ADVERTISEMENT

30ರಿಂದ ಅಧಿವೇಶನ: ಮಹತ್ವದ ನಾಲ್ಕು ಮಸೂದೆಗಳ ಮಂಡನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನ ಇದೇ 30ರಂದು ನಡೆಯಲಿದ್ದು, ಅಂದು ಮಧ್ಯಾಹ್ನ 12.15ಕ್ಕೆ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮತ್ತು ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಮಂಗಳವಾರ ಭಾರದ್ವಾಜ್ ಅವರನ್ನು ಭೇಟಿಯಾಗಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವಂತೆ ಆಹ್ವಾನ ನೀಡಿದ ನಂತರ ಪ್ರತ್ಯೇಕ ಪತ್ರಿಕಾಗೋಷ್ಠಿಯಲ್ಲಿ ಅಧಿವೇಶನ ಕುರಿತು ಮಾಹಿತಿ ನೀಡಿದರು.

ಬೋಪಯ್ಯ ಮಾತನಾಡಿ, `ಜ.30ರಿಂದ ಫೆ.10ರವರೆಗೆ ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದೆ. ಈ ಸಂದರ್ಭದಲ್ಲಿ ಮೊದಲ ದಿನ ಹೊರತುಪಡಿಸಿ ಉಳಿದ ಎಲ್ಲ ದಿನಗಳಂದೂ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ಶೂನ್ಯವೇಳೆ ನಡೆಯಲಿದೆ~ ಎಂದರು.

ನಾಲ್ಕು ಮಸೂದೆ: ಈ ಸಲದ ಅಧಿವೇಶನದಲ್ಲಿ ನಾಲ್ಕು ಮಸೂದೆಗಳನ್ನು ಮಂಡಿಸಲಾಗುವುದು. ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ-2007; ಸಹ್ಯಾದ್ರಿ ಅಭಿವೃದ್ಧಿ ಪ್ರಾಧಿಕಾರ ಮಸೂದೆ-2011; ಕರ್ನಾಟಕ ವಿಧಾನ ಪರಿಷತ್ತಿನಿಂದ ಅಂಗೀಕಾರವಾದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಮಸೂದೆ-2011; ಕರ್ನಾಟಕ ಪುರಸಭೆಗಳು ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ಮಸೂದೆ-2011.

ವಿಧಾನಸಭಾ ಸದಸ್ಯರಿಂದ ಒಟ್ಟು 674 ಪ್ರಶ್ನೆಗಳು ಬಂದಿದ್ದು, ಅವುಗಳಲ್ಲಿ 112 ಅನ್ನು ಚುಕ್ಕೆ ಗುರುತಿನ ಪ್ರಶ್ನೆಗಳಾಗಿ ಸ್ವೀಕರಿಸಲಾಗಿದೆ ಎಂದರು.

ಹದಿನಾರು ಮಂದಿ ಶಾಸಕರ ಅನರ್ಹತೆ ಮತ್ತು ಅದನ್ನು ಸುಪ್ರೀಂಕೋರ್ಟ್ ರದ್ದು ಮಾಡಿದ ಪ್ರಕರಣದ ಬಗ್ಗೆ ಈ ಹಿಂದೆ ನಡೆದ ಸ್ಪೀಕರ್‌ಗಳ ಸಮ್ಮೇಳನದಲ್ಲಿ ಚರ್ಚಿಸಲು ಸಲಹೆ ಮಾಡಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ಅದು ಚರ್ಚೆಗೆ ಬರಲಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪರಿಷತ್ತಿನ ಸದಸ್ಯರಿಂದ ಈಗಾಗಲೇ 450 ಪ್ರಶ್ನೆಗಳು ಬಂದಿದ್ದು, ಇವುಗಳಲ್ಲಿ 386 ಚುಕ್ಕೆಗುರುತಿನ ಮತ್ತು 64 ಚುಕ್ಕೆಗುರುತಿಲ್ಲದ ಪ್ರಶ್ನೆಗಳಾಗಿವೆ. ಅಲ್ಲದೆ 16 ಗಮನ ಸೆಳೆಯುವ ಸೂಚನೆಗಳು ಬಂದಿವೆ ಎಂದು ಶಂಕರಮೂರ್ತಿ ತಿಳಿಸಿದರು.

ಆಂಧ್ರಪ್ರದೇಶದ ಚಂಚಲಗೂಡ ಕಾರಾಗೃಹದಲ್ಲಿರುವ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಅವರಿಗೂ ಜೈಲು ಅಧೀಕ್ಷಕರ ಮೂಲಕ ಕಲಾಪದ ನೋಟಿಸ್ ಕಳುಹಿಸಲಾಗಿದೆ. ಉಳಿದ ವಿಚಾರ ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.