ADVERTISEMENT

22 ಕರವೇ ಕಾರ್ಯಕರ್ತರ ಬಂಧನ

ಹಣ ವಸೂಲಿಗೆ ಜೀವ ಬೆದರಿಕೆಯ ಆರೋಪ * ಏಳು ಕಾರುಗಳ ವಶ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 19:59 IST
Last Updated 11 ಡಿಸೆಂಬರ್ 2013, 19:59 IST

ದೇವನಹಳ್ಳಿ: ಹಣ ವಸೂಲಿಗೆ ಜೀವ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಅಂಬರೀಷ್‌ ಸೇರಿದಂತೆ 22 ಮಂದಿ ಕರವೇ ಕಾರ್ಯಕರ್ತರನ್ನು ತೈಲಗೆರೆ ಗ್ರಾಮಸ್ಥರು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ.

ತೈಲಗೆರೆಯ ಫಾಲಾಕ್ಷ ಎಂಬುವವರು ನೀಡಿರುವ ದೂರಿನನ್ವಯ ಪೊಲೀಸರು 22 ಮಂದಿ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅನ್ವಯ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದಾರೆ. ಮಂಗಳವಾರ ರಾತ್ರಿ ತೈಲಗೆರೆ ಗ್ರಾಮದ ಬಳಿ ಇವರೆಲ್ಲರನನೂ ಬಂಧಿಸಲಾಗಿದೆ. ಆರೋಪಿಗಳ ಬಳಿ ಇದ್ದ ಏಳು ಕಾರುಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಬುಧವಾರ ಮಧ್ಯಾಹ್ನ 1.30ರ ವೇಳೆಗೆ  ಎಲ್ಲ ಆರೋಪಿಗಳನ್ನು ದೇವನಹಳ್ಳಿ ಜೆಎಂಎಫ್‌ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.

ನ್ಯಾಯಾಲಯ ಎಲ್ಲ ಆರೋಪಿಗಳನ್ನೂ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.  ಸದ್ಯ ಇವರನ್ನೆಲ್ಲಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.ಘಟನೆ ಕುರಿತು ಮಾಹಿತಿ ನೀಡಿದ ವೃತ್ತ ನಿರೀಕ್ಷಕ ಮಹೇಶ್‌ ಕುಮಾರ್‌ ‘ಪ್ರಜಾವಾಣಿ’ಗೆ ವಿವರಿಸಿದರು.

ಜೀವ ಬೆದರಿಕೆ: ‘ಮಂಗಳವಾರ ರಾತ್ರಿ 10 ಗಂಟೆಗೆ ಮಾಯಸಂದ್ರ ಬಳಿ ಲೋಕೇಶ್‌ ಎಂಬುವವರು ಲಾರಿಯಲ್ಲಿ ಕಲ್ಲು ತುಂಬಿಕೊಂಡು ಬರುತ್ತಿದ್ದಾಗ 25 ರಿಂದ 30 ಸಂಖ್ಯೆಯಷ್ಟಿದ್ದ ಯುವಕರ ತಂಡ ಕಾರುಗಳಲ್ಲಿ ಬಂದು ಲಾರಿಯನ್ನು ಅಡ್ಡಗಟ್ಟಿದರು. ಇವರ ಕಾರುಗಳಿಗೆ ಕನ್ನಡ ರಕ್ಷಣಾ ವೇದಿಕೆ ನಾಮಫಲಕ ಹಾಕಿಕೊಳ್ಳಲಾಗಿತ್ತು. ಕಾರಿನಲ್ಲಿದ್ದ ಯುವಕರು ಕೆಳಗಿಳಿದು ಲಾರಿ ಚಾಲಕನಿಗೆ ಹಣ ನೀಡುವಂತೆ ಧಮಕಿ ಹಾಕಿದರು. ನೀವು ಅಕ್ರಮವಾಗಿ ಕಲ್ಲು ಮತ್ತು ಮರಳನ್ನು ಸಾಗಿಸುತ್ತಿದ್ದೀರಿ. ಇದಕ್ಕೆಲ್ಲಾ ನಿಮಗೆ ಅನುಮತಿ ಕೊಟ್ಟವರು ಯಾರು?

