ADVERTISEMENT

`2.7 ಲಕ್ಷ ಕುಟುಂಬಗಳಿಗೆ ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಸೌಲಭ್ಯ'

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 20:01 IST
Last Updated 24 ಡಿಸೆಂಬರ್ 2012, 20:01 IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ವರ್ಷದೊಳಗೆ 2.7 ಲಕ್ಷ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ಸೌಲಭ್ಯವನ್ನು ಒದಗಿಸುವ ಗುರಿ ಇರಿಸಿಕೊಳ್ಳಲಾಗಿದೆ.

`ಆರಂಭಿಕ ಹಂತದಲ್ಲಿ ಬಿಪಿಎಲ್ ಕುಟುಂಬದವರು ಮಾತ್ರ ಯೋಜನೆಯ ಫಲಾನುಭವಿಗಳಾಗಿದ್ದರು. ಇದೀಗ ನಗರದ ಕೊಳಚೆ ಪ್ರದೇಶದ ನಿವಾಸಿಗಳು, ಆಟೋ ರಿಕ್ಷಾ ಚಾಲಕರು, ಸಫಾಯಿ ಕರ್ಮಚಾರಿಗಳು, ವಿಧವೆಯರು ಹಾಗೂ ಅಂಗವಿಕಲರು ಯೋಜನೆಯ ಲಾಭ ಪಡೆಯಲಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ನೆನಪಿನಲ್ಲಿ ಮಂಗಳವಾರದಿಂದ ಈ ಫಲಾನುಭವಿಗಳು ಆರೋಗ್ಯ ಸೇವಾ ಸೌಲಭ್ಯದ ಪ್ರಯೋಜನ ಪಡೆಯುವರು' ಎಂದು ಮೇಯರ್ ಡಿ.ವೆಂಕಟೇಶಮೂರ್ತಿ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಈವರೆಗೆ 20 ಸಾವಿರ ಬಿಪಿಎಲ್ ಕುಟುಂಬದವರು ಸೇರಿದಂತೆ 55 ಸಾವಿರ ಬಡ ಕುಟುಂಬಗಳಿಗೆ ಬಯೋಮೆಟ್ರಿಕ್ ಗುರುತಿನಚೀಟಿ ವಿತರಿಸಲಾಗಿದೆ. ಫಲಾನುಭವಿಗಳಿಗೆ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಸೌಲಭ್ಯವನ್ನು ಒದಗಿಸಲು `ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್' ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಈಗಾಗಲೇ ಒಂದು ಕೋಟಿ ರೂಪಾಯಿಯನ್ನು ಪಾವತಿಸಲಾಗಿದೆ. `ಈಗಾಗಲೇ 269 ಬಿಪಿಎಲ್ ಕುಟುಂಬದವರು ಈ ಯೋಜನೆಯ ಸೌಲಭ್ಯ ಪಡೆದಿದ್ದು, ಈ ಸಂಬಂಧ 1.46 ಕೋಟಿ ಖರ್ಚು ಮಾಡಲಾಗಿದೆ' ಎಂದು ಮಾಹಿತಿ ನೀಡಿದರು.

ಆಡಳಿತ ಪಕ್ಷದ ನಾಯಕ ನಾಗರಾಜ್, ಮಾಜಿ ಮೇಯರ್ ಎಸ್.ಕೆ.ನಟರಾಜ್, ಸದಸ್ಯ ಸತ್ಯನಾರಾಯಣ ಉಪಸ್ಥಿತರಿದ್ದರು.

`ಈ ಯೋಜನೆ ಅನುಷ್ಠಾನಕ್ಕೆ ಹಣಕಾಸಿನ ಅಡಚಣೆ ಎದುರಾಗಿಲ್ಲ. ರಾಷ್ಟ್ರೀಯ ನಗರ ಆರೋಗ್ಯ ಮಿಷನ್ (ಎನ್‌ಯುಎಚ್‌ಎಂ) ಅಗತ್ಯ ಹಣಕಾಸು ನೆರವು ನೀಡಲಿದೆ. ಮಿಷನ್‌ನ 2013-14ನೇ ಸಾಲಿನ ಬಜೆಟ್‌ನಲ್ಲಿ 250 ಕೋಟಿ ರೂಪಾಯಿ ದೊರಕುವ ನಿರೀಕ್ಷೆ ಇದೆ. ಈ ಅನುದಾನದ ನೆರವಿನಿಂದ ಪ್ರತಿ ವಾರ್ಡ್‌ನಲ್ಲಿ ಆರೋಗ್ಯ ಘಟಕ, ವಿಧಾನಸಭಾ ಕ್ಷೇತ್ರದಲ್ಲಿ ಆಸ್ಪತ್ರೆ ಹಾಗೂ ವಲಯ ಮಟ್ಟದಲ್ಲಿ ದೊಡ್ಡ ಆಸ್ಪತ್ರೆಯನ್ನು ನಿರ್ಮಿಸಲಾಗುವುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT