ADVERTISEMENT

238 ನೀಲಗಿರಿ ಮರಗಳ ತೆರವಿಗೆ ಸಿದ್ಧತೆ

ರಾಚೇನಹಳ್ಳಿ ಕೆರೆಗೆ ಕೊಳಚೆ ನೀರು ಸೇರದಂತೆ ತಡೆಯಲು ಎಸ್‌ಟಿಪಿ ನಿರ್ಮಾಣ

ಪ್ರವೀಣ ಕುಮಾರ್ ಪಿ.ವಿ.
Published 22 ಮಾರ್ಚ್ 2021, 20:24 IST
Last Updated 22 ಮಾರ್ಚ್ 2021, 20:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಚೇನಹಳ್ಳಿ ಕೆರೆಗೆ ಕೊಳಚೆ ನೀರು ಸೇರ್ಪಡೆ ತಡೆಯಲು ಜಕ್ಕೂರಿನ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ (ಎಂಜಿಐಆರ್‌ಎಇಡಿ) ಜಾಗದಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ ಸಂಸ್ಥೆಯು 1.5 ಎಕರೆಯನ್ನು ಜಲಮಂಡಳಿಗೆ ಒದಗಿಸಿದ್ದು, ಅಲ್ಲಿರುವ 238 ನೀಲಗಿರಿ ಮರಗಳನ್ನು ಕಡಿಯಲು ಸಿದ್ಧತೆ ನಡೆದಿದೆ.

ಮರಗಳನ್ನು ಕಡಿಯುವ ಬೆಂಗಳೂರು ನಗರ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯು 1976ರ ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆಯ ಸೆಕ್ಷನ್‌ 8 (3) (vii) ಅಡಿಯಲ್ಲಿ ಇತ್ತೀಚೆಗೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಿದೆ.

‘ಎಸ್‌ಟಿಪಿ ನಿರ್ಮಾಣಕ್ಕೆ ಬೇರೆಲ್ಲೂ ಜಾಗ ಸಿಗದ ಕಾರಣ ಜಲಮಂಡಳಿಯವರು ನಮ್ಮ ಸಂಸ್ಥೆಯ ಜಾಗ ಒದಗಿಸುವಂತೆ ಕೋರಿದ್ದರು. ಇದರಿಂದ ಕೆರೆಗೆ ಕೊಳಚೆ ನೀರು ಸೇರುವುದು ತಪ್ಪುತ್ತದೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ನಾವು ಒಂದೂವರೆ ಎಕರೆ ಜಾಗವನ್ನು ಜಲಮಂಡಳಿಗೆ ಒದಗಿಸಲು ಒಪ್ಪಿದ್ದೇವೆ’ ಎಂದು (ಎಂಜಿಐಆರ್‌ಎಇಡಿ) ಕಾರ್ಯಕಾರಿ ನಿರ್ದೇಶಕ ಮನೋಜ್‌ ಕುಮಾರ್‌ ಶುಕ್ಲ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸಂಸ್ಥೆಯ ಜಾಗವನ್ನು ಎಸ್‌ಟಿಪಿ ನಿರ್ಮಾಣಕ್ಕೆ ಬಿಟ್ಟುಕೊಡುವುದಕ್ಕೆ ಹಾಗೂ ಸಂಸ್ಥೆಯ ಪ್ರಾಂಗಣದಲ್ಲಿರುವ 238 ಮರಗಳನ್ನು ಕಡಿಯುವುದಕ್ಕೆ ಜಕ್ಕೂರಿನ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಎಸ್‌ಟಿಪಿ ನಿರ್ಮಿಸುವುದಕ್ಕೆ ನಮ್ಮದೇನೂ ತಕರಾರು ಇಲ್ಲ. ಆದರೆ, 238 ಮರಗಳನ್ನು ಕಡಿಯುವುದಕ್ಕೆ ಆಕ್ಷೇಪ ಇದೆ. ರಾಚೇನಹಳ್ಳಿ ಕೆರೆಯನ್ನು ಅನೇಕ ಪಕ್ಷಿ ಸಂಕುಲಗಳೂ ಅವಲಂಬಿಸಿವೆ. ಇಷ್ಟೊಂದು ಸಂಖ್ಯೆಯಲ್ಲಿ ಮರಗಳು ತೆರವುಗೊಂಡರೆ ಇಲ್ಲಿನ ಜೀವವೈವಿಧ್ಯಕ್ಕೂ ಕುತ್ತು ಉಂಟಾಗಲಿದೆ’ ಎಂದು ಜಕ್ಕೂರು ನಿವಾಸಿ ಸಂಜೀವ ದ್ಯಾಮಣ್ಣನವರ್‌ ಕಳವಳ ವ್ಯಕ್ತಪಡಿಸಿದರು.

