ADVERTISEMENT

ಬೆಂಗಳೂರು | ಪಟಾಕಿ ಗಾಯ: ಕಣ್ಣಿನ ಆಸ್ಪತ್ರೆಗಳಲ್ಲಿ 24 ಗಂಟೆಯೂ ಸೇವೆ

ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ * ಗಾಯಗೊಂಡವರ ಚಿಕಿತ್ಸೆಗೆ ಬೆಡ್‌ ಮೀಸಲು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 23:35 IST
Last Updated 17 ಅಕ್ಟೋಬರ್ 2025, 23:35 IST
ಪಟಾಕಿ ಗಾಯದ ಚಿಕಿತ್ಸೆಗೆ ಸಂಬಂಧಿಸಿದಂತೆ ಮಿಂಟೊ ಕಣ್ಣಿನ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ಶುಶ್ರೂಷಕಿಯೊಬ್ಬರು ಹಾಸಿಗೆಗಳನ್ನು ಸಿದ್ಧಪಡಿಸಿದರು
ಪ್ರಜಾವಾಣಿ ಚಿತ್ರ; ಪ್ರಶಾಂತ್ ಎಚ್.ಜಿ.
ಪಟಾಕಿ ಗಾಯದ ಚಿಕಿತ್ಸೆಗೆ ಸಂಬಂಧಿಸಿದಂತೆ ಮಿಂಟೊ ಕಣ್ಣಿನ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ಶುಶ್ರೂಷಕಿಯೊಬ್ಬರು ಹಾಸಿಗೆಗಳನ್ನು ಸಿದ್ಧಪಡಿಸಿದರು ಪ್ರಜಾವಾಣಿ ಚಿತ್ರ; ಪ್ರಶಾಂತ್ ಎಚ್.ಜಿ.   

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಅವಘಡಗಳು ಸಂಭವಿಸಿದಲ್ಲಿ ಕಣ್ಣಿಗೆ ಹಾನಿಯಾಗುವುದನ್ನು ತಪ್ಪಿಸಲು ನಗರದ ಕಣ್ಣಿನ ಆಸ್ಪತ್ರೆಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಹಬ್ಬದ ಸಂದರ್ಭದಲ್ಲಿ ದಿನದ 24 ಗಂಟೆಯೂ ಸೇವೆ ನೀಡಲು ಸಜ್ಜಾಗಿವೆ.

ಮಿಂಟೊ, ನಾರಾಯಣ ನೇತ್ರಾಲಯ, ನೇತ್ರಧಾಮ, ಶಂಕರ, ಡಾ. ಅಗರವಾಲ್ಸ್ ಸೇರಿ ವಿವಿಧ ಕಣ್ಣಿನ ಆಸ್ಪತ್ರೆಗಳು ಚಿಕಿತ್ಸೆಗೆ ಬೇಕಾದ ಔಷಧಗಳನ್ನು ದಾಸ್ತಾನು ಮಾಡಿಕೊಂಡಿವೆ. ಅದೇ ರೀತಿ, ಪ್ರತ್ಯೇಕ ಹಾಸಿಗೆ ವ್ಯವಸ್ಥೆಯನ್ನು ಮಿಂಟೊ, ನಾರಾಯಣ ನೇತ್ರಾಲಯ ಸೇರಿ ಕೆಲ ಆಸ್ಪತ್ರೆಗಳಲ್ಲಿ ಮಾಡಲಾಗಿದೆ.

ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಒಟ್ಟು 25 ಹಾಸಿಗೆಗಳನ್ನು ಪಟಾಕಿ ಗಾಯಾಳುಗಳ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಇವುಗಳಲ್ಲಿ ತಲಾ 10 ಪುರುಷರು ಹಾಗೂ ಮಹಿಳೆಯರಿಗೆ, ಐದು ಹಾಸಿಗೆಗಳನ್ನು ಮಕ್ಕಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತದೆ. 

