ADVERTISEMENT

ಟ್ಯಾಕ್ಸಿ ದರ ಮೂರು ಪಟ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 19:33 IST
Last Updated 7 ಜನವರಿ 2018, 19:33 IST
ಟ್ಯಾಕ್ಸಿ ದರ ಮೂರು ಪಟ್ಟು ಹೆಚ್ಚಳ
ಟ್ಯಾಕ್ಸಿ ದರ ಮೂರು ಪಟ್ಟು ಹೆಚ್ಚಳ   

ಬೆಂಗಳೂರು: ಕ್ಯಾಬ್‌ಗಳು ಮತ್ತು ಟ್ಯಾಕ್ಸಿಗಳ ಪ್ರಯಾಣದ ಗರಿಷ್ಠ ದರವನ್ನು ಮೂರು ಪಟ್ಟು ಹೆಚ್ಚಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಹ್ಯಾಚ್‌ಬ್ಯಾಕ್ ಕಾರುಗಳ (ಸ್ವಿಫ್ಟ್ ಡಿಸೈರ್, ಐ–10, ಮಾರುತಿ ರಿಟ್ಜ್ ಮಾದರಿಯ ಸಣ್ಣ ಕಾರುಗಳು) ಗರಿಷ್ಠ ಪ್ರಯಾಣ ದರ ಸದ್ಯ ಪ್ರತಿ ಕಿ.ಮೀಗೆ ₹ 14.50 ಇದೆ. ಇದನ್ನು ₹ 44ಕ್ಕೆ ಏರಿಸಲು ಸರ್ಕಾರ ನಿರ್ಧರಿಸಿದೆ.

ಇದೇ ಮೊದಲ ಬಾರಿಗೆ, ಗರಿಷ್ಠ ದರದ ಜೊತೆಗೆ ಕನಿಷ್ಠ ದರವನ್ನೂ ನಿಗದಿಪಡಿಸಲಾಗಿದೆ. ಒಂದೆರಡು ದಿನಗಳಲ್ಲಿ ಅಧಿಸೂಚನೆ ಪ್ರಕಟವಾಗಲಿದೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ತಿಳಿಸಿದರು.

ADVERTISEMENT

ಪ್ರಯಾಣ ದರ ಪರಿಷ್ಕರಣೆ ಮಾಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಬಾಕಿ ಇತ್ತು. ಇದೀಗ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದೂ ಅವರು ವಿವರಿಸಿದರು.

ಹ್ಯಾಚ್‌ಬ್ಯಾಕ್‌ ಕಾರುಗಳಿಗೆ ಗರಿಷ್ಠ ದರವನ್ನು ₹ 14.50 ಮತ್ತು ಮಧ್ಯಮ ಮಾದರಿಯ(ಸೆಡಾನ್) ಕಾರುಗಳಿಗೆ ₹ 19.50 ಪ್ರಯಾಣ ದರ ನಿಗದಿಪಡಿಸಿ 2013ರ ಜೂನ್‌ನಲ್ಲಿ ಕೊನೆಯದಾಗಿ ಪರಿಷ್ಕರಿಸಲಾಗಿತ್ತು.

ಈ ಬಾರಿ ಕಾರುಗಳ ಬೆಲೆ ಮಾರುಕಟ್ಟೆ ಬೆಲೆ ಆಧರಿಸಿ ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಅದರ ಆಧಾರದಲ್ಲಿ ಪ್ರಯಾಣ ದರವನ್ನೂ ನಿಗದಿಪಡಿಸಲಾಗಿದೆ. ಕಾರುಗಳ ನಿರ್ವಹಣೆಗೆ ತಗಲುವ ವೆಚ್ಚ, ಇಂಧನ ದರ ಎಲ್ಲವನ್ನೂ ವೈಜ್ಞಾನಿಕ ಪರಿಶೀಲಿಸಿ ದರ ಪರಿಷ್ಕರಿಸಲಾಗಿದೆ. ಈ ಕುರಿತು ಟ್ಯಾಕ್ಸಿ ಚಾಲಕರ ಸಂಘಟನೆ ಸದಸ್ಯರೊಂದಿಗೂ ಹಲವು ಬಾರಿ ಸಭೆ ನಡೆಸಲಾಗಿದೆ ಎಂದು ಸಾರಿಗೆ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಸರ್ಕಾರದ ಈ ತೀರ್ಮಾನಕ್ಕೆ ಕ್ಯಾಬ್‌ ಮತ್ತು ಟ್ಯಾಕ್ಸಿ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಹವಾ ನಿಯಂತ್ರಿತ ಸಹಿತ ಮತ್ತು ಹವಾ ನಿಯಂತ್ರಿತ ರಹಿತ ಎಂಬ ವಿಭಾಗಗಳನ್ನು ಮಾಡಿ ದರ ನಿಗದಿಪಡಿಸಲಾಗಿತ್ತು. ಈಗ ಕಾರ್‌ಗಳ ಬೆಲೆ ಆಧರಿಸಿ ದರ ನಿಗದಿ ಮಾಡಿರುವುದು ಅವೈಜ್ಞಾನಿಕ. ಇದರಿಂದ ಕಾರ್‌ ಚಾಲಕರು ಮತ್ತು ಪ್ರಯಾಣಿಕರು ಗೊಂದಲಕ್ಕೆ ಸಿಲುಕಿ ತೊಂದರೆ ಅನುಭವಿಸಲಿದ್ದಾರೆ ಎಂದು ಕರ್ನಾಟಕ ಸಿಟಿ ಟ್ಯಾಕ್ಸಿ ಚಾಲಕರ ಸಂಘದ ಹಮೀದ್ ಅಕ್ಬರ್ ಅಲಿ ಹೇಳಿದರು.

‘ಹೆಚ್ಚಿನ ಪ್ರಯಾಣ ದರ ವಸೂಲು ಮಾಡುವ ಮೂಲಕ ಟ್ಯಾಕ್ಸಿ ಚಾಲಕರು ನಿಯಮ ಉಲ್ಲಂಘಿಸುತ್ತಿದ್ದರು. ಸರ್ಕಾರವೇ ಪ್ರಯಾಣ ಕನಿಷ್ಠ, ಗರಿಷ್ಠ ದರ ನಿಗದಿ ಮಾಡುವುದರಿಂದ ಪ್ರಯಾಣಿಕರಿಗೆ ಅನುಕೂಲ ಆಗಲಿದೆ’ ಎಂದು ಸಾಫ್ಟ್‌ವೇರ್ ಎಂಜಿನಿಯರ್ ರಾಮಮೋಹನ್ ಅಭಿಪ್ರಾಯಪಟ್ಟರು.

ಹೆಚ್ಚಳ ಆಗಲಿರುವ ಪ್ರಯಾಣದ ದರದ ವಿವರ (₹ ಗಳಲ್ಲಿ)

ಕಾರಿನ ಬೆಲೆ ಕನಿಷ್ಠ ಗರಿಷ್ಠ

₹ 4 ಲಕ್ಷ 19.50 44

₹ 6 ಲಕ್ಷ 25 52

₹ 8 ಲಕ್ಷ 30 68

₹ 12 ಲಕ್ಷ 38 80

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.