ADVERTISEMENT

ಸಭೆ ಕರೆಯಲು ಮುಖ್ಯಮಂತ್ರಿ ನಿರಾಸಕ್ತಿ; ದೊರೆಸ್ವಾಮಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 19:58 IST
Last Updated 11 ಜನವರಿ 2018, 19:58 IST
ಭೂ ವಂಚಿತರು ಧರಣಿ ನಡೆಸಿದರು.ಎಚ್‌.ಎಸ್‌. ದೊರೆಸ್ವಾಮಿ, ನೂರ್‌ ಶ್ರೀಧರ್‌ ಇದ್ದಾರೆ– ಪ್ರಜಾವಾಣಿ ಚಿತ್ರ
ಭೂ ವಂಚಿತರು ಧರಣಿ ನಡೆಸಿದರು.ಎಚ್‌.ಎಸ್‌. ದೊರೆಸ್ವಾಮಿ, ನೂರ್‌ ಶ್ರೀಧರ್‌ ಇದ್ದಾರೆ– ಪ್ರಜಾವಾಣಿ ಚಿತ್ರ   

ಬೆಂಗಳೂರು: ಭೂಮಿ ಮತ್ತು ವಸತಿ ವಂಚಿತರ ಸಮಸ್ಯೆ ಬಗ್ಗೆ ಚರ್ಚಿಸುವುದಕ್ಕಾಗಿ ಉನ್ನತ ಮಟ್ಟದ ಸಭೆ ಕರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಸಕ್ತಿ ತೋರುತ್ತಿದ್ದಾರೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ನೇತೃತ್ವದಲ್ಲಿ ನಗರದ ಗಾಂಧಿ ಭವನ ಬಳಿಯ ವಲ್ಲಭ ನಿಕೇತನ ಆಶ್ರಮದಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಅವರು ಮಾತನಾಡಿದರು.

ಭೂಮಿ ಹಾಗೂ ವಸತಿ ಹಕ್ಕಿಗಾಗಿ ಫಲಾನುಭವಿಗಳು ಹಲವು ವರ್ಷಗಳಿಂದ ಧರಣಿ ನಡೆಸುತ್ತಿದ್ದಾರೆ. ಪ್ರತಿ ಬಾರಿಯೂ ಭರವಸೆಯನ್ನಷ್ಟೇ ಸರ್ಕಾರ ನೀಡುತ್ತಿದ್ದು, ಅದನ್ನು ಈಡೇರಿಸಲು ಕ್ರಮ ಕೈಗೊಳ್ಳುತ್ತಿಲ್ಲ. ಪ್ರತಿಭಟನಾಕಾರರ ನಂಬಿಕೆಯನ್ನು ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ‍ ಎಂದು ವಾಗ್ದಾಳಿ ನಡೆಸಿದರು.

ADVERTISEMENT

’ಬೆಳಗಾವಿ ಅಧಿವೇಶನದ ವೇಳೆ ಪ್ರತಿಭಟನೆ ನಡೆಸಿದ್ದೆವು. ಸಮಸ್ಯೆ ಬಗ್ಗೆ ಚರ್ಚಿಸುವುದಕ್ಕಾಗಿ ಉನ್ನತ ಮಟ್ಟದ ಸಭೆ ಕರೆಯುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಆ ಸಭೆ ನಡೆಸಿಲ್ಲ. ಅವರಿಬ್ಬರೂ ಕೊಟ್ಟ ಮಾತು ತಪ್ಪಿದ್ದಾರೆ’ ಎಂದು ದೂರಿದರು.

’ಭೂಮಿ ಹಾಗೂ ವಸತಿ ವಂಚಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದಕ್ಕಾಗಿ ಸರ್ಕಾರ ಕೆಲ ನಿಯಮಗಳನ್ನು ರೂಪಿಸಿದೆ. ಅವುಗಳನ್ನು ಜಾರಿಗೆ ತರಬೇಕಾದ ಕೆಳ ಹಂತದ ಅಧಿಕಾರಿಗಳು ಉದ್ಧಟತನ ತೋರುತ್ತಿದ್ದಾರೆ’ ಎಂದು ದೊರೆಸ್ವಾಮಿ ದೂರಿದರು.

ತಾಲ್ಲೂಕು ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಭೂ ಮಂಜೂರಾತಿ ಸಮಿತಿ ಇದೆ. ನಿಗದಿಯಂತೆ ಸಮಿತಿಯ ಸಭೆ ನಡೆಯುತ್ತಿಲ್ಲ. ಹಿರಿಯ ಅಧಿಕಾರಿಗಳು ನೀಡುವ ಆದೇಶಗಳನ್ನೂ ಆ ಸಮಿತಿ ಪಾಲಿಸುತ್ತಿಲ್ಲ. ಇದರಿಂದಾಗಿ ಭೂಮಿ ಹಾಗೂ ವಸತಿ ವಂಚಿತರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.

ಸಮಿತಿಯ ನೂರ್‌ ಶ್ರೀಧರ್‌, ‘ಬೇಡಿಕೆ ಈಡೇರಿಕೆಗಾಗಿ ಐದು ಸುತ್ತಿನ ಹೋರಾಟಗಳನ್ನು ಮಾಡಿದ್ದೇವೆ. ಪ್ರತಿ ಬಾರಿಯೂ ಭರವಸೆಯಷ್ಟೇ ಸಿಕ್ಕಿದೆ. ಡಿ. 2ರಂದು ಉನ್ನತ ಮಟ್ಟದ ಸಭೆ ನಡೆಸುವುದಾಗಿ ಹೇಳಿದ್ದರು. ಇದುವರೆಗೂ ಸಭೆ ನಡೆಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಬಾರಿ ಯಾವುದೇ ಭರವಸೆಗೂ ನಾವು ಜಗ್ಗುವುದಿಲ್ಲ. ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡು ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಪಡೆದುಕೊಂಡ ಮೇಲೆಯೇ ಧರಣಿ ಕೈಬಿಡುತ್ತೇವೆ’ ಎಂದು ಸಮಿತಿಯ ಸಿರಿಮನೆ ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.