ನಾವು ಕೇಳಿದಷ್ಟು ಹಣ ಕೊಡದೇ ಹೋದರೆ ನಿಮ್ಮನ್ನು ಅಧಿಕಾರಿಗಳಿಗೆ ಹಿಡಿದುಕೊಡುತ್ತೇವೆ. ನಿಮ್ಮ ವಾಹನಗಳನ್ನು ಇಲ್ಲಿಯೇ ನಿಲ್ಲಿಸುತ್ತೇವೆ ಎಂದು ಹೇಳಿ ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಲಾರಿ ಮಾಲೀಕನನ್ನು ಅಷ್ಟು ಹೊತ್ತಿನಲ್ಲಿಯೇ ಸ್ಥಳಕ್ಕೆ ಕರೆಯಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಮಾಲೀಕನನ್ನು ಇಲ್ಲಿಗೆ ಕರೆಸದೇ ಹೋದರೆ ನಿನ್ನನ್ನೇ ಸಾಯಿಸಿಬಿಡುತ್ತೇವೆ ಎಂದು ಚಾಲಕನಿಗೆ ಹೆದರಿಸಿದ್ದಾರೆ. ನಂತರ ಚಾಲಕ ಮಾಲೀಕನಿಗೆ ದೂರವಾಣಿ ಮೂಲಕ ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ.

ತಕ್ಷಣವೇ ಮಾಲೀಕ ಅಲ್ಲಿಗೆ ಬಂದು ಕರವೇ ಕಾರ್ಯಕರ್ತರಿಗೆ ನಾನ್ಯಾಕೆ ದುಡ್ಡು ಕೊಡಲಿ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಅಷ್ಟು ಹೊತ್ತಿಗೆ ಗ್ರಾಮದ ಸುಮಾರು 400 ಜನರು ಸ್ಥಳಕ್ಕೆ ಬಂದು ಜಮಾಯಿಸಿದ್ದಾರೆ. ಅವರಲ್ಲಿ ಕೆಲವರು ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಆಗ ಸ್ಥಳಕ್ಕೆ ದೊಡ್ಡಬಳ್ಳಾಪುರ, ವಿಶ್ವನಾಥಪುರ, ವಿಜಯಪುರ, ಚನ್ನರಾಯಪಟ್ಟಣ ಠಾಣೆಗಳ ಸುಮಾರು 50ರಷ್ಟು ಸಂಖ್ಯೆಯ ಪೊಲೀಸರು ಧಾವಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮಹೇಶ್‌ ಕುಮಾರ್‌ ವಿವರಿಸಿದರು,

ಏತನ್ಮಧ್ಯೆ ಹಲವು ಗ್ರಾಮಸ್ಥರು ಕರವೇ ಕಾರ್ಯಕರ್ತರನ್ನು ಚೆನ್ನಾಗಿ ಥಳಿಸಿ ಒಂದು ಕೊಠಡಿಯಲ್ಲಿ ಕೂಡಿ ಹಾಕಿದ್ದರು. ನಂತರ ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿ ಹಿಡಿದು ಕೊಡಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಕರವೇ ಅಧ್ಯಕ್ಷ ಅಂಬರೀಶ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಹಣ ಕೇಳಿದ ವಿಷಯವನ್ನು ನಿರಾಕರಿಸಿದ್ದಾನೆ ಎಂದು ಮಹೇಶ್‌ ಕುಮಾರ್‌ ತಿಳಿಸಿದರು.

