ADVERTISEMENT

3 ದಿನಗಳಲ್ಲಿ 27 ಮಂದಿಯ ಖಾತೆಗೆ ಕನ್ನ!

ಸಿಲಿಕಾನ್‌ ಸಿಟಿಗೆ ತಟ್ಟಿದ ‘ಬಾಟಮ್ ಫಿಶಿಂಗ್’ ಬಿಸಿ l ವಿಘ್ನೇಶನ ಹೆಸರಿನಲ್ಲೇ ಬರುತ್ತಿವೆ ಕರೆಗಳು

ಎಂ.ಸಿ.ಮಂಜುನಾಥ
Published 28 ಅಕ್ಟೋಬರ್ 2018, 20:07 IST
Last Updated 28 ಅಕ್ಟೋಬರ್ 2018, 20:07 IST
   

ಬೆಂಗಳೂರು: ಪ್ರಪಂಚದ ಯಾವುದೋ ಮೂಲೆಯಲ್ಲಿ ಕುಳಿತು ಗ್ರಾಹಕರ ಬ್ಯಾಂಕ್ ಖಾತೆಗಳಲ್ಲಿರುವ ಹಣಕ್ಕೆ ಗಾಳ ಹಾಕುವ ‘ಬಾಟಮ್‌ ಫಿಶಿಂಗ್’ ಜಾಲ, ವಿವಿಧ ಆಮಿಷಗಳನ್ನೊಡ್ಡಿ ಮೂರೇ ದಿನಗಳಲ್ಲಿ ನಗರದ 27 ಮಂದಿಯ ಖಾತೆಗಳಿಂದ ಹಣ ಎಗರಿಸಿದೆ.

ವಿಮಾನಯಾನ ಸಂಸ್ಥೆಗಳಲ್ಲಿ ಹಾಗೂ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ಕೆಲವರಿಗೆ ನಂಬಿಸಿದ್ದರೆ, ಮತ್ತೆ ಕೆಲವರಿಗೆ, ‘ನಿಮಗೆ ಬಹುಮಾನ ಲಭಿಸಿದೆ, ಲಾಟರಿ ಗೆದ್ದಿದ್ದೀರ, ಶಾಪಿಂಗ್ ಕೂಪನ್‌ ಬಂದಿದೆ, ವಿದೇಶ ಪ್ರವಾಸಕ್ಕೆ ಆಯ್ಕೆಯಾಗಿದ್ದೀರ....’ ಎಂಬ ಆಸೆ ತೋರಿಸಿ ಒಬ್ಬೊಬ್ಬರಿಂದ ₹ 10 ಸಾವಿರದಿಂದ ₹ 50 ಸಾವಿರದವರೆಗೆ ಪೀಕಿ
ದ್ದಾರೆ. ಅ.24 ರಿಂದ ಅ.26ರ ನಡುವೆಯೇ ‘ಬಾಟಂ ಫಿಶಿಂಗ್’ ವಿರುದ್ಧ 27 ಮಂದಿ ಸೈಬರ್ ಕ್ರೈಂ ಠಾಣೆಗೆ ದೂರು ಕೊಟ್ಟಿದ್ದಾರೆ.

ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಮೊಬೈಲ್ ಕರೆ ವಿವರ (ಸಿಡಿಆರ್), ಐಪಿ ವಿಳಾಸ ಹಾಗೂ ಬ್ಯಾಂಕ್ ಖಾತೆಗಳ ಮಾಹಿತಿ ಆಧರಿಸಿ ವಂಚಕರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಅವರ ಬಂಧನ ಕಷ್ಟ ಸಾಧ್ಯ ಎಂದೂ ಅವರೇ ಹೇಳುತ್ತಿದ್ದಾರೆ.

ADVERTISEMENT

ಏನಿದು ಬಾಟಮ್ ಫಿಶಿಂಗ್?: ಸಾರ್ವಜನಿಕರ ಬ್ಯಾಂಕ್ ಖಾತೆಗಳಿಂದ ಅಲ್ಪ ಮೊತ್ತದ ಹಣವನ್ನು ಅಕ್ರಮವಾಗಿ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುವುದೇ ಬಾಟಮ್ ಫಿಶಿಂಗ್.

ಈ ಕೃತ್ಯವೆಸಗುವ ವಂಚಕರು ₹1 ಸಾವಿರದಿಂದ ₹50 ಸಾವಿರದ ಒಳಗೆ ಮಾತ್ರ ದೋಚುತ್ತಾರೆ. ಸಣ್ಣ ಪ್ರಮಾಣದಲ್ಲಿ ಹಣ ಕಳೆದು
ಕೊಂಡರೆ ನಾಗರಿಕರು ಪೊಲೀಸರಿಗೆ ದೂರು ಕೊಡುವುದಿಲ್ಲ. ಒಂದು ವೇಳೆ ದೂರು ಕೊಟ್ಟರೂ, ಕಡಿಮೆ ಮೊತ್ತವಾದ ಕಾರಣ ಪೊಲೀಸರು ತನಿಖೆ ನಡೆಸುವುದಿಲ್ಲ ಎಂಬುದು ದಂಧೆಕೋರರ ವಿಶ್ವಾಸ.

ವಿಘ್ನೇಶನ ಹೆಸರಿನಲ್ಲೇ ಕರೆಗಳು: ರಾಮಯ್ಯ ಲೇಔಟ್‌ನ ಸೋಮ್ಯಾ ಸಿಂಗ್ ಎಂಬ ಯುವತಿಗೆ ಅ.24ರಂದು ಕರೆ ಮಾಡಿರುವ ವ್ಯಕ್ತಿ
ಯೊಬ್ಬ, ‘ನನ್ನ ಹೆಸರು ವಿಘ್ನೇಶ್ ಭಟ್ಟಾಚಾರ್ಯ. ನೌಕರಿ ಡಾಟ್‌ ಕಾಂ ಕಂಪನಿಯ ಸಿಇಒ. ನೀವು ಉದ್ಯೋಗ ಅರಸಿ ಸಲ್ಲಿಸಿರುವ ಅರ್ಜಿ ನೋಡಿದೆ. ಶೈಕ್ಷಣಿಕ ಸಾಧನೆ ಹಾಗೂ ಭವಿಷ್ಯದ ಗುರಿಗಳ ಬಗ್ಗೆ ನೀವು ಹೇಳಿರುವುದು ಇಷ್ಟವಾಯಿತು.

ಹೀಗಾಗಿ, ನಮ್ಮಲ್ಲೇ ಕೆಲಸ ಕೊಡಲು ನಿರ್ಧರಿಸಿದ್ದೇನೆ. ಉದ್ಯೋಗದ ನೋಂದಣಿ ಶುಲ್ಕ, ದಾಖಲೆ ಪರಿಶೀಲನಾ ಶುಲ್ಕ ಹಾಗೂ ತರಬೇತಿ ಶುಲ್ಕವೆಂದು ಕೂಡಲೇ ₹ 31,800 ಪಾವತಿಸಿ’ ಎಂದಿದ್ದ. ಆ ಮಾತುಗಳನ್ನು ಸಂಪೂರ್ಣವಾಗಿ ನಂಬಿದ ಸೋಮ್ಯಾ, ಆ ದಿನವೇ ವಂಚಕನ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದ್ದಾರೆ. ಹಣ ವರ್ಗಾವಣೆಯಾದ ಕೂಡಲೇ ಆತನ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಆ ನಂತರ ಸೋಮ್ಯಾ ಸೈಬರ್ ಕ್ರೈಂ ಠಾಣೆಯ ಮೆಟ್ಟಿಲೇರಿದ್ದಾರೆ.

ಅದೇ ರೀತಿ ಲಕ್ಕಸಂದ್ರದ ಭವ್ಯಾ ಎಂಬುವರಿಗೂ ವಿಘ್ನೇಶ್ ಎಂಬ ಹೆಸರಿನಿಂದಲೇ ಕರೆ ಬಂದಿದ್ದು, ‘ನೌಕರಿ ಪ್ರೈಮ್ ಕಂಪನಿ’ಯಲ್ಲಿ ಉನ್ನತ ಹುದ್ದೆ ನೀಡುವುದಾಗಿ ವಂಚಕ ₹ 16,992 ಮೊತ್ತವನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ.

‘ಎರಡು ತಿಂಗಳ ಹಿಂದೆ ಪದ್ಮನಾಭನಗರದ ಎಸ್.ಕಿರಣ್ ಎಂಬುವರಿಗೆ ಕರೆ ಮಾಡಿ ₹ 57 ಸಾವಿರ ಕಿತ್ತಿದ್ದ ವ್ಯಕ್ತಿ ಕೂಡ ತನ್ನ ಹೆಸರನ್ನು ವಿಘ್ನೇಶ್ ಭಟ್ಟಾಚಾರ್ಯ ಎಂದು ಹೇಳಿಕೊಂಡಿದ್ದ.

ಈ ಅಂಶ ಗಳನ್ನು ಗಮನಿಸಿದರೆ, ಒಂದೇ ಗ್ಯಾಂಗ್ ಕಾರ್ಯಾಚರಣೆ ನಡೆಸುತ್ತಿರುವುದು ಸ್ಪಷ್ಟ. ಆದರೆ, ಜಾಲದ ಬಗ್ಗೆ ಸಣ್ಣ ಸುಳಿವೂ ಸಿಗುತ್ತಿಲ್ಲ’ ಎಂದು ಸೈಬರ್ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.