ಬೆಂಗಳೂರು: ನಗರದಲ್ಲಿ ಸುಮಾರು 1,400 ಖಾಸಗಿ ಕೊಳಚೆ ನೀರು ಶುದ್ಧೀಕರಣ ಘಟಕಗಳು (ಎಸ್‌ಟಿಪಿ) ಇವೆ. ಆದರೆ, ನಿಯಮಗಳ ಪ್ರಕಾರ ಅವುಗಳ ನಿರ್ವಹಣೆ ಮಾಡುತ್ತಿಲ್ಲ. ನಿರ್ವಹಣೆಗೆ ಅಪಾರ್ಟ್‌ಮೆಂಟ್ ಸಮುಚ್ಚಗಳ ಮಾಲೀಕರೂ ಅನೇಕ ತೊಡಕುಗಳನ್ನು ಎದುರಿಸುತ್ತಿದ್ದಾರೆ.
ಇನ್ನೊಂದೆಡೆ, ಖಾಸಗಿ ಎಸ್‌ಟಿಪಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೋ ಇಲ್ಲವೋ ಎಂಬ ಬಗ್ಗೆ ಮೇಲ್ವಿಚಾರಣೆ ಮಾಡುವುದಕ್ಕೆ ಸಮರ್ಪಕ ವ್ಯವಸ್ಥೆಯೂ ಇಲ್ಲ. ಎಚ್.ಎಸ್.ಆರ್ ಬಡಾವಣೆಯ ಸೋಮಸುಂದರಪಾಳ್ಯದ ಎನ್.ಡಿ. ಸೆಪಲ್ ಅಪಾರ್ಟ್‌ಮೆಂಟ್‌ನ ಎಸ್‌ಟಿಪಿ ದುರಸ್ತಿ ವೇಳೆ ಮೂವರು ಕಾರ್ಮಿಕರು ಭಾನುವಾರ ಮೃತಪಟ್ಟಿದ್ದರು. ಈ ದುರ್ಘಟನೆ ಬಳಿಕ ಖಾಸಗಿ ಎಸ್‌ಟಿಪಿ ನಿರ್ವಹಣೆ ಕುರಿತ ಅವ್ಯವಸ್ಥೆಗಳ ಬಗ್ಗೆಯೂ ಗಮನ ಸೆಳೆಯುವಂತೆ ಮಾಡಿದೆ.
ಜಲಮಂಡಳಿ, ಕೆಎಸ್‌ಪಿಸಿಬಿ ಸ್ಪಂದಿಸುವುದಿಲ್ಲ: ‘ಬೃಹತ್ ಅಪಾರ್ಟ್‌ಮೆಂಟ್ ಸಮುಚ್ಚಯಗಳಲ್ಲಿ ಎಸ್‌ಟಿಪಿಗಳನ್ನು ಅಳವಡಿಸಬೇಕು ಎಂದು ಜಲಮಂಡಳಿ ಹೇಳುತ್ತದೆ. ಆದರೆ, ಅವುಗಳ ಅಳವಡಿಕೆಗೆ ಮಾರ್ಗಸೂಚಿಗಳನ್ನು ನೀಡಿಲ್ಲ. ಎಸ್‌ಟಿಪಿಗಳಲ್ಲಿ ಸಮಸ್ಯೆ ಕಾಣಿಸಿಕೊಂಡರೆ ಜಲಮಂಡಳಿಯ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುತ್ತಾರೆ. ಎಸ್‌ಟಿಪಿಗಳಿಗೆ ಅನುಮತಿ ನೀಡುವ ಕೆಎಸ್‌ಪಿಸಿಬಿ ಅಧಿಕಾರಿಗಳು ಸಹ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಬೆಂಗಳೂರು ಅಪಾರ್ಟ್‌ಮೆಂಟ್ ಸಂಘಗಳ ಒಕ್ಕೂಟದ ಅಧ್ಯಕ್ಷ
ಸಿ.ಎಸ್.ವಿ.ಪ್ರಸಾದ್ ದೂರಿದರು.
‘ಎಸ್‌ಟಿಪಿ ಸ್ವಚ್ಛಗೊಳಿಸುವ ವೇಳೆ ಮೂವರು ಕಾರ್ಮಿಕರು ಮೃತಪಟ್ಟ ಘಟನೆಗೆ ಜಲಮಂಡಳಿ ಹಾಗೂ ಕೆಎಸ್‌ಪಿಸಿಬಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ’ ಎಂದರು.
‘ಎಸ್‌ಟಿಪಿ ಅಳವಡಿಕೆ ಹಾಗೂ ನಿರ್ವಹಣೆಯಲ್ಲಿ ನಿಯಮ ಉಲ್ಲಂಘಿಸಿದ್ದರೆ ಅವರಿಗೆ ನೋಟಿಸ್ ನೀಡಬೇಕು. ನಿಯಮ ಉಲ್ಲಂಘಿಸಿದ್ದರೆ ಪರವಾನಗಿ ನವೀಕರಣ ಮಾಡಬಾರದು. ಆದರೆ, ಕೆಎಸ್‌ಪಿಸಿಬಿ ಅಧಿಕಾರಿಗಳು ತಮ್ಮ ಕೆಲಸ ಸಮರ್ಪಕವಾಗಿ ನಿರ್ವಹಿಸದೇ ಇರುವುದರಿಂದ ಇಂತಹ ದುರಂತಗಳು ಸಂಭವಿಸುತ್ತಿವೆ’ ಎಂದರು.
ನಗರಾಭಿವೃದ್ಧಿ ಇಲಾಖೆ 2016ರಲ್ಲಿ ಹೊರಡಿಸಿದ್ದ ಆದೇಶದ ಪ್ರಕಾರ, 2,000 ಚದರಡಿ ಮತ್ತು ಅದಕ್ಕಿಂತ ಹೆಚ್ಚು ವಿಸ್ತೀರ್ಣದ ಮನೆಗಳು, ಅಪಾರ್ಟ್‌ಮೆಂಟ್ ಸಮುಚ್ಚಯಗಳು, ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಕೈಗಾರಿಕೆಗಳು ಎಸ್‌ಟಿಪಿ ಅಳವಡಿಸಿಕೊಳ್ಳು
ವುದು ಕಡ್ಡಾಯ. ಅದರ ಅಳವಡಿಕೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (ಕೆಎಸ್‌ಪಿಸಿಬಿ) ಅನುಮತಿ ಪಡೆಯಬೇಕು. ಅವುಗಳ ನಿರ್ವಹಣೆಯ ಹೊಣೆ ಕಟ್ಟಡದ ಮಾಲೀಕರದೇ ಆಗಿರುತ್ತದೆ. ಈ ಘಟಕಗಳಲ್ಲಿ ಶುದ್ಧೀಕರಿಸಿದ ನೀರನ್ನು ಉದ್ಯಾನ, ಶೌಚಾಲಯ ಹಾಗೂ ಕಾರು ತೊಳೆಯಲು ಬಳಕೆ ಮಾಡಬಹುದು ಎಂದು ಕೆಎಸ್‌ಪಿಸಿಬಿ ಸದಸ್ಯ ಕಾರ್ಯದರ್ಶಿ ರಂಗಾರಾವ್ ತಿಳಿಸಿದರು..
‘ಎಸ್‌ಟಿಪಿಗಳಿಗೆ ನೀಡಿದ ಪರವಾನಗಿಯನ್ನು ಪ್ರತಿ ಐದು ವರ್ಷಗಳಿಗೊಮ್ಮೆ ನವೀಕರಿಸಲಾಗುತ್ತದೆ. ಅವುಗಳ ಕಾರ್ಯನಿರ್ವಹಣೆ ಸಂಬಂಧ ಮಂಡಳಿಯ ಅಧಿಕಾರಿಗಳು ಆಗಾಗ್ಗೆ ಪರಿಶೀಲನೆ ನಡೆಸುತ್ತಾರೆ. ನೀರಿನ ಮಾದರಿಯನ್ನು ಸಂಗ್ರಹಿಸಿ, ಅದರಲ್ಲಿ ಆಮ್ಲಜನಕದ (ಬಯೋ ಆಕ್ಸಿಜನ್ ಡಿಮಾಂಡ್) ಸಾರಜನಕದ ಹಾಗೂ ಬ್ಯಾಕ್ಟೀರಿಯಾಗಳ ಪ್ರಮಾಣ ಎಷ್ಟಿದೆ ಎಂಬುದನ್ನು ಪರಿಶೀಲಿಸುತ್ತಾರೆ. ಅದರ ನೀರಿನಲ್ಲಿ ಬ್ಯಾಕ್ಟೀರಿಯಾ, ಸಾರಜನಕ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ಇದ್ದರೆ ಹಾಗೂ ಆಮ್ಲಜನಕ ಪ್ರಮಾಣ ಕಡಿಮೆ ಇದ್ದರೆ ಕಟ್ಟಡದ ಮಾಲೀಕರಿಗೆ ನೋಟಿಸ್ ನೀಡುತ್ತೇವೆ’ ಎಂದರು.