‘ಇಂಧನ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳು ಆಗುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಸುಸ್ಥಿರ ಇಂಧನ ಬಳಕೆ ಉತ್ತೇಜನಕ್ಕೆ ತರಬೇತಿ ಹಮ್ಮಿಕೊಳ್ಳಲು ಸಂಸ್ಥೆಯು ಇರುವ ಜಾಗವನ್ನು ಉಳಿಸಿಕೊಳ್ಳಬೇಕು. ಎಸ್‌ಟಿಪಿ ನಿರ್ಮಾಣಕ್ಕೆ ಒಂದೂವರೆ ಎಕರೆ ಜಾಗವನ್ನು ಪರ್ಯಾಯ ಭೂಮಿಯನ್ನು ಪಡೆಯದೆಯೇ ಎಂಜಿಐಆರ್‌ಎಇಡಿ ಬಿಟ್ಟುಕೊಡುವುದು ಸರಿಯಲ್ಲ’ ಎಂದರು.

‘ನೀಲಗಿರಿ ಮರಗಳು ಪರಿಸರ ಸಮತೋಲನದ ದೃಷ್ಟಿಯಿಂದ ಸೂಕ್ತವಲ್ಲ. ಇಲ್ಲಿನ 238 ಮರಗಳನ್ನು ಎಸ್‌ಟಿಪಿ ನಿರ್ಮಾಣದ ಸಲುವಾಗಿ ಕಡಿದರೂ, ಅಲ್ಲಿ ವಿವಿಧ ಜಾತಿಯ ಇತರ ಗಿಡಗಳನ್ನು ಬೆಳೆಸಲಿದ್ದೇವೆ’ ಎಂದು ಶುಕ್ಲ ತಿಳಿಸಿದರು.

‘ಒತ್ತುವರಿ ತೆರವುಗೊಂಡ ಜಾಗ ಬಳಸಲಿ’

‘ಇತ್ತೀಚೆಗೆ ಜಿಲ್ಲಾಡಳಿತವು ಈ ಕೆರೆಯ ಸಮೀಪದಲ್ಲಿರುವ ಬಿಡಿಎ ಉದ್ಯಾನದ ಬಳಿ (ಧೀರಜ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದ ಸಮೀಪ) ಒತ್ತುವರಿಯಾಗಿರದ್ದ 4 ಎಕರೆಗಳಷ್ಟು ಜಾಗವನ್ನು ಮತ್ತೆ ವಶಪಡಿಸಿಕೊಂಡಿದೆ. ಆ ಜಾಗದಲ್ಲಿ ಸರ್ಕಾರ ಎಸ್‌ಟಿಪಿ ನಿರ್ಮಾಣಕ್ಕೆ ಬಳಸಿಕೊಳ್ಳಲಿ. ಈ ಜಾಗವು ಎದುರಿನ ಜಾಗವು ಎಸ್‌ಟಿಪಿ ನಿರ್ಮಾಣಕ್ಕೂ ಪೂರಕವಾಗಿದೆ’ ಎಂದು ಸಂಜೀವ್‌ ಸಲಹೆ ನೀಡಿದರು.

***

ನಗರದಲ್ಲಿ ಹಸಿರಿನ ಕೊರತೆ ನೀಗಿಸಲು ವೃಕ್ಷೋದ್ಯಾನಗಳನ್ನು ನಿರ್ಮಿಸುವುದಾಗಿ ಸರ್ಕಾರ ಹೇಳುತ್ತಿದೆ. ಇನ್ನೊಂದೆಡೆ ಇರುವ ಹಸಿರನ್ನೂ ನಾಶಪಡಿಸಲು ಮುಂದಾಗಿದೆ. ಇದು ಸರಿಯಲ್ಲ

– ಸಂಜೀವ ದ್ಯಾಮಣ್ಣವರ್, ಜಕ್ಕೂರು ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.