ADVERTISEMENT

2,772 ಪ್ರಯಾಣಿಕರ ತಂಗುದಾಣ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 20:03 IST
Last Updated 17 ಜುಲೈ 2017, 20:03 IST
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಿರ್ಮಿಸಲಾಗಿರುವ ಪ್ರಯಾಣಿಕರ ತಂಗುದಾಣ
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಿರ್ಮಿಸಲಾಗಿರುವ ಪ್ರಯಾಣಿಕರ ತಂಗುದಾಣ   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಗರದಲ್ಲಿ 2,772 ಪ್ರಯಾಣಿಕರ ತಂಗುದಾಣ ನಿರ್ಮಿಸುತ್ತಿದೆ.

ಇದಕ್ಕಾಗಿ ಸೈನ್‌ ಪೋಸ್ಟ್‌ ಇಂಡಿಯಾ, ಒ ಅಡ್ವರ್ಟೈಸ್‌ಮೆಂಟ್‌ ಸರ್ವಿಸಸ್‌, ಡಿಜಿಟಲ್‌ ಆ್ಯಡ್‌ ಸೆನ್ಸ್‌ ಹಾಗೂ ಟೈಮ್ಸ್‌ ಇನೋವೆಟಿವ್‌ ಮೀಡಿಯಾ  ಕಂಪೆನಿಗಳೊಂದಿಗೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡಿದೆ. ಪ್ರಯಾಣಿಕರ ತಂಗುದಾಣಗಳ ನಿರ್ಮಾಣ, ನಿರ್ವಹಣೆ ಜವಾಬ್ದಾರಿಯನ್ನು ಈ ಕಂಪೆನಿಗಳು ಹೊತ್ತಿವೆ.

ಕಂಪೆನಿಗಳು 5 ವರ್ಷಗಳ ಮತ್ತು 20 ವರ್ಷಗಳ ಅವಧಿಯ ಒಪ್ಪಂದ ಮಾಡಿಕೊಂಡಿವೆ. ತಂಗುದಾಣದಲ್ಲಿ ಪ್ರದರ್ಶಿಸುವ ಜಾಹೀರಾತುಗಳ ಬಾಡಿಗೆ ಮತ್ತು ನೆಲಬಾಡಿಗೆಯನ್ನು ಕಂಪೆನಿಗಳು ಬಿಬಿಎಂಪಿಗೆ ಪಾವತಿಸಲಿವೆ.

ADVERTISEMENT

ನಗರದಲ್ಲಿನ ವಾಣಿಜ್ಯ ಪ್ರದೇಶಗಳಿಗೆ ಅನುಗುಣವಾಗಿ ಪಾಲಿಕೆ ನೆಲಬಾಡಿಗೆ ನಿಗದಿಪಡಿಸಿದೆ. ತಂಗುದಾಣಗಳಲ್ಲಿ  ಪ್ರದರ್ಶಿಸುವ ಜಾಹೀರಾತುಗಳಿಗೆ ಪ್ರತಿ ಚದರ ಅಡಿಗೆ ₹ 200 ಮತ್ತು ₹ 260 ವಾರ್ಷಿಕ ಬಾಡಿಗೆ ನಿಗದಿ ಪಡಿಸಲಾಗಿದೆ. ಇದರಿಂದ ಬಿಬಿಎಂಪಿಗೆ ವರ್ಷಕ್ಕೆ ₹1.50 ಕೋಟಿ ವರಮಾನ ಬರಲಿದೆ.

‘ಬಸ್‌ ತಂಗುದಾಣಗಳನ್ನು ನಿರ್ಮಿಸಬೇಕಾದ ಸ್ಥಳವನ್ನು ಸ್ಥಳೀಯ ಜನಪ್ರತಿನಿಧಿಗಳು, ಬಿಎಂಟಿಸಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಗುರುತಿಸಲಾಗಿದೆ. ಕೆಲವೆಡೆ, ರಸ್ತೆ ಬದಿಯ ಜಮೀನಿನ ಮಾಲೀಕರು ತಂಗುದಾಣ ನಿರ್ಮಾಣ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಅಂತಹ ಪ್ರಕರಣಗಳಲ್ಲಿ ಪರ್ಯಾಯ ಸ್ಥಳ ಗುರುತಿಸುತ್ತಿದ್ದೇವೆ’ ಎಂದು ತಂಗುದಾಣಗಳ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪಾಲಿಕೆಯ ಸಂಚಾರ ಎಂಜಿನಿಯರಿಂಗ್‌ ಘಟಕದ ಅಧಿಕಾರಿಯೊಬ್ಬರು ತಿಳಿಸಿದರು.

‘ತಂಗುದಾಣಗಳಿಂದ  ವರಮಾನ ಬರುವುದರಿಂದ ಪಾಲಿಕೆಯ ಆರ್ಥಿಕ ಹೊರೆ ಕಡಿಮೆ ಆಗಲಿದೆ. ನೆಲಬಾಡಿಗೆ ರೂಪದಲ್ಲಿ ವರ್ಷಕ್ಕೆ ₹ 56 ಲಕ್ಷ ಬಿಬಿಎಂಪಿ ಖಜಾನೆಗೆ ಸೇರಲಿದೆ’ ಎಂದು ಅವರು ತಿಳಿಸಿದರು. ಕೆಲವು ಹಳೆಯ ತಂಗುದಾಣಗಳನ್ನು ತೆರವುಗೊಳಿಸಲಾಗಿದೆ. ಇವುಗಳ ಸಾಮಗ್ರಿಗಳನ್ನು ಹೇಗೆ ವಿಲೇವಾರಿ  ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.