ADVERTISEMENT

‘ಅಧ್ಯಾತ್ಮದ ಸ್ಪರ್ಶವಿಲ್ಲದ ಜ್ಞಾನ ಅಪ್ರಯೋಜಕ’

ಮಹಾಬೋಧಿ ಸಂಶೋಧನಾ ಕೇಂದ್ರದ ನಿರ್ದೇಶಕ ಭಿಕ್ಕು ಬುದ್ಧದತ್ತ ಅಭಿಮತ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 15:36 IST
Last Updated 29 ಜನವರಿ 2023, 15:36 IST
ನಾಲ್ಕು ಪುಸ್ತಕಗಳನ್ನು ಭಿಕ್ಕು ಬುದ್ಧದತ್ತ ಬಿಡುಗಡೆ ಮಾಡಿದರು. ರೋಹಿತ್ ಚಕ್ರತೀರ್ಥ, ಜಿ.ಬಿ. ಹರೀಶ, ಶತಾವಧಾನಿ ಆರ್. ಗಣೇಶ್ ಮತ್ತಿತರರು ಇದ್ದಾರೆ.
ನಾಲ್ಕು ಪುಸ್ತಕಗಳನ್ನು ಭಿಕ್ಕು ಬುದ್ಧದತ್ತ ಬಿಡುಗಡೆ ಮಾಡಿದರು. ರೋಹಿತ್ ಚಕ್ರತೀರ್ಥ, ಜಿ.ಬಿ. ಹರೀಶ, ಶತಾವಧಾನಿ ಆರ್. ಗಣೇಶ್ ಮತ್ತಿತರರು ಇದ್ದಾರೆ.   

ಬೆಂಗಳೂರು: ‘ಎರಡೂವರೆ ಸಾವಿರ ವರ್ಷಗಳ ಹಿಂದೆ ಭಗವಾನ್ ಬುದ್ಧ ಹೇಳಿದ ಸರಳತೆ, ಜ್ಞಾನ, ಚಿತ್ತ ನಿಯಂತ್ರಣ, ಸತ್ಯ, ಧರ್ಮಗಳ ಮೇಲಿನ ಬೋಧನೆಗಳು ಇಂದಿಗೂ ಪ್ರಸ್ತುತ. ಅಧ್ಯಾತ್ಮದ ಸ್ಪರ್ಶವಿಲ್ಲದ ಜ್ಞಾನ ಅಪ್ರಯೋಜಕ’ ಎಂದು ಮಹಾಬೋಧಿ ಸಂಶೋಧನ ಕೇಂದ್ರದ ನಿರ್ದೇಶಕ ಭಿಕ್ಕು ಬುದ್ಧದತ್ತ ಹೇಳಿದರು.

ಅಯೋಧ್ಯಾ ಪಬ್ಲಿಕೇಶನ್ಸ್ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ‘ಹಿಂದೂ ಎಂದರೇನು?’, ‘ಎದ್ದೇಳು ಭಾರತೀಯ’, ‘ಸ್ವಾಮಿ ಸಿದ್ಧೇಶ್ವರರ ಕಥೆಗಳು’ ಹಾಗೂ ‘ಧಮ್ಮಪದ’ ಕೃತಿಯನ್ನು ಬಿಡುಗಡೆ ಮಾಡಿ, ಮಾತನಾಡಿದರು. ‘ಬುದ್ಧ ಪ್ರೇಮದ ಸಂದೇಶವನ್ನು ಜಗತ್ತಿಗೆಲ್ಲ ಸಾರಿದ. ಆತನು ಜೇತವನದಲ್ಲಿ ಶ್ರಮಣರಿಗೆ ನೀಡಿದ ಸಂದೇಶಗಳ ಸಾರ ಸಂಗ್ರಹವೇ ಧಮ್ಮಪದ. ಇದರಲ್ಲಿರುವ ಒಂದೊಂದು ಗಾಹೆಯೂ ಮನನ ಮತ್ತು ಅನುಸರಣೆಗೆ ಯೋಗ್ಯವಾದದ್ದು. ಜಗತ್ತಿನ ವ್ಯಕ್ತಿಗಳೆಲ್ಲರೂ ಧಮ್ಮಪದದ ಗಾಹೆಗಳನ್ನು ಅನುಸಂಧಾನ ಮಾಡಿಕೊಂಡು, ಬಾಳುವೆ ಮಾಡಿದರೆ ಜಗತ್ತಿನ ಸಮಸ್ಯೆಗಳೆಲ್ಲ ನಿವಾರಣೆಯಾಗುತ್ತವೆ’ ಎಂದು ಹೇಳಿದರು.

ವಿದ್ವಾಂಸ ಶತಾವಧಾನಿ ಆರ್. ಗಣೇಶ್, ‘ಬುದ್ಧನ ಮಾತುಗಳಿಗೆ ಸಂವಾದಿಯಾದ ಮಾತುಗಳನ್ನು ವೇದ, ಉಪನಿಷತ್ತು, ರಾಮಾಯಣ-ಮಹಾಭಾರತ ಹಾಗೂ ಭಗವದ್ಗೀತೆಯಲ್ಲಿಯೂ ನೋಡಬಹುದು. ಬೌದ್ಧ ದರ್ಶನಕ್ಕೂ ಮತ್ತು ಸನಾತನ ಧರ್ಮಕ್ಕೂ ಶತಮಾನಗಳಿಂದ ತಿಕ್ಕಾಟ, ಸಂಘರ್ಷವಿದೆ ಎಂದು ಬಿಂಬಿಸಲಾಗುತ್ತಿದೆ. ಇದು ಸಂಪೂರ್ಣ ಪೂರ್ವಾಗ್ರಹದ ಸುಳ್ಳುಕಥನ ಎಂಬುದು ಧಮ್ಮಪದವನ್ನು ಓದಿದರೆ ಗೊತ್ತಾಗುತ್ತದೆ’ ಎಂದು ತಿಳಿಸಿದರು.

ADVERTISEMENT

ಚಿಂತಕ ಜಿ.ಬಿ. ಹರೀಶ, ‘ಬುದ್ಧ ಭಾರತದವನಲ್ಲ ಎಂದು ಪ್ರಚಾರ ಮಾಡುವ ಹುನ್ನಾರ ಇಂದು ನಡೆಯುತ್ತಿದೆ. ಕಮ್ಯುನಿಸ್ಟರು ಜಗತ್ತಿನ ಎಲ್ಲೆಡೆ ಹಿಂಸಾಚಾರ ಮಾಡಿ, ನಂತರ ತಾವು ಬುದ್ಧನ ಅನುಯಾಯಿಗಳು ಎಂದು ಹೇಳಿಕೊಳ್ಳುವುದು ವಿಡಂಬನೆ’ ಎಂದರು.

ಬರಹಗಾರ ರೋಹಿತ್ ಚಕ್ರತೀರ್ಥ, ‘ಪಠ್ಯಪುಸ್ತಕಗಳಲ್ಲಿ ಬರಗೂರು ರಾಮಚಂದ್ರಪ್ಪ ತಮ್ಮ ವಿಕೃತ ಚಿಂತನೆಗಳನ್ನು ಹರಿಯಬಿಟ್ಟು, ಬುದ್ಧನನ್ನು ವೇದ ವಿರೋಧಿಯಾಗಿ ಬಿಂಬಿಸಿದರು’ ಎಂದು ಹೇಳಿದರು.

ಸುಚಿತ್ರ ಸಿನಿಮಾ ಮತ್ತು ಸಂಸ್ಕೃತಿ ಅಕಾಡೆಮಿಯ ಟ್ರಸ್ಟಿ ವೃಷಾಂಕ್ ಭಟ್, ‘ಬುದ್ಧನ ಅನುಯಾಯಿಗಳೆಂದು ಹೇಳಿಕೊಳ್ಳುವವರು ಬುದ್ಧನ ಧಮ್ಮಪದವನ್ನು ಓದಿರುವಂತೆ ಕಾಣುವುದಿಲ್ಲ. ಬುದ್ಧ ಸಂಸಾರ ತ್ಯಜಿಸಿದ್ದು ಅವನ ರಾಜ್ಯದಲ್ಲಿ ಕ್ಷಾಮ ಕಾಣಿಸಿಕೊಂಡ ಕಾರಣಕ್ಕೆ ಎಂದೆಲ್ಲ ಚಿತ್ರವಿಚಿತ್ರ ವಾದಗಳನ್ನು ದಿನನಿತ್ಯ ಹೊಸೆಯಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.