ಬೆಂಗಳೂರು: ಮಾನಹಾನಿ ಮೊಕದ್ದಮೆ ಒಂದಕ್ಕೆ ಸಂಬಂಧಿಸಿದಂತೆ `ಹಾಯ್ ಬೆಂಗಳೂರ್~ ವಾರಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಅವರಿಗೆ 35 ಲಕ್ಷ ರೂಪಾಯಿಗಳ ದಂಡ ವಿಧಿಸಿ ನಗರ ಸಿವಿಲ್ ಕೋರ್ಟ್ ಮಂಗಳವಾರ ಆದೇಶಿಸಿದೆ.
ಇವರ ವಿರುದ್ಧ 2003ರಲ್ಲಿ ಮಾನಹಾನಿ ಮೊಕದ್ದಮೆ ದಾಖಲು ಮಾಡಿದ್ದ `ಅಲ್ಟ್ರಾ ಎಂಟರ್‌ಟೇನ್‌ಮೆಂಟ್ ಸೊಲುಷನ್ಸ್ ಲಿಮಿಟೆಡ್~ಗೆ ಈ ಹಣವನ್ನು ಎರಡು ತಿಂಗಳ ಒಳಗೆ ನೀಡುವಂತೆ ಕೋರ್ಟ್ ಆದೇಶಿಸಿದೆ.
ಕಂಪೆನಿಯು 2001ನೇ ಸಾಲಿನಲ್ಲಿ `ಆನ್‌ಲೈನ್~ ಲಾಟರಿ (ಪ್ಲೇವಿನ್) ನಡೆಸುತ್ತಿತ್ತು. ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡು ಅದರ ಮಾರ್ಗಸೂಚಿ ಅನ್ವಯ ಲಾಟರಿ ವ್ಯಾಪಾರ ನಡೆಸುತ್ತಿತ್ತು.
ಆದರೆ ಕಂಪೆನಿಯು ಕಾನೂನುಬಾಹಿರವಾಗಿ ವ್ಯಾಪಾರ ನಡೆಸುತ್ತಿದ್ದು, ಸಾರ್ವಜನಿಕರಿಗೆ ವಂಚನೆ ಮಾಡುತ್ತಿದೆ ಎಂದು `ಹಾಯ್ ಬೆಂಗಳೂರ್~ ಪತ್ರಿಕೆಯಲ್ಲಿ 2003ರ ಮಾರ್ಚ್ ಹಾಗೂ ಮೇ ತಿಂಗಳಿನಲ್ಲಿ ಸುದ್ದಿ ಪ್ರಕಟವಾಗಿತ್ತು.
ಈ ರೀತಿ ಪ್ರಕಟವಾದ ತಪ್ಪು ಸುದ್ದಿಯಿಂದ ತಮ್ಮ ಮಾನಕ್ಕೆ ಹಾನಿಯಾಗಿದೆ ಎಂದು ದೂರಿ ಕಂಪೆನಿಯ ಮಾಲೀಕರು ಪತ್ರಿಕೆ ವಿರುದ್ಧ ಮೊಕದ್ದಮೆ ದಾಖಲು ಮಾಡಿದ್ದರು.
ದಂಡದ ಜೊತೆಗೆ ಇಲ್ಲಿಯವರೆಗಿನ ನ್ಯಾಯಾಲಯದ ವೆಚ್ಚವನ್ನೂ ಅರ್ಜಿದಾರರಿಗೆ ನೀಡುವಂತೆ ಕೋರ್ಟ್ ಆದೇಶಿಸಿದೆ. ತಪ್ಪು ಸುದ್ದಿ ಪ್ರಕಟಗೊಂಡಿರುವುದಕ್ಕೆ ಕ್ಷಮೆ ಕೋರಿ ಪತ್ರಿಕೆಯಲ್ಲಿ ಮಾತ್ರವಲ್ಲದೇ ಪ್ರಮುಖ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟಣೆ ನೀಡುವಂತೆಯೂ ನ್ಯಾಯಾಲಯ ನಿರ್ದೇಶಿಸಿದೆ. ಕಂಪೆನಿಯ ಪರವಾಗಿ ಹೊಳ್ಳ ಮತ್ತು ಹೊಳ್ಳ ಕಂಪೆನಿಯ ಬಿ.ಗಿರೀಶ್ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.