ADVERTISEMENT

2020ರ ವೇಳೆಗೆ ಹೊಸ ರೈಲು ಮಾರ್ಗ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST
2020ರ ವೇಳೆಗೆ ಹೊಸ ರೈಲು ಮಾರ್ಗ
2020ರ ವೇಳೆಗೆ ಹೊಸ ರೈಲು ಮಾರ್ಗ   

ಬೆಂಗಳೂರು: `ದೇಶದಲ್ಲಿ 2020ರ ಹೊತ್ತಿಗೆ 25,000 ಕಿ.ಮೀ. ಉದ್ದದಷ್ಟು ಹೊಸ ರೈಲು ಮಾರ್ಗ ವಿಸ್ತರಿಸುವ ಉದ್ದೇಶವಿದೆ~ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.

ಇಂಡಿಯನ್ ಆಯಿಲ್, ಎಚ್.ಪಿ., ಭಾರತ್ ಪೆಟ್ರೋಲಿಯಂ ಹಾಗೂ ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆಯ (ಪಿಸಿಆರ್‌ಎ) ಸಂಯುಕ್ತ ಆಶ್ರಯದಲ್ಲಿ ನಗರದ ಅರಮನೆ ಮೈದಾನದಲ್ಲಿ ಸೋಮವಾರ ನಡೆದ `ತೈಲ ಮತ್ತು ಗ್ಯಾಸ್ ಸಂರಕ್ಷಣಾ ಪಾಕ್ಷಿಕ~ ಕಾರ್ಯಕ್ರಮ ಉದ್ಘಾಟಿಸಿದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

`ವಿಪರೀತ ಇಂಧನ ಬಳಕೆಯಿಂದ ಜಾಗತಿಕ ತಾಪಮಾನ ತೀವ್ರವಾಗಿದ್ದು, ಮನುಕುಲಕ್ಕೆ ಹಾನಿಕರವಾಗುವ ಬೆಳವಣಿಗೆಗಳು ಸಂಭವಿಸುತ್ತಿವೆ. ಹಾಗಾಗಿ ಸಮೂಹ ಸಾರಿಗೆ ಬಳಕೆಯನ್ನು ಹೆಚ್ಚಿಸಬೇಕಿದೆ. ದೇಶದಲ್ಲಿ ಒಟ್ಟು 63,000 ಕಿ.ಮೀ ಉದ್ದದ ರೈಲು ಮಾರ್ಗವಿದ್ದು, ಇದನ್ನು 2 ಲಕ್ಷ ಕಿ.ಮೀ.ಗೆ ವಿಸ್ತರಿಸುವ ಗುರಿ ಇದೆ~ ಎಂದರು.

`ರೈಲ್ವೆ ಇಲಾಖೆಯಲ್ಲಿ ಡೀಸೆಲ್‌ಗೆ ಬದಲಾಗಿ ಪರ್ಯಾಯ ಇಂಧನ ಬಳಕೆ ಬಗ್ಗೆ ಚಿಂತಿಸಲಾಗಿದೆ. ಇಲಾಖೆ ವ್ಯಾಪ್ತಿಯಲ್ಲಿ ಲಕ್ಷಾಂತರ ಎಕರೆ ಭೂಮಿಯಿದೆ. ಈ ಪ್ರದೇಶದಲ್ಲಿ ಸೌರಶಕ್ತಿ ಸಾಧನಗಳನ್ನು ಅಳವಡಿಸಿ, ರೈಲು ಸಂಚಾರಕ್ಕೂ ಸೌರಶಕ್ತಿ ಬಳಸುವ ಬಗ್ಗೆ ರೈಲ್ವೆ ಸಚಿವರು, ಪ್ರಧಾನಿ ಡಾ.ಮನಮೋಹನಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು~ ಎಂದು ಪ್ರತಿಕ್ರಿಯಿಸಿದರು.

ಇದಕ್ಕೂ ಮೊದಲು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಹೊಸ ವಾಹನಗಳ ತಯಾರಿಕೆಗೆ ಕಡಿವಾಣ ಹಾಕಲು ಮೋಟಾರು ವಾಹನ ತಯಾರಿಕಾ ಕಂಪೆನಿಗಳು ಹಾಗೂ ತೈಲ ಕಂಪೆನಿಗಳ ಪ್ರತಿನಿಧಿಗಳು ಒಂದುಗೂಡಿ ಗಂಭೀರ ಚಿಂತನೆ ನಡೆಸಬೇಕಿದೆ~ ಎಂದು ಅಭಿಪ್ರಾಯಪಟ್ಟರು.

