ADVERTISEMENT

ರಸ್ತೆ ಗುಂಡಿ: ನಾಲ್ಕು ವಾರದಲ್ಲಿ ಅರ್ಜಿ ಪರಿಶೀಲಿಸಲು ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 19:56 IST
Last Updated 11 ಜನವರಿ 2018, 19:56 IST

ಬೆಂಗಳೂರು: ‘ನಗರದಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಕೋರಿರುವ ಅರ್ಜಿದಾರರ ಮನವಿಯನ್ನು ನಾಲ್ಕು ವಾರದೊಳಗೆ  ಪರಿಶೀಲಿಸಬೇಕು’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತಂತೆ ‘ಡವ್ ಡ್ರೈವ್ ವಿಥೌಟ್ ಬಾರ್ಡರ್ಸ್‌ ಫೌಂಡೇಷನ್’ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಲೇವಾರಿ ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರರ ವಕೀಲ ಬಿ.ವಿಕಾರ್ ಅಹಮದ್‌, ‘ನಗರದಲ್ಲಿ ರಸ್ತೆಗಳು ಗುಂಡಿ ಹೆಚ್ಚಿದ್ದು ವಾಹನ ಅಪಘಾತ ಹೆಚ್ಚುತ್ತಿದ್ದು ಜನರ ಪ್ರಾಣಕ್ಕೆ ಕುತ್ತಾಗಿ ಪರಿಣಮಿಸಿವೆ. ಆದ್ದರಿಂದ ಗುಂಡಿಗಳನ್ನು ಮುಚ್ಚಲು, ರಸ್ತೆ ಉಬ್ಬು ಹಾಗೂ ವಿಭಜಕಗಳನ್ನು ಸೂಕ್ತ ರೀತಿಯಲ್ಲಿ ನಿರ್ಮಿಸಲು ಬಿಬಿಎಂಪಿಗೆ ನಿರ್ದೇಶಿಸಬೇಕು’ ಎಂದು ಕೋರಿದರು.

ADVERTISEMENT

ಇದಕ್ಕೆ ಬಿಬಿಎಂಪಿ ಪರ ವಕೀಲರು, ‘ಈ ಕುರಿತು ಅಗತ್ಯ ಕ್ರಮ ಜರುಗಿಸಲು ಕಾಲಾವಕಾಶ ಬೇಕು’ ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ರಸ್ತೆ ಗುಂಡಿಗಳನ್ನು ಮುಚ್ಚಲು ನ್ಯಾಯಾಲಯ ನಿಮಗೆ ಈಗಾಗಲೇ ಸಾಕಷ್ಟು ಸಮಯ ನೀಡಿದೆ. ಆದರೂ ಏಕೆ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.