ADVERTISEMENT

20ರಿಂದ ನಮ್ಮ ಮೆಟ್ರೊ ಸೇವೆ ಆರಂಭ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 19:30 IST
Last Updated 14 ಅಕ್ಟೋಬರ್ 2011, 19:30 IST

ಬೆಂಗಳೂರು: `ನಮ್ಮ ಮೆಟ್ರೊ~ ರೈಲು ಸೇವೆಯ ಉದ್ಘಾಟನೆ ಅಕ್ಟೋಬರ್ 20ರಂದು ಬೆಳಿಗ್ಗೆ 10.30ಕ್ಕೆ ನೆರವೇರಲಿದೆ. ಕೇಂದ್ರ ನಗರಾಭಿವೃದ್ಧಿ ಸಚಿವ ಕಮಲ್‌ನಾಥ್ ಅವರು ಎಂ.ಜಿ.ರಸ್ತೆಯಿಂದ ಬೈಯಪ್ಪನಹಳ್ಳಿಗೆ ತೆರಳುವ ಮೊದಲ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸುವರು.

ಬಳಿಕ ಉದ್ಘಾಟನೆಯ ಸಭಾ ಕಾರ್ಯಕ್ರಮ ಮಾಣೆಕ್‌ಷಾ ಪರೇಡ್ ಮೈದಾನದಲ್ಲಿ ಮುಂದುವರೆಯಲಿದೆ. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ರೈಲ್ವೆ ಸಚಿವ ದಿನೇಶ್ ತ್ರಿವೇದಿ, ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ, ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಎಂ.ವೀರಪ್ಪ ಮೊಯಿಲಿ, ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಜಪಾನ್‌ನ ಭಾರತೀಯ ರಾಯಭಾರಿ ಅಕಿತಾಕ ಸೈಕಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಅಂದು ಸಂಜೆ 4ರಿಂದ ಸಾರ್ವಜನಿಕರಿಗಾಗಿ ನಿಯಮಿತ ರೈಲು ಸೇವೆ ಆರಂಭಗೊಳ್ಳಲಿದ್ದು, ಪ್ರತಿ 10 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ.

ಎಂ.ಜಿ.ರಸ್ತೆಯಿಂದ ಹೊರಡುವ ಮೆಟ್ರೊ ರೈಲು ಟ್ರಿನಿಟಿ ವೃತ್ತ, ಹಲಸೂರು, ಇಂದಿರಾನಗರ, ಸ್ವಾಮಿ ವಿವೇಕಾನಂದ ರಸ್ತೆಯಲ್ಲಿ ತಲಾ 30 ಸೆಕೆಂಡುಗಳ ನಿಲುಗಡೆ ಹೊಂದಲಿದೆ.

ಪ್ರಯಾಣಿಕರು ಮಧ್ಯಾಹ್ನ 3 ಗಂಟೆಯ ನಂತರ ನಿಲ್ದಾಣಗಳನ್ನು ಪ್ರವೇಶಿಸಿ ಟಿಕೆಟ್‌ಗಳನ್ನು ಪಡೆಯಬಹುದು. ರಾತ್ರಿ 10 ಗಂಟೆಗೆ ಎರಡೂ ನಿಲ್ದಾಣಗಳಿಂದ ಕೊನೆಯ ರೈಲು ಸಂಚರಿಸಲಿದೆ. ಅಗತ್ಯ ಬಿದ್ದರೆ ರಾತ್ರಿ 11ವರೆಗೂ ಸೇವೆ ವಿಸ್ತರಿಸಲಾಗುವುದು.

ಅಕ್ಟೋಬರ್ 21ರಿಂದ ಮೆಟ್ರೊ ರೈಲು ಪ್ರತಿದಿನ ಬೆಳಿಗ್ಗೆ 6ಕ್ಕೆ ಏಕಕಾಲಕ್ಕೆ (ಎಂ.ಜಿ.ರಸ್ತೆಯಿಂದ ಬೈಯಪ್ಪನಹಳ್ಳಿ) ಆರಂಭಗೊಳ್ಳಲಿದೆ. ಎರಡೂ ನಿಲ್ದಾಣಗಳಿಂದ ಕೊನೆಯ ಸೇವೆ ಪ್ರತಿದಿನ ರಾತ್ರಿ 10 ಗಂಟೆಗೆ ಮುಕ್ತಾಯಗೊಳ್ಳಲಿದೆ.

ಎಂಜಿನ್ ಹೊಂದಿರುವ ಎರಡು ಬೋಗಿಗಳು ಸೇರಿದಂತೆ ಒಟ್ಟು 3 ಬೋಗಿಗಳನ್ನು ಒಂದು ರೈಲು ಗಾಡಿಯು ಒಂದು ಸಲಕ್ಕೆ ಒಂದು ಸಾವಿರ ಪ್ರಯಾಣಿಕರನ್ನು ಕರೆದೊಯ್ಯಲಿವೆ.

ಮೆಟ್ರೊ ರೈಲು ಸಂಚಾರದ ವೇಳಾಪಟ್ಟಿ
ಬೆಳಿಗ್ಗೆ 6ರಿಂದ ಬೆಳಿಗ್ಗೆ 8-  ಪ್ರತಿ 15 ನಿಮಿಷಕ್ಕೊಂದರಂತೆ; ಬೆಳಿಗ್ಗೆ 8ರಿಂದ ರಾತ್ರಿ 8-  ಪ್ರತಿ 10 ನಿಮಿಷಕ್ಕೊಂದರಂತೆ; ರಾತ್ರಿ 8ರಿಂದ 10- ಪ್ರತಿ 15 ನಿಮಿಷಕ್ಕೊಂದರಂತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.