‘ನಿಯಮದ ಪ್ರಕಾರ ಎಸ್‌ಟಿಪಿಗಳನ್ನು ಅಳವಡಿಸಿಕೊಳ್ಳದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿದೆ. ಕೈಗಾರಿಕೆಗಳಲ್ಲಿ ನಿಯಮದ ಪ್ರಕಾರ ಎಸ್‌ಟಿಪಿ ಅಳವಡಿಸದೇ ಇದ್ದರೆ ಅವುಗಳನ್ನು ಮುಚ್ಚಿಸುತ್ತೇವೆ ಅಥವಾ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತೇವೆ. ಆದರೆ, ಅಪಾರ್ಟ್‌ಮೆಂಟ್ ಸಮುಚ್ಚಯಗಳ ವಿಚಾರದಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ಅಲ್ಲಿನ ಜನರಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ನಿರ್ವಹಣಾ ಸಂಸ್ಥೆಗೆ ವಹಿಸಬೇಕು: ಅಪಾರ್ಟ್‌ಮೆಂಟ್ ಸಮುಚ್ಚಯ, ವಾಣಿಜ್ಯ ಸಂಕೀರ್ಣಗಳಲ್ಲಿ ಅಳವಡಿಸುವ ಎಸ್‌ಟಿಪಿಗಳನ್ನು ವಾರ್ಷಿಕ ಗುತ್ತಿಗೆ ಆಧಾರದಲ್ಲಿ ನಿರ್ವಹಣೆ ಮಾಡುವ ಖಾಸಗಿ ಸಂಸ್ಥೆಗಳಿವೆ. ಅವುಗಳನ್ನು ಅಳವಡಿಸುವ ಸಂಸ್ಥೆಗಳೇ ಈ ಸೇವೆಯನ್ನೂ ಒದಗಿಸುತ್ತವೆ. ಘಟಕದಲ್ಲಿ ಯಾವುದೇ ರೀತಿಯ ಸಮಸ್ಯೆ ಕಾಣಿಸಿಕೊಂಡರೆ, ಸಂಸ್ಥೆಯ ಪರಿಣಿತರು ದುರಸ್ತಿ ಮಾಡುತ್ತಾರೆ. ಆದರೆ, ಇದಕ್ಕೆ ದುಬಾರಿ ವೆಚ್ಚವಾಗುತ್ತದೆ ಎಂಬ ಕಾರಣಕ್ಕೆ ಅಪಾರ್ಟ್‌ಮೆಂಟ್ ಸಮುಚ್ಚಯದವರು ಸ್ಥಳೀಯ ವ್ಯಕ್ತಿಗಳ ಮೂಲಕ ದುರಸ್ತಿ ಮಾಡಿಸುತ್ತಾರೆ. ಅವರು ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದಿಲ್ಲ. ಇದು ಅವಘಡಗಳಿಗೆ ಕಾರಣವಾಗುತ್ತಿದೆ ಎನ್ನುತ್ತಾರೆ ಜಲಮಂಡಳಿಯ ಕೊಳಚೆ ನೀರು ನಿರ್ವಹಣೆ ವಿಭಾಗದ ಮುಖ್ಯ ಎಂಜಿನಿಯರ್ ಎನ್.ಸತೀಶ್.