‘ನಾವು 450 ಶಾಲೆಗಳಿಗೆ ಪಠ್ಯಪುಸ್ತಕ ವಿತರಿಸಬೇಕು. ನೀವು ಎಷ್ಟು ಶಾಲೆಗೆ ನೀಡುತ್ತೀರಿ ಎಂದು ಕೇಳಿದೆ’ ಎಂಬುದಾಗಿ ಆತ ತಿಳಿಸಿದ್ದಾನೆ ಎಂದರು.

ಅಂಬರೀಷ್‌ ಕಾರಿನಲ್ಲಿ ತಾಲ್ಲೂಕಿನ ಹಲವಾರು ಭೂ ದಾಖಲೆಗಳು ಲಭ್ಯವಾಗಿವೆ. ಕೋರ್ಟಿನಲ್ಲಿ ವ್ಯಾಜ್ಯದಲ್ಲಿರುವ ಮತ್ತು ಒತ್ತುವರಿಯಾದ ಪ್ರದೇಶದ ದಾಖಲೆಗಳೂ ಇವುಗಳಲ್ಲ ಸೇರಿವೆ. ಇವನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದಾಗ ಸಂಧಾನ ಅಥವಾ ಬೆದರಿಕೆಯಿಂದ ಹಣ ವಸೂಲಿ ಮಾಡುವ ದಂದೆಯನ್ನು ಈ ತಂಡದವರು ಮಾಡುತ್ತಿದ್ದರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಘಟನೆಯಲ್ಲಿ ಕನಕಪುರ ತಾಲ್ಲೂಕು ಆಂಜಿನಾಪುರ ಗ್ರಾಮದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಐಪಿಸಿ ಕಲಂ 143, 341, 384, 504, 506, ಆರ್‌/ಡಬ್ಲ್ಯೂ 149 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಂಧಿತರು
ಕರವೇ (ನಾರಾಯಣಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಅಂಬರೀಷ್‌, ಹರೀಶ, ಭುವನೇಶ್ವರ್‌ ಕುಮಾರ್‌, ನಿರೂಪ್‌ಗೌಡ, ಸುಧೀರ್‌, ಸೀತಾ ರಾಮ, ಶಿವಕುಮಾರ್, ಪವನ್‌ ಕುಮಾರ್‌, ನವೀನ್‌ ಕುಮಾರ್‌, ನಾಗೇಂದ್ರ, ಚಂದ್ರಶೇಖರ್‌, ಸೂರ್ಯ, ಶ್ರೀಧರಮೂರ್ತಿ, ಸುಮನ್‌, ಸತೀಶ್‌, ಕಿಷನ್‌, ಮಧು, ರಾಜು, ಶ್ರೀಧರ್‌, ಅಶ್ವಿನ್‌, ಕಿರಣ್‌, ಸಂಜಯ್‌.