`ಮೋಟಾರು ವಾಹನಗಳ ಉತ್ಪಾದನೆ ಹೆಚ್ಚಾಗಿದ್ದು, ಖರೀದಿ ಕೂಡ ಅಧಿಕವಾಗಿದೆ. ಇದರಿಂದ ಇಂಧನ ಆಮದು ಪ್ರಮಾಣವೂ ಹೆಚ್ಚಾಗಿದೆ. ಪರಿಣಾಮವಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಹಾಗಾಗಿ ಇಂಧನ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ~ ಎಂದು ಹೇಳಿದರು.

ಮಕ್ಕಳಲ್ಲಿ ಅರಿವು ಮೂಡಿಸಿ: `ಇಂಧನ ಉಳಿತಾಯ, ಅದರ ಮಹತ್ವ, ಇಂಧನ ಬಳಕೆಯಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮ ಕುರಿತು ಶಾಲಾ ಮಕ್ಕಳಿಗೆ ಪ್ರತಿ ನಿತ್ಯ 10 ನಿಮಿಷ ಕಾಲ ಮಾಹಿತಿ ನೀಡಲು ಶಿಕ್ಷಕರು ಮುಂದಾಗಬೇಕು~ ಎಂದರು.

ಇಂಡಿಯನ್ ಆಯಿಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಬಿ. ಅಶೋಕ್, `ನಗರೀಕರಣ, ಆರ್ಥಿಕತೆಯ ಬೆಳವಣಿಗೆ ಹಾಗೂ ಜನರ ಬದಲಾದ ಜೀವನ ಶೈಲಿಯಿಂದಾಗಿ ಇಂಧನ ಬಳಕೆ ತೀವ್ರವಾಗಿದೆ. ದೇಶದಲ್ಲಿ ಒಟ್ಟು ಇಂಧನ ಬಳಕೆಯ ಶೇ 83ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಕಚ್ಚಾತೈಲ ಖರೀದಿಗೆ ವಾರ್ಷಿಕವಾಗಿ ರೂ 3 ಲಕ್ಷ ಕೋಟಿ ವೆಚ್ಚ ಮಾಡಲಾಗುತ್ತಿದೆ~ ಎಂದು ಮಾಹಿತಿ ನೀಡಿದರು.

`ರಾಜ್ಯದಲ್ಲಿ ಬಳಕೆಯಾಗುವ ಪೆಟ್ರೋಲ್‌ನಲ್ಲಿ ಶೇ 5ರಷ್ಟು ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ. ಡೀಸೆಲ್‌ಗೆ ಬದಲಾಗಿ ಜೈವಿಕ ಇಂಧನ ಬಳಕೆಗೂ ಆದ್ಯತೆ ನೀಡಬೇಕಿದೆ. ಇಂಧನ ಮಿತವ್ಯಯದ ಬಗ್ಗೆ ಅರಿವು ಮೂಡಿಸಲು ಕೈಗಾರಿಕೆಗಳಿಗೆ ತರಬೇತಿ ನೀಡಲಾಗುತ್ತಿದೆ. ಪ್ರತಿಯೊಬ್ಬರು ಪ್ರಜ್ಞಾಪೂರ್ವಕವಾಗಿ ಇಂಧನ ಮಿತವ್ಯಯ ಮಾಡಬೇಕಿದೆ~ ಎಂದರು.

ಭಾರತೀಯ ತೈಲ ನಿಗಮದ ವಿಭಾಗೀಯ ಪ್ರಧಾನ ವ್ಯವಸ್ಥಾಪಕ ಡಿ.ಸೋಥಿ ಸೆಲ್ವಂ, ಭಾರತ್ ಪೆಟ್ರೋಲಿಯಂ ನಿಗಮದ ಕರ್ನಾಟಕ ವಿಭಾಗದ ವ್ಯವಸ್ಥಾಪಕ (ಮಾರುಕಟ್ಟೆ) ಎ.ಎಲ್. ಕೃಷ್ಣನ್, ಭಾರತೀಯ ತೈಲ ನಿಗಮದ ಎನ್.ವಿ.ಎಸ್. ಮೂರ್ತಿ, ಎಚ್.ಪಿ ಕಂಪೆನಿಯ ಪ್ರಾದೇಶಿಕ ವಿಭಾಗದ ಮುಖ್ಯ ವ್ಯವಸ್ಥಾಪಕ ಡಿ.ಕೆ. ಬರ್ಮನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.