ADVERTISEMENT

225 ಮನೆ ನಿರ್ಮಾಣಕ್ಕೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 19:30 IST
Last Updated 11 ಅಕ್ಟೋಬರ್ 2011, 19:30 IST

ಕೃಷ್ಣರಾಜಪುರ: ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗದ ಅರ್ಹರಿಗೆ ಒಂದು ವಾರ್ಡಿಗೆ 25 ಮನೆಗಳಂತೆ ಒಟ್ಟು 225 ಮನೆಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಸದ್ಯದಲ್ಲಿಯೇ ಅನುಮೋದನೆ ದೊರಕುವ ಸಾಧ್ಯತೆಯಿದೆ ಎಂದು ಶಾಸಕ ಎನ್.ಎಸ್. ನಂದೀಶರೆಡ್ಡಿ ಹೇಳಿದರು.

 ಚಿಕ್ಕದೇವಸಂದ್ರ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಕಾರ್ಯಕ್ಕೆ ಚಾಲನೆ ನೀಡಿ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ಅರ್ಹ 27 ಫಲಾನುಭವಿಗಳಿಗೆ ಮನೆ ನಿರ್ಮಾಣದ ಕೊನೆಯ ಕಂತು 61,375 ರೂಪಾಯಿ ಮೊತ್ತದ ಸಹಾಯಧನ ಚೆಕ್ ವಿತರಿಸಿ ಅವರು ಮಾತನಾಡಿದರು.

`ಈಗಾಗಲೇ ಆಯಾ ವಾರ್ಡ್‌ಗಳಿಗೆ ಬಿಬಿಎಂಪಿ ಸದಸ್ಯರು ಉಚಿತವಾಗಿ ಟ್ಯಾಂಕರ್ ನೀರು ಪೂರೈಸುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ನಾನು ಕೂಡ ಉಚಿತವಾಗಿ ಬಡಾವಣೆ ನಿವಾಸಿಗಳ ಕೋರಿಕೆ ಮೇರೆಗೆ ಟ್ಯಾಂಕರ್ ನೀರು ಪೂರೈಸಲು ಪ್ರಯತ್ನಿಸುತ್ತೇನೆ~ ಎಂದು ಆಶ್ವಾಸನೆ ನೀಡಿದರು.

 3 ಕೆರೆಗಳ ಅಭಿವೃದ್ಧಿ: ಬಿ.ನಾರಾಯಣಪುರ, ಕಲ್ಕೆರೆ ಹಾಗೂ ವಿಭೂತಿಪುರ ಕೆರೆಗಳ ಹೂಳು ತೆಗೆದು ನೀರನ್ನು ಶುದ್ಧ ಗೊಳಿಸಿ ಅಭಿವೃದ್ಧಿಪಡಿಸಲಾಗುವುದು. ಈ ಸಂಬಂಧ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿದೆ ಎಂದರು.

ಸಿಂಗಯ್ಯನಪಾಳ್ಯ ಬಳಿ ನೇರ ಸಂಪರ್ಕ ರಸ್ತೆಯಿಲ್ಲ. ಈ ಬಗ್ಗೆ ಸಾಕಷ್ಟು ಸಾರ್ವಜನಿಕ ದೂರುಗಳು ಬಂದಿದ್ದವು. ಹಳೇ ಮದರಾಸು ರಸ್ತೆ ಮತ್ತು ವೈಟ್‌ಫೀಲ್ಡ್ ಸಂಪರ್ಕ ರಸ್ತೆಗಳ ಕೆಳ ಸೇತುವೆ ಮಾರ್ಗ ನಿರ್ಮಾಣಕ್ಕೆ ಸದ್ಯದಲ್ಲಿಯೇ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಬಿಬಿಎಂಪಿ ಸದಸ್ಯ ಎಸ್.ಎಸ್. ಪ್ರಸಾದ್, ಎನ್.ವೀರಣ್ಣ, ಬಿಜೆಪಿ ಕ್ಷೇತ್ರ ಘಟಕದ ಪ್ರಧಾನ ಕಾರ್ಯದರ್ಶಿ ಕೇಶವಮೂರ್ತಿ ಟಿ.ರಮೇಶ್, ವಾರ್ಡ್ ಅಧ್ಯಕ್ಷೆ ರತ್ನ, ಮುಖಂಡರಾದ ಕೆ.ಬ್ರಹ್ಮಾನಂದರೆಡ್ಡಿ, ಭಕ್ತ ಸಿರಪುರ ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.