ಪೋಲಿಸ್‌ ಠಾಣೆ ಮುಂದೆ ಗ್ರಾಮಸ್ಥರ ಆಕ್ರೋಶ
ಮಂಗಳವಾರ ರಾತ್ರಿ ಕರವೇ ಕಾರ್ಯಕರ್ತರನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ ತೈಲಗೆರೆ ಗ್ರಾಮಸ್ಥರು ಬುಧವಾರ ಬೆಳಿಗ್ಗೆ ವಿಶ್ವನಾಥಪುರ ಪೋಲಿಸ್‌ ಠಾಣೆ ಮುಂದೆ ಜಮಾಯಿಸಿ ಕರವೇ ಸಂಘಟನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ಕುರಿತಂತೆ ತೈಲಗೆರೆ ಗ್ರಾಮದ ಮಂಜುನಾಥ್‌, ಮುನಿರಾಜು ಟಿ.ಎಸ್‌, ಕೃಷ್ಣಪ್ಪ ‘ಪ್ರಜಾವಾಣಿ’ಗೆ ವಿವರಿಸಿದ್ದು ಹೀಗೆ;
‘ಮಂಗಳವಾರ ರಾತ್ರಿ ಸುಮಾರು 40 ಯುವಕರ ತಂಡ ರಸ್ತೆಗಳಲ್ಲಿ ಹೋಗುತ್ತಿದ್ದ ಖಾಲಿ ಲಾರಿ ಮತ್ತು ಮರಳು ತುಂಬಿದ ಲಾರಿ ಚಾಲಕರನ್ನು ಅಡ್ಡಗಟ್ಟಿ ನಿಲ್ಲಿಸಿ ಅವರನ್ನು ಥಳಿಸಿ ಹಣ ವಸೂಲಿ ಮಾಡಿದ್ದಾರೆ. ನಂತರ ಗ್ರಾಮದ ಮೂಲಕ ತೆರಳುವಾಗ ರಸ್ತೆಬದಿ ನಿಂತಿದ್ದ ಸ್ಥಳೀಯರನ್ನು ಏಕವಚನದಲ್ಲಿ ನಿಂದಿಸಿದ್ದಾರೆ. ಆವತಿಯ ಲಾರಿ ಚಾಲಕ ಮುರಳಿ ಎಂಬುವವರನ್ನು ಚೆನ್ನಾಗಿ ಥಳಿಸಿದ್ದಾರೆ. ಇದನ್ನು ಅಲ್ಲಿದ್ದ ಗ್ರಾಮಸ್ಥರು ಪ್ರಶ್ನಿಸಿದಾಗ ನಾವು ’ಅಧಿಕಾರಿಗಳು ಹಾಗೂ ಪೋಲೀಸರು’ ನೀವೆಲ್ಲಾ ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ನಮ್ಮ ಮೇಲೆಯೇ ಹಲ್ಲೆಗೆ ಮುಂದಾದರು. ಆಗ ನಾವೆಲ್ಲಾ ಒಟ್ಟಾಗಿ ರಸ್ತೆ ಅಡ್ಡಗಟ್ಟಿ ಸುತ್ತುವರೆದು ಪೊಲೀಸರಿಗೆ ಮಾಹಿತಿ ನೀಡಿದೆವು’ ಎಂದು ತಿಳಿಸಿದರು.

‘ಈ ಕೃತ್ಯದ ಹಿಂದೆ ಮುದ್ದನಾಯಕನ ಹಳ್ಳಿ ಅಪ್ಪಾಜಿಗೌಡ ಹಾಗೂ ಅಶ್ವತ್ಥಗೌಡ ಅವರ ಬೆಂಬಲ ಇದೆ. ಪೊಲೀಸರು ವಶಪಡಿಸಿಕೊಂಡಿರುವ ಏಳು ಕಾರುಗಳಲ್ಲಿ ವಿವಿಧೆಡೆಯಲ್ಲಿ ನೋಂದಣಿ ಆದ ಅನೇಕ್‌ ನಂಬರ್‌ ಪ್ಲೇಟ್‌ಗಳು ದೊರೆತಿವೆ. ಇವುಗಳಲ್ಲಿ ಕೆಲವು ಹೊರರಾಜ್ಯದ ಸಂಖ್ಯೆಗಳೂ ಇವೆ. ಒಬ್ಬೊಬ್ಬ ಯುವಕರ ಬಳಿ ಕನಿಷ್ಠ 5 ರಿಂದ 8  ಎ.ಟಿ.ಎಂ ಕಾರ್ಡ್‌ಗಳು ದೊರೆತಿವೆ’ ಎಂದು ದೂರಿದರು.

