ADVERTISEMENT

ಸರ್ಜಾಪುರ ರಸ್ತೆ ವಿಸ್ತರಣೆ: ಟಿಡಿಆರ್‌ ನೀಡಲು ನಿರ್ಧಾರ

ಅಧಿಕಾರಿಗಳು, ಭೂಮಾಲಿಕರೊಂದಿಗೆ ಜಾರ್ಜ್‌ ಚರ್ಚೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 19:38 IST
Last Updated 8 ಜನವರಿ 2018, 19:38 IST

ಬೆಂಗಳೂರು: ಸರ್ಜಾಪುರ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಮಿಯನ್ನು ಅಭಿವೃದ್ಧಿ ಹಕ್ಕುಗಳ ಹಸ್ತಾಂತರ (ಟಿಡಿಆರ್‌) ಮೂಲಕ ಸ್ವಾಧೀನ ಪಡಿಸಿಕೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.

ರಸ್ತೆ ವಿಸ್ತರಣೆ ಸಂಬಂಧ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರು ಭೂಮಾಲೀಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

ರಸ್ತೆ ವಿಸ್ತರಣೆ ಯೋಜನೆಯಡಿ ಭೂ ಮಾಲೀಕರಿಗೆ ಟಿಡಿಆರ್‌ ನೀಡಲಾಗುತ್ತದೆ. ನಗದು ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ADVERTISEMENT

ಸರ್ಜಾಪುರ ರಸ್ತೆಯನ್ನು 6 ಪಥಗಳ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತದೆ. ಸರ್ವಿಸ್‌ ರಸ್ತೆಯನ್ನೂ ನಿರ್ಮಿಸಲಾಗುತ್ತದೆ. ಈ ಯೋಜನೆಯ ಅನುಷ್ಠಾನಕ್ಕಾಗಿ 20 ಎಕರೆ 5 ಗುಂಟೆಯನ್ನು ಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಇಂತಹ 320 ಆಸ್ತಿಗಳನ್ನು ಗುರುತಿಸಲಾಗಿದೆ.

‘ಈ ಯೋಜನೆಯಿಂದ 248 ಕುಟುಂಬಗಳು ಭೂಮಿಯನ್ನು ಕಳೆದುಕೊಳ್ಳಲಿದ್ದು, ಅದರಲ್ಲಿ 113 ಕುಟುಂಬಗಳು ಟಿಡಿಆರ್‌ ಬದಲಿಗೆ ನಗದು ಪರಿಹಾರ ನೀಡುವಂತೆ ಒತ್ತಾಯಿಸುತ್ತಿವೆ. ಒಂದು ವೇಳೆ ಪರಿಹಾರ ನೀಡದೇ ಇದ್ದರೆ ಕೋರ್ಟ್‌ ಮೊರೆ ಹೋಗುತ್ತೇವೆ’ ಎಂದು ಸರ್ಜಾಪುರ ರಸ್ತೆ ವಿಸ್ತರಣೆ ದೌರ್ಜನ್ಯ ತಡೆ ಸಮಿತಿಯ ಪ್ರತಿನಿಧಿ ಬಿ.ವಿ.ರಾಮಚಂದ್ರ ರೆಡ್ಡಿ ಎಚ್ಚರಿಕೆ ನೀಡಿದರು.

ಈ ಯೋಜನೆಯಿಂದ 50 ಕುಟುಂಬಗಳಿಗೆ ತೀವ್ರ ತೊಂದರೆ ಉಂಟಾಗಲಿದೆ. ಇದರಲ್ಲಿ 30 ಕುಟುಂಬಗಳು ಮನೆಗಳನ್ನು ಕಳೆದುಕೊಳ್ಳುವ ಹಾಗೂ 20 ಕುಟುಂಬಗಳು ಉದ್ಯೋಗಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದರು.