ಖಾಸಗಿ ಸಕ್ಕಿಂಗ್ ಯಂತ್ರ ಲಭ್ಯ: ಬೆಂಗಳೂರಿನಲ್ಲಿ ಸಾವಿರಾರು ಅಪಾರ್ಟ್‌ಮೆಂಟ್ ಸಮುಚ್ಚಯಗಳಿವೆ. ಇಲ್ಲಿನ ಎಸ್‌ಟಿಪಿಗಳ ನಿರ್ವಹಣೆ
ಯನ್ನು ಜಲಮಂಡಳಿ ನೋಡಿಕೊಳ್ಳಲು ಸಾಧ್ಯವಿಲ್ಲ. ಇವುಗಳ ಮ್ಯಾನ್‌ಹೋಲ್‌ಗಳು ಕಟ್ಟಿಕೊಂಡಾಗ ಅವುಗಳನ್ನು ದುರಸ್ತಿಗೊಳಿಸಲು ಜಲ
ಮಂಡಳಿಯ ಹೀರು ಯಂತ್ರ (ಸಕ್ಕಿಂಗ್ ಯಂತ್) ಪೂರೈಸಲೂ ಸಾಧ್ಯವಿಲ್ಲ. ಜಲಮಂಡಳಿಯ ಅಗತ್ಯ ಪೂರೈಸುವಷ್ಟು ಸಕ್ಕಿಂಗ್ ಯಂತ್ರಗಳು ಮಾತ್ರ ನಮ್ಮ ಬಳಿ ಇವೆ. ಅಪಾರ್ಟ್‌ಮೆಂಟ್ ಸಮುಚ್ಚಯದವರು ಖಾಸಗಿ ಸಕ್ಕಿಂಗ್ ಯಂತ್ರಗಳ ಮೂಲಕವೂ ದುರಸ್ತಿ ಮಾಡಿಸಬಹುದು ಎಂದರು.
ಪರಿಣಿತ ಮೇಲ್ವಿಚಾರಕರ ನೇತೃತ್ವದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡ ಬಳಿಕವಷ್ಟೇ ಎಸ್‌ಟಿಪಿಗಳನ್ನು ಸ್ವಚ್ಛಗೊಳಿಸಬೇಕು. ಸಂಪ್‌ಗಳಲ್ಲಿ ಮೀಥೇನ್‌ನಂತಹ ವಿಷಾನಿಲ ಇರುತ್ತದೆ. ಸಂಪ್‌ನ ಮುಚ್ಚಳವನ್ನು ಕನಿಷ್ಠ 1 ಗಂಟೆ ತೆರೆದಿಡಬೇಕು. ಬಳಿಕ ನೀರನ್ನು ಸಿಂಪರಣೆ ಮಾಡಬೇಕು. ಇದರಿಂದ ವಿಷಾನಿಲ ಹೊರಹೋಗುತ್ತದೆ. ಸಂಪ್‌ಗೆ ಇಳಿಯುವ ವ್ಯಕ್ತಿಯು ಮುಖಗವಸು, ಹೆಲ್ಮೆಟ್, ಜಾಕೆಟ್ ಹಾಕಿಕೊಳ್ಳಬೇಕು. ಆಮ್ಲಜನಕದ ವ್ಯವಸ್ಥೆ ಮಾಡಿಕೊಳ್ಳಬೇಕು. ಆದರೆ, ಸಾಮಾನ್ಯ ಕಾರ್ಮಿಕರಿಗೆ ಇದರ ಅರಿವು ಇರುವುದಿಲ್ಲ ಎಂದು ಹೇಳಿದರು.
ಎಸ್‌ಟಿಪಿ ನಿರ್ವಹಣೆಗೆ ಹತ್ತಾರು ತೊಡಕು
ಅಪಾರ್ಟ್‌ಮೆಂಟ್ ಸಮುಚ್ಚಯಗಳು ಹಾಗೂ ವಾಣಿಜ್ಯ ಚಟುವಟಿಕೆಗಳು ಇರುವ ಪ್ರದೇಶಗಳಲ್ಲಿ ಕೇಂದ್ರೀಕೃತ ಎಸ್‌ಟಿಪಿಗಳನ್ನು ಜಲಮಂಡಳಿ ವತಿಯಿಂದ ಅಳವಡಿಸಬೇಕು. ಈ ಭಾಗದ ಕೊಳಚೆ ನೀರನ್ನು ಶುದ್ಧೀಕರಿಸಿ ಅದನ್ನು ದ್ವಿತೀಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳ
ಬಹುದು. ಇದಕ್ಕೆ ಕಟ್ಟಡದ ಮಾಲೀಕರಿಂದ ಶುಲ್ಕ ವಸೂಲಿ ಮಾಡಬಹುದು. ಈ ಘಟಕಗಳಿಂದ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಬೆಂಗಳೂರು ಅಪಾರ್ಟ್‌ಮೆಂಟ್ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ತಿಳಿಸಿದರು.