ADVERTISEMENT

‘ಹಬ್ಬದ ದಿನಗಳಲ್ಲಿ 24 ಗಂಟೆಯೂ ಚಿಕಿತ್ಸೆ ಲಭ್ಯವಿರಲಿದ್ದು, ವೈದ್ಯರು ಹಾಗೂ ಸಿಬ್ಬಂದಿ ಹಾಜರಿರುತ್ತಾರೆ. ರೋಗಿಗಳ ಚಿಕಿತ್ಸೆಗೆ ಬೇಕಾದ ಸಲಕರಣೆ ಹಾಗೂ ಔಷಧಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳ ಹಾವಳಿ ಹೆಚ್ಚುತ್ತಿದ್ದು, ಮುನ್ನೆಚ್ಚರಿಕೆ ವಹಿಸದಿದ್ದಲ್ಲಿ ಬೆಳಕಿನ ಹಬ್ಬವು ಜೀವನದಲ್ಲಿ ಕತ್ತಲೆ ತರುವ ಸಾಧ್ಯತೆ ಇರುತ್ತದೆ’ ಎಂದು ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕ (ಉಸ್ತುವಾರಿ) ಡಾ.ಎಸ್. ಶಶಿಧರ್ ತಿಳಿಸಿದರು. 

‘ಐದು ವರ್ಷದೊಳಗಿನ ಮಕ್ಕಳಿಗೆ ಪಟಾಕಿಗಳನ್ನು ಹೊಡೆಯಲು ಬಿಡಬಾರದು. ಬಯಲು ಪ್ರದೇಶದಲ್ಲಿ ಪಟಾಕಿಗಳನ್ನು ಬಿಸಾಡುವುದು ಸೇರಿ ವಿವಿಧ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.

ರಾಜಾಜಿನಗರದ ನಾರಾಯಣ ನೇತ್ರಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಮಿತ್ತಲ್, ‘ಪಟಾಕಿಗಳಿಂದ ಉಂಟಾದ ಗಾಯಗಳು ಕಣ್ಣುಗಳ ಮೇಲೆ ಪರಿಣಾಮ ಬೀರುತ್ತವೆ. ಈ ಗಾಯಗಳು ಗಂಭೀರ ಹಾನಿ ಅಥವಾ ಶಾಶ್ವತ ದೃಷ್ಟಿ ನಾಶಕ್ಕೆ ಕಾರಣವಾಗುತ್ತವೆ. ಹಬ್ಬದ ಸಂದರ್ಭದಲ್ಲಿ ಸಂಭವಿಸುವ ಪಟಾಕಿ ಗಾಯಗಳಿಗೆ ಇದೇ 19 ರಿಂದ 22ರವರೆಗೆ ದಿನದ 24 ಗಂಟೆಯೂ ನಾರಾಯಣ ನೇತ್ರಾಲಯದ ವಿವಿಧ ಶಾಖೆಗಳಲ್ಲಿ ಚಿಕಿತ್ಸೆ ದೊರೆಯಲಿದೆ’ ಎಂದು ಹೇಳಿದರು.

ಸುಟ್ಟಗಾಯಕ್ಕೆ ಚಿಕಿತ್ಸೆ ಪಟಾಕಿ ಅವಘಡದಿಂದ ಸಂಭವಿಸುವ ಸುಟ್ಟ ಗಾಯಗಳಿಗೆ ತುರ್ತು ಚಿಕಿತ್ಸೆ ನೀಡಲು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಮಹಾಬೋಧಿ ಸುಟ್ಟ ಗಾಯಗಳ ಚಿಕಿತ್ಸಾ ಕೇಂದ್ರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಈ ಕೇಂದ್ರಕ್ಕೆ ಅಗತ್ಯ ವೈದ್ಯರು ಶುಶ್ರೂಷಕರು ಹಾಗೂ ಸಹಾಯಕ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ದಿನದ 24 ಗಂಟೆಯೂ ಇಲ್ಲಿ ವೈದ್ಯಕೀಯ ಸೇವೆ ಲಭ್ಯವಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.