‘ನನ್ನ ಸಂಬಂಧಿಯೊಬ್ಬರಿಗೆ ಸೇರಿದ ಜಾಗ ತುಮಕೂರು ರಸ್ತೆಯಲ್ಲಿದೆ. ಅದನ್ನು ಬೆಂಗಳೂರು ಮೆಟ್ರೊ ರೈಲು ನಿಗಮದವರು ಸ್ವಾಧೀನ ಪಡಿಸಿಕೊಂಡಿದ್ದು, ಒಂದು ಚದರಡಿಗೆ ₹16 ಸಾವಿರ ಪರಿಹಾರ ನೀಡಿದ್ದಾರೆ. ಅದೇ ಮಾದರಿಯಲ್ಲಿ ಪಾಲಿಕೆಯೂ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ಫೆಬ್ರುವರಿಯಿಂದ ಡಿಜಿಟಲ್‌ ಸಂಖ್ಯೆ

ನಗರದ ಎಲ್ಲ ಆಸ್ತಿಗಳಿಗೆ ಡಿಜಿಟಲ್‌ ಸಂಖ್ಯೆ ನೀಡುವ ಯೋಜನೆಯನ್ನು ಫೆಬ್ರುವರಿ ಮೊದಲ ವಾರದಲ್ಲಿ ಜಾರಿಗೊಳಿಸಲಾಗುತ್ತದೆ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

ಆಸ್ತಿಗಳಿಗೆ 7 ಅಂಕಿಗಳ ಡಿಜಿಟಲ್‌ ಸಂಖ್ಯೆ ನೀಡಲಾಗುತ್ತದೆ. ಈ ಸಂಖ್ಯೆಯಿಂದ ತೆರಿಗೆ ಪಾವತಿಸಿರುವ ಕುರಿತು ಮಾಹಿತಿ ದೊರೆಯಲಿದೆ. ಆಸ್ತಿ ಇರುವ ವಿಳಾಸವನ್ನು ಬೇಗ ಪತ್ತೆ ಮಾಡಬಹುದು. ಆಸ್ತಿ ಮಾಲೀಕರು ಬದಲಾದರೂ ಸಂಖ್ಯೆ ಮಾತ್ರ ಬದಲಾಗುವುದಿಲ್ಲ ಎಂದರು.

‘ಸ್ಮಾರ್ಟ್‌ಸಿಟಿಯ ಮಾಹಿತಿ ನೀಡಿ’

ಬೆಂಗಳೂರು: ಸ್ಮಾರ್ಟ್‌ಸಿಟಿ ಯೋಜನೆಯಡಿ ಪ್ರಮುಖ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವ ಕುರಿತು ಆ ಭಾಗದ ಜನಪ್ರತಿನಿಧಿಗಳ ಸಭೆ ಕರೆದು ಮಾಹಿತಿ ನೀಡಬೇಕು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಸೂಚಿಸಿದರು. ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನ ಕುರಿತು ಪಾಲಿಕೆಯ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದರು.‌

ಶಿವಾಜಿನಗರ ಬಸ್‌ ನಿಲ್ದಾಣ, ಚಾಮರಾಜಪೇಟೆಯ ಕೆ.ಆರ್.ಮಾರುಕಟ್ಟೆ ಹಾಗೂ ಗಾಂಧಿನಗರದ ಸ್ವತಂತ್ರಪಾಳ್ಯ ಕೊಳೆಗೇರಿಯನ್ನು ಸ್ಮಾರ್ಟ್‌ಸಿಟಿಯಡಿ ಅಭಿವೃದ್ಧಿಪಡಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ. ಈ ಮೂರೂ ಕ್ಷೇತ್ರಗಳ ಜನಪ್ರತಿನಿಧಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಿದರು.‌

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ಇದೇ 10ರಂದು ಸಭೆ ನಡೆಸಿ, ಶಾಸಕರ ಸಲಹೆ ಪಡೆಯುತ್ತೇವೆ’ ಎಂದರು. ಈ ಯೋಜನೆಯನ್ನು ಜಾರಿಗೊಳಿಸಲು ವಿಶೇಷ ಉದ್ದೇಶಿತ ವಾಹನ (ಎಸ್‍ಪಿವಿ) ರಚಿಸಿದ್ದು, ಇದರ ಸಭೆಯನ್ನು ಇದೇ 16ರಂದು ನಡೆಸಲಾಗುತ್ತದೆ. ಸಭೆಯಲ್ಲಿ ಚರ್ಚಿಸಿದ ಬಳಿಕ ಯೋಜನೆಯ ಜಾರಿಗೆ ಟೆಂಡರ್‌ ಆಹ್ವಾನಿಸಲಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.