ADVERTISEMENT

43 ಬಾರಿ ಇರಿದು ಕೊಂದ ಪತಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2013, 19:53 IST
Last Updated 19 ಏಪ್ರಿಲ್ 2013, 19:53 IST

ಬೆಂಗಳೂರು: ಪ್ಲಂಬರ್ ರಾಜೇಶ್ ಎಂಬಾತ 43 ಬಾರಿ ಚಾಕುವಿನಿಂದ ಇರಿದು ಪತ್ನಿಯನ್ನೇ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಕುಮಾರಸ್ವಾಮಿ ಲೇಔಟ್‌ನ ನಾಲ್ಕನೇ ಅಡ್ಡರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಆತನ ಕ್ರೂರ ವರ್ತನೆಯಿಂದ ಆಕ್ರೋಶಗೊಂಡ ಸ್ಥಳೀಯರು ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೂಲತಃ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯವರಾದ ಶಾರದಾ (30) ಕೊಲೆಯಾದವರು. 12 ವರ್ಷದ ಹಿಂದೆ ರಾಜೇಶ್‌ನನ್ನು ವಿವಾಹವಾಗಿದ್ದ ಅವರು ಸಿದ್ಧ ಉಡುಪು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಆರೋಪಿಯು ಶಾರದಾ ಅವರ ಹೊಟ್ಟೆ, ಎದೆ, ಕುತ್ತಿಗೆ ಭಾಗಕ್ಕೆ ಚಾಕುವಿನಿಂದ 43 ಬಾರಿ ಇರಿದಿದ್ದಾನೆ. ಅವರ ಗಂಟಲನ್ನೂ ಸೀಳಿರುವುದರಿಂದ ತೀವ್ರ ರಕ್ತಸ್ರಾವವಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

`ದಂಪತಿ ಬೆಳಿಗ್ಗೆ ಜಗಳವಾಡುತ್ತಿದ್ದರು. ಈ ವೇಳೆ ಶಾರದಾ ಜೋರಾಗಿ ಚೀರಿಕೊಂಡರು. ಅವರ ಚೀರಾಟ ಕೇಳಿ ಮನೆಗೆ ಹೋದಾಗ ರಾಜೇಶ್, ಪತ್ನಿಗೆ ಚಾಕುವಿನಿಂದ ಇರಿಯುತ್ತಿದ್ದರು. ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡ ಶಾರದಾ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಚಿಕಿತ್ಸೆಗೆ ಸ್ಪಂದಿಸಿದೆ ಅವರು ಸಾವನ್ನಪ್ಪಿದರು' ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

`ದಂಪತಿ ನಡುವೆ ಅನ್ಯೋನ್ಯತೆ ಇರಲಿಲ್ಲ. ಹೀಗಾಗಿ ವಿಚ್ಛೇದನ ಪಡೆಯಲು ಮುಂದಾಗಿದ್ದರು. ವಿಚ್ಛೇದನ ಸಿಗುವವರೆಗೂ ಮಾಸಿಕ ರೂ 2 ಸಾವಿರ ಕೊಡಬೇಕೆಂದು ಶಾರದಾ ಪರ ವಕೀಲರು ಬೇಡಿಕೆ ಇಟ್ಟಿದ್ದರು. ಇದರಿಂದ ಆಕ್ರೋಶಗೊಂಡಿದ್ದ ರಾಜೇಶ್ ಯಾವುದೇ ಕಾರಣಕ್ಕೂ ಹಣ ಕೊಡುವುದಿಲ್ಲ ಎಂದು ಹೇಳಿದ್ದರು. ಆದರೆ, ಶಾರದಾ ಹಣ ನೀಡುವಂತೆ ಪತಿಗೆ ಒತ್ತಾಯಿಸುತ್ತಿದ್ದರು. ಈ ವಿಚಾರವಾಗಿ ದಂಪತಿ ನಡುವೆ ಒಂದು ವಾರದಿಂದ ಜಗಳವಾಗುತ್ತಿತ್ತು ಎಂಬುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಟೊ ಚಾಲಕನ ಕೊಲೆ
ನಗರದ ಹುಳಿಮಾವು ಸಮೀಪದ ಹೊಮ್ಮದೇವಹಳ್ಳಿಯಲ್ಲಿ ವಜ್ರಮುನಿ (26) ಎಂಬಾತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಈ ಸಂಬಂಧ ಪೊಲೀಸರು ಆರೋಪಿ ಗಣೇಶ್ ಅಲಿಯಾಸ್ ಗಣಿ ಎಂಬಾತನನ್ನು ಬಂಧಿಸಿದ್ದಾರೆ. ಸ್ನೇಹಿತರಾದ ವಜ್ರಮುನಿ ಮತ್ತು ಗಣೇಶ್ ದೊಡ್ಡಕಮ್ಮನಹಳ್ಳಿ ನಿವಾಸಿಗಳು. ವಜ್ರಮುನಿ ಆಟೊ ಚಾಲಕರಾಗಿದ್ದರು. ರಾತ್ರಿ 7.30ರ ಸುಮಾರಿಗೆ ಪಾನಮತ್ತರಾಗಿದ್ದ ಸ್ನೇಹಿತರ ನಡುವೆ ಹಣಕಾಸಿನ ವಿಚಾರವಾಗಿ ಜಗಳವಾಗಿದೆ. ಈ ವೇಳೆ ಆರೋಪಿ ವಜ್ರಮುನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.