ADVERTISEMENT

34 ಸಾವಿರ ಕೋಟಿ ನಷ್ಟ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:40 IST
Last Updated 26 ಅಕ್ಟೋಬರ್ 2011, 19:40 IST

ಬೆಂಗಳೂರು:  `ತಂತ್ರಜ್ಞಾನವು ಹಲವು ಸಂದರ್ಭಗಳಲ್ಲಿ ವರವಾಗುವ ಬದಲು ಶಾಪವಾಗಿದೆ~ ಎಂದು ಕಾನೂನು ಸಲಹೆಗಾರ ನಾ.ವಿಜಯಶಂಕರ್ ನುಡಿದರು. `ಬೆಂಗಳೂರು ವಿಜ್ಞಾನ ವೇದಿಕೆ~ಯು ನಗರದ ನ್ಯಾಷನಲ್ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ `ಅಂತರ್ಜಾಲ ಅಪರಾಧಗಳು ಮತ್ತು ರಕ್ಷಣೆ~ ಕುರಿತು ಅವರು ಉಪನ್ಯಾಸ ನೀಡಿದರು.

`ನಾವು ಜೀವಿಸುತ್ತಿರುವ ಸಮಾಜ ಡಿಜಿಟಲ್ ಸಮಾಜವಾಗಿದ್ದು, ನಮ್ಮ ಗಮನಕ್ಕೆ ಬಾರದೆಯೇ ನಮಗೆ ಸಂಬಂಧಪಟ್ಟ ಎಷ್ಟೋ ಮಾಹಿತಿಗಳು ಬೇರೆಯವರಿಗೆ ಸೋರಿಕೆಯಾಗುತ್ತಿವೆ. ಮಾಹಿತಿ ತಂತ್ರಜ್ಞಾನದಿಂದ ಲಾಭವಾದಷ್ಟು ನಷ್ಟವೂ ಆಗುತ್ತಿದೆ. ಆದ್ದರಿಂದಲೇ ಭಾರತ ಸರ್ಕಾರ ಸೈಬರ್ ಅಪರಾಧಗಳ ಕಾನೂನನ್ನು 2000ರಲ್ಲಿ ಜಾರಿಗೊಳಿಸಿದೆ~ ಎಂದು ಹೇಳಿದರು.

`ಸೈಬರ್ ಅಪರಾಧಗಳಿಂದ ಈ ವರ್ಷ ಒಟ್ಟು 34 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಅದರಲ್ಲಿ ಕ್ರೆಡಿಟ್ ಕಾರ್ಡ್, ಎಟಿಎಂ ಕಾರ್ಡುಗಳ ದುರ್ಬಳಕೆಯಿಂದಾದ ನಷ್ಟ 6,500 ಕೋಟಿ ರೂಪಾಯಿಗಳು~ ಎಂದು ಮಾಹಿತಿ  ನೀಡಿದರು.

`ಎಟಿಎಂ ಕಾರ್ಡು ನಮ್ಮ ಬಳಿ ಇದ್ದಾಗಲೂ ಬೇರೆಯವರು ಅದರ ಮಾಹಿತಿಯನ್ನು ಕದ್ದು ನಮ್ಮ ಖಾತೆಯ ಹಣವನ್ನು ಪಡೆದ ಹಲವಾರು ಪ್ರಕರಣಗಳು ದಾಖಲಾಗಿವೆ. ಬ್ಯಾಂಕುಗಳು ತಮ್ಮ ಎಟಿಎಂಗಳಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸದೇ ಇರುವುದು ಮತ್ತು ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಅಳವಡಿಸದೇ ಇರುವುದರಿಂದ ಇಂಥ ಅವಘಡಗಳು ಸಂಭವಿಸುವ ಪ್ರಮಾಣ ಹೆಚ್ಚು~ ಎಂದರು.

`ಇ ಮೇಲ್ ಬಂದ ನಂತರ ಯುವಕರು ಅಂಚೆ ಕಾರ್ಡುಗಳನ್ನು ಬಳಸುವುದನ್ನೇ ನಿಲ್ಲಿಸಿದ್ದಾರೆ. ಇನ್ನಷ್ಟು ವರ್ಷಗಳು ಕಳೆದರೆ ಕಾರ್ಡುಗಳೆಂದರೆ ಏನು ಎಂದು ಕೇಳುವ ಸಂದರ್ಭಗಳೂ ಬರಬಹುದು. ಆದರೆ ತಾಂತ್ರಿಕತೆ ಮುಂದುವರೆದಂತೆಲ್ಲ ಹೆಚ್ಚಾಗುತ್ತಿರುವ ಸೈಬರ್ ಅಪರಾಧಗಳಿಗೂ ಕಡಿವಾಣ ಬೀಳಬೇಕು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.