ಬೆಸ್ಕಾಂನವರು ಅಪಾರ್ಟ್‌ಮೆಂಟ್‌ಗಳಲ್ಲಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸುತ್ತಾರೆ. ದುರಸ್ತಿಯನ್ನೂ ಅವರೇ ಮಾಡುತ್ತಾರೆ. ಇದಕ್ಕೆ ನಿರ್ದಿಷ್ಟ ಶುಲ್ಕ ಪಾವತಿಸಿದರೆ ಸಾಕು. ಅದೇ ಮಾದರಿಯಲ್ಲೂ ಜಲಮಂಡಳಿಯ ಅಧಿಕಾರಿಗಳು ಎಸ್‌ಟಿಪಿಗಳನ್ನು ದುರಸ್ತಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಎಸ್‌ಟಿಪಿಗಳಿಗೆ 24 ಗಂಟೆಯೂ ವಿದ್ಯುತ್ ಇರಬೇಕು. ವಿದ್ಯುತ್ ಇಲ್ಲದೇ ಇರುವ ಸಂದರ್ಭದಲ್ಲಿ ಕೊಳಚೆ ನೀರು ಘಟಕಗಳಲ್ಲಿ ಸೇರಿಕೊಳ್ಳುತ್ತದೆ. ಇದರಿಂದ ಶುದ್ಧೀಕರಣ ಪ್ರಕ್ರಿಯೆ ಸ್ಥಗಿತವಾಗುತ್ತದೆ. ಅದನ್ನು ದುರಸ್ತಿಗೊಳಿಸಲು ಕಾರ್ಮಿಕರನ್ನು ಬಳಕೆ ಮಾಡಿಕೊಂಡಾಗ ಇಂತಹ ಅನಾಹುತ ಸಂಭವಿಸುತ್ತದೆ ಎಂದರು.
***
ದುರಂತ: ಅಪಾರ್ಟ್‌ಮೆಂಟ್ ನಿವಾಸಿಗಳ ವಿಚಾರಣೆ
ಬೆಂಗಳೂರು: ಸೋಮಸುಂದರಪಾಳ್ಯದ ಎನ್.ಡಿ.ಸೆಪಲ್ ಅಪಾರ್ಟ್‌ಮೆಂಟ್ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ದುರಸ್ತಿ ವೇಳೆ ಮೂವರು ಮೃತಪಟ್ಟ ಪ್ರಕರಣ ಸಂಬಂಧ ಪೊಲೀಸರು, ಅಪಾರ್ಟ್‌ಮೆಂಟ್ ನಿವಾಸಿಗಳನ್ನು ಸೋಮವಾರ ವಿಚಾರಣೆಗೆ ಒಳಪಡಿಸಿದರು.
ಅವಘಡದಲ್ಲಿ ನಾರಾಯಣಸ್ವಾಮಿ (35), ಎಚ್. ಶ್ರೀನಿವಾಸ್ (58) ಹಾಗೂ ಮಾದೇಗೌಡ (42) ಮೃತಪಟ್ಟಿದ್ದರು. ಘಟನೆ ಬಗ್ಗೆ ನಿವಾಸಿಗಳು ಹೇಳಿಕೆ ನೀಡಿದರು.
