಂಗ್ರಹದ ವ್ಯವಸ್ಥೆ   

ಬೆಂಗಳೂರು: ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಯಲಹಂಕದ ರೈಲು ಗಾಲಿ ಕಾರ್ಖಾನೆ ಇದೀಗ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಇದರಿಂದ ಕಾರ್ಖಾನೆಯ ನಾಲ್ಕು ಬಾವಿಗಳು ನೀರಿನಿಂದ ತುಂಬಿಕೊಂಡಿದ್ದು, ಪ್ರತಿದಿನ ಜಲಮಂಡಳಿಯಿಂದ ಪಡೆಯುತ್ತಿದ್ದ 2 ಲಕ್ಷ ಲೀಟರ್ ನೀರು ಉಳಿತಾಯವಾಗಿದೆ.

ರೈಲು ಗಾಲಿ ಕಾರ್ಖಾನೆಯ ಬಾವಿಗಳು ಬೇಸಿಗೆಯಲ್ಲೂ ನೀರು ಪೂರೈಸುವಷ್ಟು ಸಮೃದ್ಧವಾಗಿವೆ.

1984ರಲ್ಲಿ ಕಾರ್ಖಾನೆ ಆರಂಭವಾದಾಗಿನಿಂದ 2 ಲಕ್ಷ ಗಾಲಿ ಹಾಗೂ 75 ಸಾವಿರ ಅಚ್ಚುಗಳನ್ನು ಉತ್ಪಾದನೆ ಮಾಡಲಾಗಿದೆ. ಬಿಸಿ ಲೋಹವನ್ನು ತಂಪಾಗಿಸಲು ಸಾಕಷ್ಟು ನೀರಿನ ಅವಶ್ಯಕತೆ ಇದೆ.

ADVERTISEMENT

ಕಾರ್ಖಾನೆಗೆ ದಿನಕ್ಕೆ 3 ಲಕ್ಷ ಲೀಟರ್‌ ನೀರಿನ ಅಗತ್ಯವಿದೆ. ಇದರಲ್ಲಿ 2 ಲಕ್ಷ ಲೀಟರ್ (ಸಂಸ್ಕರಿತ) ನೀರನ್ನು ಜಲಮಂಡಳಿಯಿಂದ ಪಡೆದುಕೊಳ್ಳುತ್ತಿತ್ತು. ಆದರೆ, ಜಲಮಂಡಳಿಯಿಂದ ಪಡೆಯುವ ನೆರವನ್ನು 2017ರಿಂದಲೇ ಸಂಪೂರ್ಣವಾಗಿ ನಿಲ್ಲಿಸಿರುವ ಕಾರ್ಖಾನೆ, ಜಲ ಸ್ವಾವಲಂಬನೆ ಸಾಧಿಸಿದೆ. ಇದರಿಂದ ಪ್ರತಿ ತಿಂಗಳು ನೀರಿನ ಬಿಲ್‌ನಲ್ಲಿ ₹10 ಲಕ್ಷ ಉಳಿತಾಯ ಆಗುತ್ತಿದೆ.

‘ನಗರದಲ್ಲಿ ವರ್ಷಕ್ಕೆ ಸರಾಸರಿ 948 ಮಿ.ಮೀ ಮಳೆಯಾಗುತ್ತದೆ. ಕಾರ್ಖಾನೆ 191 ಎಕರೆಗಳಷ್ಟು ಪ್ರದೇಶದಲ್ಲಿ ಹರಡಿದೆ. ಈ ಪ್ರದೇಶದಲ್ಲಿ ಕಾರ್ಖಾನೆಗೆ ಅಗತ್ಯವಾದ ಪ್ರಮಾಣದಷ್ಟು ನೀರು ಸಂಗ್ರಹವಾಗುತ್ತದೆ’ ಎಂದು ಮುಖ್ಯ ಎಂಜಿನಿಯರ್‌ ಅಜಯ್‌ ಸಿಂಗ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾರ್ಖಾನೆಯಲ್ಲಿ ಇದ್ದ ನಾಲ್ಕು ಕೊಳವೆ ಬಾವಿಗಳಲ್ಲಿ ಮೂರು ಕೆಲಸ ಮಾಡುತ್ತಿರಲಿಲ್ಲ. ಕಾರ್ಖಾನೆಯ ಕೆಲಸಗಾರರು ವಾರದಲ್ಲಿ ಮೂರರಿಂದ ನಾಲ್ಕು ಗಂಟೆ ಕೆಲಸ ಮಾಡಿ, ಎಲ್ಲ ಕೊಳವೆ ಬಾವಿಗಳಲ್ಲೂ ನೀರು ಉಕ್ಕುವಂತೆ ಮಾಡಿದ್ದಾರೆ’ ಎಂದು ಅಭಿಮಾನದಿಂದ ಹೇಳಿದರು.

ಸಂಗ್ರಹವಾಗಿದ್ದ ಮಳೆ ನೀರು ಪರಿಶುದ್ಧವಾಗಿದೆ. ಹೆಚ್ಚುವರಿ ನೀರನ್ನು ಹತ್ತಿರದ ಕೆರೆಗೆ ಬಿಡಲಾಗಿದೆ. ‘ಕಳೆದ ತಿಂಗಳು ಹೆಚ್ಚು ಮಳೆಯಾಗಿದ್ದರಿಂದ ನೀರು ಸಂಗ್ರಹ ಕೂಡ ಹೆಚ್ಚಿತ್ತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.