ADVERTISEMENT

226 ಮಾಂಸದಂಗಡಿಗಳಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 20:35 IST
Last Updated 19 ಮಾರ್ಚ್ 2018, 20:35 IST

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 498 ಮಾಂಸ ಮಾರಾಟ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಇವುಗಳ ಪೈಕಿ 226 ಅಂಗಡಿಗಳು ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದೆ’ ಎಂದು  ಹೈಕೋರ್ಟ್‌ಗೆ ಬಿಬಿಎಂಪಿ ತಿಳಿಸಿದೆ.

ಈ ಕುರಿತಂತೆ ‘ಗೋ ಗ್ಯಾನ್‌ ಪ್ರತಿಷ್ಠಾನ‘ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹಾಗೂ ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ಕೆ.ಎನ್‌.ಪುಟ್ಟೇಗೌಡ, ‘ನಿಯಮ ಉಲ್ಲಂಘಿಸಿರುವವರ ವಿರುದ್ಧ ಎಲ್ಲರಿಗೂ ನೋಟಿಸ್ ಜಾರಿಗೊಳಿಸಿ, ವಿಚಾರಣೆ ನಡೆಸಲಾಗುತ್ತಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ADVERTISEMENT

ಇದಕ್ಕೆ ತೃಪ್ತಿಯಾಗದ ನ್ಯಾಯಪೀಠ, ‘ಕೇವಲ ನೋಟಿಸ್ ಜಾರಿಗೊಳಿಸಿದರೆ ಸಾಲದು. ಎಷ್ಟು ಪ್ರಕರಣ ದಾಖಲಿಸಲಾಗಿದೆ. ಎಷ್ಟು ಜನರಿಗೆ ದಂಡ ವಿಧಿಸಲಾಗಿದೆ ಎಂಬುದರ ಕುರಿತು ಕೋರ್ಟ್‌ಗೆ ವಿವರವಾದ ವರದಿ ಸಲ್ಲಿಸಿ’ ಎಂದು ಸೂಚಿಸಿತು.

‘ಅಕ್ರಮ ಕಸಾಯಿಖಾನೆಗಳ ತಪಾಸಣೆಗೆ ರಚಿಸಲಾಗಿರುವ ಸಿಬ್ಬಂದಿಗೆ ಪ್ರತ್ಯೇಕ ವಾಹನ ವ್ಯವಸ್ಥೆ ಸೇರಿದಂತೆ ಅವರಿಗೆ ಒದಗಿಸಿರುವ ಸೌಲಭ್ಯಗಳೇನು ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿರುವ ಕಸಾಯಿ ಖಾನೆಗಳ ವಿರುದ್ಧ ಈ ವರೆಗೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಸವಿವರವಾದ ವರದಿ ಸಲ್ಲಿಸಿ’ ಎಂದು ನಿರ್ದೇಶಿಸಿತು.

ವಿಚಾರಣೆಯನ್ನು ಏಪ್ರಿಲ್‌11ಕ್ಕೆ ಮುಂದೂಡಲಾಗಿದೆ.

ಪ್ರಕರಣವೇನು?: ‘ಕರ್ನಾಟಕ ಗೋ ವಧೆ ಪ್ರತಿಬಂಧಕ ಕಾಯ್ದೆ ಹಾಗೂ ಕರ್ನಾಟಕ ಪ್ರಾಣಿ ಹಿಂಸೆ ತಡೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ 2015ರಲ್ಲಿ ಹೈಕೋರ್ಟ್‌ ಆದೇಶಿಸಿದೆ. ಆದರೆ, ಈ ಆದೇಶ ಪಾಲನೆಯಾಗುತ್ತಿಲ್ಲ’ ಎಂಬುದು ಅರ್ಜಿದಾರರ ಆಕ್ಷೇಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.