‘ಅಪಾರ್ಟ್‌ಮೆಂಟ್ ಎಸ್‌ಟಿಪಿ ಟ್ಯಾಂಕ್‌ನ ಮೋಟರ್ ದುರಸ್ತಿ ಎರಡು ದಿನಗಳಿಂದ ನಡೆಯುತ್ತಿತ್ತು. ಭಾನುವಾರ ಬೆಳಿಗ್ಗೆ ಸ್ವಚ್ಛತಾ ಮೇಲ್ವಿಚಾರಕ ನಾರಾಯಣಸ್ವಾಮಿ ಅವರೇ ಮೊದಲು ಎಸ್‌ಟಿಪಿ ಟ್ಯಾಂಕ್‌ಗೆ ಇಳಿದಿದ್ದರು. ಅವರು ಉಸಿರುಗಟ್ಟಿ ಕುಸಿದು ಬಿದ್ದಿದ್ದರಿಂದ, ಇನ್ನಿಬ್ಬರು ರಕ್ಷಣೆಗೆ ಹೋಗಿದ್ದರು. ಮೂವರು ಮೃತಪಟ್ಟರು ಎಂದು ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ’ ಎಂದು ಬಂಡೆಪಾಳ್ಯದ ಪೊಲೀಸರು ತಿಳಿಸಿದರು.
ಸರ್ಕಾರದ ವಿರುದ್ಧ ಮೊಕದ್ದಮೆ
‘ಎಸ್‌ಟಿಪಿ ದುರಂತಕ್ಕೆ ಸರ್ಕಾರವೇ ಕಾರಣ. ಅದರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತೇನೆ’ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಬೆಜವಾಡ ವಿಲ್ಸನ್ ತಿಳಿಸಿದರು.
‘ಸಫಾಯಿ ಕರ್ಮಚಾರಿಗಳ ಸಾವಿನ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೊಳವೆಗಳನ್ನು ಸ್ವಚ್ಛಗೊಳಿಸಲು ಮನುಷ್ಯರನ್ನು ಬಳಸಿಕೊಳ್ಳದಂತೆ ನ್ಯಾಯಾಲಯವು ಆದೇಶ ನೀಡಿದರೂ ಪಾಲನೆ ಆಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಎಸ್‌ಟಿಪಿಗಳಿಗೆ ಮನುಷ್ಯರನ್ನು ಇಳಿಸುತ್ತಾರೆ ಎಂದರೆ, ಶುದ್ಧೀಕರಣ ಯಂತ್ರಗಳ ಕೊರತೆ ಇದೆ. ಈ ಕುರಿತು ಏನು ಮಾಡಬೇಕು ಎಂದು ಸಚಿವರು ನಮ್ಮನ್ನು (ಆಂದೋಲನ) ಕೇಳುತ್ತಾರೆ. ಸರ್ಕಾರ ಇರುವುದಾದರೂ ಏತಕ್ಕೆ.’
‘2008ರಿಂದ ಇದುವರೆಗೂ 60 ಸಫಾಯಿ ಕರ್ಮಚಾರಿಗಳು ಮೃತಪಟ್ಟಿದ್ದಾರೆ. ಇನ್ನು ಎಷ್ಟು ಮಂದಿ ಬಲಿಯಾಗಬೇಕು’ ಎಂದು ಪ್ರಶ್ನಿಸಿದರು.
ನಿವಾಸಿಗಳ ಸಂಘ ಪರಿಹಾರ ನೀಡಲಿ: ‘ಮೃತಪಟ್ಟ ಮೂವರು ಕಾರ್ಮಿಕರ ಕುಟುಂಬಗಳಿಗೆ ಅಪಾರ್ಟ್‍ಮೆಂಟ್ ಸಮುಚ್ಚಯದ ನಿವಾಸಿಗಳ ಸಂಘವೂ ಪರಿಹಾರ ನೀಡಬೇಕು’ ಎಂದು ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ವಿ. ಜ್ಞಾನಮೂರ್ತಿ ಒತ್ತಾಯಿಸಿದರು.
‘ಸುರಕ್ಷತಾ ಪರಿಕರಗಳನ್ನು ಒದಗಿಸದೆ ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಂಡಿರುದು ಅಪರಾಧ. ಪಾಲಿಕೆ ಹಾಗೂ ಜಲಮಂಡಳಿ, ಒಳಚರಂಡಿ ಸುರಕ್ಷತಾ ಕೈಪಿಡಿಗಳನ್ನು ಅಪಾರ್ಟ್‍ಮೆಂಟ್‍ಗಳಿಗೆ ತಲುಪಿಸಬೇಕು. ಅದರಲ್ಲಿರುವ ಸೂಚನೆಗಳನ್ನು ಪಾಲಿಸದಿದ್ದರೆ, ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.