ADVERTISEMENT

ಬೈಕ್‌ ಟ್ಯಾಕ್ಸಿಗೆ ಮೂರು ಕಂಪನಿಗಳ ಆಸಕ್ತಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 20:21 IST
Last Updated 22 ಜುಲೈ 2021, 20:21 IST

ಬೆಂಗಳೂರು: ಮುಂದಿನ ತಿಂಗಳಿಂದಲೇ ಬೈಕ್ ಟ್ಯಾಕ್ಸಿಗೆ ಪರವಾನಗಿ ನೀಡಲು ಸಾರಿಗೆ ಇಲಾಖೆ ಸಜ್ಜಾಗುತ್ತಿರುವ ನಡುವೆ, ಬೈಕ್ ಟ್ಯಾಕ್ಸಿ ಸೇವೆ ಒದಗಿಸಲು ರ‍್ಯಾಪಿಡೋ ಸೇರಿ ಮೂರು ಕಂಪನಿಗಳು ಇದಕ್ಕೆ ಆಸಕ್ತಿ ತೋರಿಸಿವೆ.

ಬೈಕ್ ಮಾಲೀಕರಿಗೆ ಸ್ವಯಂ ಉದ್ಯೋಗದ ಜತೆಗೆ ಮೊದಲ ಮತ್ತು ಕೊನೆಯ ತಾಣಕ್ಕೂ ಸಾರಿಗೆ ಸೇವೆ ಒದಗಿಸುವ ಉದ್ದೇಶದಿಂದ ಸರ್ಕಾರ ಕಳೆದ ವಾರ ಬೈಕ್ ಟ್ಯಾಕ್ಸಿ ಯೋಜನೆ ಘೋಷಿಸಿದೆ. 5 ಕಿಲೋ ಮೀಟರ್ ಮತ್ತು 10 ಕಿಲೋ ಮೀಟರ್‌ಗೆ ಪ್ರತ್ಯೇಕ ದರ ನಿಗದಿ ಮಾಡಿ ಬಳಿಕ ಪರವಾನಗಿ ನೀಡಲು ಸಾರಿಗೆ ಇಲಾಖೆ ಆಲೋಚಿಸಿದೆ.

ಎರಡೂ ಹಂತದ ದರಗಳನ್ನು ನಿಗದಿಪಡಿಸುವ ಕೆಲಸ ನಡೆಯುತ್ತಿದೆ. ಸ್ಪರ್ಧಾತ್ಮಕ ರಿಯಾಯಿತಿ ದರ ನಿಗದಿ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸಾರ್ವಜನಿಕರ ಹಿತಾಸಕ್ತಿಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ದರ ನಿಗದಿ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸದ್ಯಕ್ಕೆ ರ‍್ಯಾಪಿಡೋ ಮತ್ತು ಬೌನ್ಸ್ ಕಂಪನಿಗಳು ಆಸಕ್ತಿ ವ್ಯಕ್ತಪಡಿಸಿವೆ. ಮತ್ತೊಂದು ಕಂಪನಿ ವಿವರ ಕೋರಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನವೋದ್ಯಮ ಕಂಪನಿಗಳು ಮುಂದೆ ಬರುವ ನಿರೀಕ್ಷೆ ಇದೆ ಎಂದು ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.

ಈ ನಡುವೆ, ಬೈಕ್ ಟ್ಯಾಕ್ಸಿಗೆ ನೀಡಿರುವ ಅನುಮತಿಯನ್ನು ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ವಿರೋಧಿಸಿದ್ದಾರೆ. ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಜೀವನ ಸಾಗಿಸುತ್ತಿರುವ ಟ್ಯಾಕ್ಸಿ ಮತ್ತು ಆಟೋರಿಕ್ಷಾ ಚಾಲಕರಿಗೆ ಅನ್ಯಾಯವಾಗಲಿದೆ ಎಂದು ಹೇಳಿದ್ದಾರೆ.

‘ಲಕ್ಷಾಂತರ ಚಾಲಕರನ್ನು ಇಕ್ಕಟ್ಟಿಗೆ ಸಿಲುಕಿಸಲಾಗುತ್ತಿದೆ. ಬೈಕ್ ಟ್ಯಾಕ್ಸಿಗೆ ನೀಡಿರುವ ಅನುಮತಿಯನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು’ ಎಂದು ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.