ADVERTISEMENT

₹ 3 ಲಕ್ಷ ಲಂಚ: ಇನ್‌ಸ್ಪೆಕ್ಟರ್, ಪಿಎಸ್ಐ ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 15:57 IST
Last Updated 14 ಮಾರ್ಚ್ 2024, 15:57 IST
ಲಂಚ–ಪ್ರಾತಿನಿಧಿಕ ಚಿತ್ರ
ಲಂಚ–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ವಂಚನೆ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಆರೋಪಿಯನ್ನು ಬಿಡುಗಡೆ ಮಾಡಲು ₹3 ಲಕ್ಷಕ್ಕೆ ಬೇಡಿಕೆ ಇರಿಸಿದ್ದ ಆರೋಪದಡಿ ಕೆ.ಆರ್.ಪುರ ಠಾಣೆಯ ಇನ್‌ಸ್ಪೆಕ್ಟರ್ ಕೆ. ವಜ್ರಮುನಿ ಹಾಗೂ ಪಿಎಸ್‌ಐ ಎನ್‌. ರಮ್ಯಾ ಲೋಕಾಯಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ವಂಚನೆಗೆ ಸಂಬಂಧಪಟ್ಟಂತೆ ಕೆ.ಆರ್.ಪುರ ಠಾಣೆಯಲ್ಲಿ ಇತ್ತೀಚೆಗೆ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣದ ಆರೋಪಿ, ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವಾಗಲೇ ಆರೋಪಿಯನ್ನು ಅಕ್ರಮವಾಗಿ ವಶಕ್ಕೆ ಪಡೆದಿದ್ದ ಪೊಲೀಸರು, ಠಾಣೆಯಲ್ಲಿ ಇರಿಸಿಕೊಂಡಿದ್ದರೆಂದು ಮೂಲಗಳು ಹೇಳಿವೆ.

ಠಾಣೆಯಿಂದ ಬಿಟ್ಟು ಕಳುಹಿಸಲು ₹3 ಲಕ್ಷ ನೀಡುವಂತೆ ಪಿಎಸ್‌ಐ ಮೂಲಕ ಇನ್‌ಸ್ಪೆಕ್ಟರ್ ಬೇಡಿಕೆ ಇರಿಸಿದ್ದರು. ಇದು ಗೊತ್ತಾಗುತ್ತಿದ್ದಂತೆ ಆರೋಪಿ ಪರ ವಕೀಲ, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

‘ಮಹಿಳಾ ಪಿಎಸ್‌ಐ ರಮ್ಯಾ ಹಾಗೂ ಇನ್‌ಸ್ಪೆಕ್ಟರ್ ವಜ್ರಮುನಿ ಅವರು ತಲಾ ₹50 ಸಾವಿರ ಪಡೆದುಕೊಂಡಿದ್ದರು. ಇದೇ ಸಂದರ್ಭದಲ್ಲಿ ದಾಳಿ ಮಾಡಿ, ಹಣದ ಸಮೇತ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.