ಮತ್ತೊಂದು ಪ್ರಕರಣ: ` 12.50 ಲಕ್ಷಕ್ಕೆ ಬೇಡಿಕೆ
‘ಮೂರು ದಿನದ ಹಿಂದೆ ಬೆಂಗಳೂರಿನ ಜಕ್ಕೂರಿನ ಇಲೇಶ್ ಟಿಪ್ಪರ್‌ನ ವಾಹನ ಮಾಲಿಕ ಗಗನ್‌ ಎಂಬುವವರನ್ನು ಕ.ರ.ವೇ ಕಾರ್ಯಕರ್ತರು ಸಂಪರ್ಕಿಸಿ `12.50 ಲಕ್ಷ  ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದಕ್ಕಾಗಿ ಸಾಕಷ್ಟು ಒತ್ತಡವನ್ನೂ ಹಾಕಿದ್ದರು. ಇದಕ್ಕೆ ಮಣಿದ ಗಗನ್‌ `12.50 ಕೊಡಲು ಆಗುವುದಿಲ್ಲ. ಐದು ಲಕ್ಷ ರೂ ಕೊಡುತ್ತೇನೆ ಎಂದು ತಿಳಿಸಿದ್ದರಂತೆ. ನಿಗದಿತ ಸಮಯಕ್ಕೆ ಹಣ ಪಾವತಿಸಲಿಲ್ಲ ಎಂಬ ಕಾರಣಕ್ಕೆ ಗಗನ್‌ ಅವರಿಗೂ ಕರವೇ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ’ ಎಂದು ತಿಳಿದು ಬಂದಿದೆ. ಈ ಕುರಿತು ಠಾಣೆಗೆ ಬಂದು ಘಟನೆಯ ಎಲ್ಲ ಮಾಹಿತಿ ನೀಡುವಂತೆ ಗಗನ್‌ ಅವರಿಗೆ ತಿಳಿಸಲಾಗಿದೆ ಎಂದು ಮಹೇಶ್‌ ಹೇಳಿದರು.

ಇವರಿಗೆ ಅಧಿಕಾರ ಕೊಟ್ಟವರು ಯಾರು?
‘ಅಕ್ರಮ ಮರಳು ಫಿಲ್ಟರ್‌, ಮರಳು, ಕಲ್ಲು ಸಾಗಾಣಿಕೆ ಬಗ್ಗೆ ತನಿಖೆ ನಡೆಸಲು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗ­ಳಿದ್ದಾರೆ. ಅಮಾಯಕ ಲಾರಿ ಅಥವಾ ಇತರೆ ವಾಹನಗಳ ಚಾಲಕರ ಮೇಲೆ ಹಲ್ಲೆ ಮಾಡುವುದು ಹಣ ದೋಚುವುದು, ಸರ ಕಿತ್ತುಕೊಳ್ಳುವುದು, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಕೆಲಸನಾ? ನಾವು ಸರ್ಕಾರಕ್ಕೆ ರಾಜಧನ ಕಟ್ಟಿ ಸಾಗಣೆ ಮಾಡುತ್ತೇವೆ. ಇವರಿಗೆ ನಾವು ಯಾಕೆ ಹಣ ಕೊಡಬೇಕು? ಒಂದೊಮ್ಮೆ ಚಾಲ­ಕರು ಹಲ್ಲೆ ನಡೆದಾಗ ಏನಾದರೂ ಅನು­ಭವಿಸಿದರೆ ಅದಕ್ಕೆ ಯಾರು ಜವಾಬ್ದಾರರು? ರಾತ್ರಿ ಹೊತ್ತು ಲಾರಿಗ­ಳನ್ನು, ಟ್ರ್ಯಾಕ್ಟರ್‌­ಗಳನ್ನು ತಡೆ­ಯಲು ಕರವೇ ಕಾರ್ಯಕರ್ತರಿಗೆ ಅಧಿಕಾರ ಕೊಟ್ಟವರು ಯಾರು ? ಕನ್ನಡ ನಾಡು ನುಡಿ ಜಲದ ರಕ್ಷಣೆ ಹೆಸರಿನಲ್ಲಿ ಇಂತಹ ಹೀನ ಕೃತ್ಯಕ್ಕೆ ಇಳಿದಿರುವುದು ಕನ್ನಡಿಗರಿಗೆ ನಾಚಿಕೆಯಾಗಬೇಕು’
–ಉಮೇಶ್‌, ಲಾರಿ ಮಾಲಿಕ ಸಂಘದ ಅಧ್ಯಕ್ಷ ದೇವನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT