ADVERTISEMENT

20ಪಟ್ಟು ಹೆಚ್ಚಾಯಿತು ಭೂಸ್ವಾಧೀನ ವೆಚ್ಚ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪಿಆರ್‌ಆರ್‌ ಕಾಮಗಾರಿ ₹434.46 ಕೋಟಿಯಿಂದ ₹ 8,100 ಕೋಟಿಗೆ ಏರಿಕೆ

ಪ್ರವೀಣ ಕುಮಾರ್ ಪಿ.ವಿ.
Published 23 ನವೆಂಬರ್ 2018, 20:06 IST
Last Updated 23 ನವೆಂಬರ್ 2018, 20:06 IST
   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿರ್ಮಿಸಲಿರುವ ಪೆರಿಫೆರಲ್‌ ವರ್ತುಲ ರಸ್ತೆ ಕಾಮಗಾರಿಯ ಭೂಸ್ವಾಧೀನ ಹಾಗೂ ಪುನರ್ವಸತಿ ವೆಚ್ಚ 11 ವರ್ಷಗಳಲ್ಲಿ 20 ಪಟ್ಟು ಹೆಚ್ಚಾಗಿದೆ.

ಪಿಆರ್‌ಆರ್‌ ಯೋಜನೆಗಾಗಿ ಬಿಡಿಎ 1,810 ಎಕರೆ 18.5 ಗುಂಟೆ ಜಮೀನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಯೋಜನೆಗಾಗಿ ಭೂಮಿ ಬಿಟ್ಟುಕೊಡುವ ಸುಮಾರು 5 ಸಾವಿರ ಮಂದಿಗೆ ಪರಿಹಾರ ನೀಡಬೇಕಾಗುತ್ತದೆ.

‘ಈ ಯೋಜನೆಗೆ ಬಿಡಿಎ ಆಡಳಿತ ಮಂಡಳಿ 2008ರ ಫೆಬ್ರುವರಿ 14ರಂದು ಅನುಮೋದನೆ ನೀಡಿದಾಗ ಭೂಸ್ವಾಧೀನ ವೆಚ್ಚ ಕೇವಲ ₹ 434.46 ಕೋಟಿ ಇತ್ತು. ಈಗ ₹ 8,100 ಕೋಟಿ ಬೇಕಾಗುತ್ತದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಡಿಎ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಭೂಮಿ ನೀಡುವ ಕೆಲವರಿಗೆ ಅಭಿವೃದ್ಧಿಪಡಿಸಿದ ಭೂಮಿ ನೀಡುತ್ತೇವೆ. ಮತ್ತೆ ಕೆಲವರಿಗೆ ಟಿಡಿಆರ್‌ ನೀಡುತ್ತೇವೆ. ಇನ್ನು ಕೆಲವರಿಗೆ ಪ್ರೀಮಿಯಮ್ ಎಫ್‌ಎಆರ್‌ ನೀಡುತ್ತೇವೆ. ಹಾಗಾಗಿ ಜಾಗಕ್ಕೆ ಬದಲಾಗಿ ಹಣವನ್ನು ಪಡೆಯುವವರಿಗೆ ನಗದು ರೂಪದ ಪರಿಹಾರ ನೀಡಲು ಸುಮಾರು ₹6,885 ಕೋಟಿ ಬೇಕಾಗಬಹುದು’ ಎಂದು ಅವರು ಹೇಳಿದರು.

‘ಭೂಮಿ ಕಳೆದುಕೊಳ್ಳುವವರಿಗೆ ನಾವು 2013ರ ಭೂಸ್ವಾಧೀನ ಕಾಯ್ದೆ ಪ್ರಕಾರವೇ ಪರಿಹಾರ ನೀಡಬೇಕಾಗುತ್ತದೆ. ಒಟ್ಟು ಪರಿಹಾರದ ಮೊತ್ತದ ಶೇ 100 ನಷ್ಟ ಭರ್ತಿ (ಸೊಲೇಷಿಯಂ) ಮೊತ್ತವನ್ನು ನೀಡಬೇಕಾಗುತ್ತದೆ. ಜಾಗವು ಬಿಬಿಎಂಪಿ ವ್ಯಾಪ್ತಿಯಿಂದ ಎಷ್ಟು ದೂರದಲ್ಲಿದೆ ಎಂಬುದನ್ನು ಆಧರಿಸಿ ಎಷ್ಟು ಪರಿಹಾರ ನೀಡಬೇಕು ಎಂಬುದು ನಿರ್ಧಾರವಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಭೂಮಿಯು ಬಿಬಿಎಂಪಿಯ 10 ಕಿ.ಮೀ ವ್ಯಾಪ್ತಿ ಒಳಗಿದ್ದರೆ ಭೂಮಿಯ ಒಟ್ಟು ಮೌಲ್ಯದಷ್ಟು ಮೊತ್ತವನ್ನು ಸೇರಿಸಿ ಪರಿಹಾರ ನೀಡಬೇಕಾಗುತ್ತದೆ. ನಗರ ಪ್ರದೇಶದಿಂದ ದೂರ ಹೆಚ್ಚಿದಷ್ಟೂ ನಾವೂ ಮೂಲ ಮೌಲ್ಯಕ್ಕೆ ಸೇರಿಸಬೇಕಾದ ಮೊತ್ತವು ಹೆಚ್ಚುತ್ತಾ ಹೋಗುತ್ತದೆ. ಮಾರುಕಟ್ಟೆಯ ಗರಿಷ್ಠ ಮೌಲ್ಯದ ಪ್ರಕಾರವೇ ಪರಿಹಾರದ ಪ್ರಮಾಣವನ್ನು ತೀರ್ಮಾನಿಸಲಾಗು
ತ್ತದೆ’ ಎಂದು ವಿವರಿಸಿದರು.

ಈ ಯೋಜನೆಯ ಭೂಸ್ವಾಧೀನಕ್ಕೆ ಬಿಡಿಎ 2005ರಲ್ಲೇ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. 2007ರಲ್ಲಿ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಅಂದಿನಿಂದಲೇ ಜಾಗವನ್ನು ಅಭಿವೃದ್ಧಿಪಡಿಸುವ ಅವಕಾಶವನ್ನು ಭೂಮಾಲೀಕರು ಕಳೆದುಕೊಂಡಿದ್ದರು.

‘ಭೂಸ್ವಾಧೀನ ಮಾಡಿಕೊಂಡ 10 ವರ್ಷಗಳ ಬಳಿಕ ಪರಿಹಾರ ನೀಡಲಾಗುತ್ತಿದೆ. ಹಾಗಾಗಿ ಒಟ್ಟು ಪರಿಹಾರದ ಮೊತ್ತಕ್ಕೆ ಈ ಅವಧಿಯ ಶೇ 12ರಷ್ಟು ಬಡ್ಡಿಯನ್ನು ಸೇರಿಸಿ ಕೊಡಬೇಕು’ ಎಂಬುದು ಭೂಮಾಲೀಕರ ಬೇಡಿಕೆ.

‘ಹೊಸ ಕಾಯ್ದೆ ಪ್ರಕಾರ ಪರಿಹಾರಕ್ಕೆ ಬಡ್ಡಿ ನೀಡುವುದಕ್ಕೆ ಅವಕಾಶ ಇಲ್ಲ. ಸಂಪೂರ್ಣ ಮೊತ್ತವನ್ನು ಭೂಮಾಲೀಕರಿಗೆ ಪಾವತಿಸಿದ ಬಳಿಕವೇ ಜಾಗವನ್ನು ಬಳಸಿಕೊಳ್ಳಬಹುದು. ಹಾಗಾಗಿ ಪರಿಹಾರದ ಮೊತ್ತಕ್ಕೆ ಶೇ 12ರಷ್ಟು ಬಡ್ಡಿ ಪಾವತಿಸುವ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಎಷ್ಟು ಜಾಗ ಕಳೆದುಕೊಂಡಿದ್ದಾರೋ ಅದರ ಎರಡು ಪಟ್ಟು ಟಿಡಿಆರ್‌ ಕೊಡುವ ಪ್ರಸ್ತಾಪವನ್ನು ಬಿಡಿಎ ಹೊಂದಿದೆ. ಆದರೆ ಮೂರು ಪಟ್ಟು ಟಿಡಿಆರ್‌ ನೀಡಬೇಕೆಂಬ ಬೇಡಿಕೆ ಭೂಮಾಲೀಕರು. ಈ ಬಗ್ಗೆಯೂ ಇನ್ನಷ್ಟೇ ತೀರ್ಮಾನ ಕೈಗೊಳ್ಳಬೇಕಿದೆ.

ಹಸಿರು ಪಟ್ಟಿ ಕೈಬಿಟ್ಟ ಬಿಡಿಎ

ಪಿಆರ್‌ಆರ್‌ ಮೂಲ ಯೋಜನೆಯಲ್ಲಿ ಸಣ್ಣಪುಟ್ಟ ಮಾರ್ಪಾಡು ಮಾಡಲಾಗಿದೆ. ಈ ಹಿಂದೆ ರಸ್ತೆಯ ಎರಡೂ ಅಂಚುಗಳಲ್ಲಿ 2.5 ಮೀಟರ್‌ ಅಗಲದಲ್ಲಿ ಹಸಿರು ಪಟ್ಟಿ ನಿರ್ಮಿಸುವ ಪ್ರಸ್ತಾವವಿತ್ತು. ಅದನ್ನು ಕೈಬಿಡಲಾಗಿದೆ. ಹಿಂದಿನ ಯೋಜನೆ ಪ್ರಕಾರ ಸರ್ವಿಸ್‌ ರಸ್ತೆಯ ಅಗಲ 9 ಮೀಟರ್‌ ಇತ್ತು. ಅದರ ಬದಲು 11 ಮೀಟರ್‌ ಅಗಲದ ಸರ್ವಿಸ್‌ ರಸ್ತೆ ನಿರ್ಮಿಸಲಾಗುತ್ತದೆ. ನಾಲ್ಕು ಲೇನ್‌ಗಳನ್ನು ಒಳಗೊಂಡ ಮುಖ್ಯ ಹೆದ್ದಾರಿ ಅಗಲವನ್ನು 14 ಮೀಟರ್‌ ಬದಲು 15 ಮೀಟರ್‌ಗೆ ಹೆಚ್ಚಿಸಲಾಗಿದೆ. ಕಾರಿಡಾರ್‌ನ ಮಧ್ಯದಲ್ಲಿ ಕ್ಷಿಪ್ರ ಸಾರಿಗೆ ವ್ಯವಸ್ಥೆ ಸಲುವಾಗಿ 12 ಮೀಟರ್‌ ಜಾಗ ಬಿಡಲು ಈ ಹಿಂದೆ ನಿರ್ಧರಿಸಲಾಗಿತ್ತು. ಈಗ ಮೆಟ್ರೊ ಮಾರ್ಗಕ್ಕಾಗಿ 13 ಮೀಟರ್‌ ಜಾಗ ಬಿಡಲು ತೀರ್ಮಾನಿಸಲಾಗಿದೆ.

‘ಶೀಘ್ರವೇ ಟೆಂಡರ್‌’

‘ಪಿಆರ್‌ಆರ್‌ ಕಾಮಗಾರಿಯ ಭೂಸ್ವಾಧೀನಕ್ಕೆ ಹಣ ಹೊಂದಿಸುವುದು ದೊಡ್ಡ ತಲೆನೋವಾಗಿತ್ತು. ಈಗ ಸರ್ಕಾರವೇ ಸಾಲದ ರೂಪದಲ್ಲಿ ಇದಕ್ಕೆ ಅನುದಾನ ಒದಗಿಸುತ್ತಿದೆ. ಒಂದು ತಿಂಗಳಲ್ಲೇ ಕಾಮಗಾರಿಯ ಟೆಂಡರ್‌ ಕರೆಯುತ್ತೇವೆ’ ಎಂದು ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಬಿ.ಎಸ್‌. ಶಿವಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.