ADVERTISEMENT

ಪರಿಷ್ಕೃತ ದರ: ಚಾಲಕರಲ್ಲಿ ಗೊಂದಲ

ಆ್ಯಪ್ ಆಧಾರಿತ ಕ್ಯಾಬ್ ಸೇವೆ: ಹಳೆಯ ದರದ ಪ್ರಕಾರವೇ ಪ್ರಯಾಣಿಕರಿಂದ ಹಣ ವಸೂಲಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 19:30 IST
Last Updated 12 ಜನವರಿ 2018, 19:30 IST
ಪರಿಷ್ಕೃತ ದರ: ಚಾಲಕರಲ್ಲಿ ಗೊಂದಲ
ಪರಿಷ್ಕೃತ ದರ: ಚಾಲಕರಲ್ಲಿ ಗೊಂದಲ   

ಬೆಂಗಳೂರು: ಕ್ಯಾಬ್‌ಗಳು ಮತ್ತು ಟ್ಯಾಕ್ಸಿಗಳ ಪ್ರಯಾಣ ದರ ಪರಿಷ್ಕರಿಸಿ ಸಾರಿಗೆ ಇಲಾಖೆಯು ಜನವರಿ 9ರಂದು ಆದೇಶ ಹೊರಡಿಸಿದೆ. ಆದರೆ, ಪರಿಷ್ಕೃತ ದರದ ಪ್ರಕಾರ ಹಣ ಪಡೆಯುವ ಬಗ್ಗೆ ಟ್ಯಾಕ್ಸಿ ಚಾಲಕರು ಹಾಗೂ ಪ್ರಯಾಣಿಕರಲ್ಲಿ ಗೊಂದಲವಿದೆ.

ಪರಿಷ್ಕೃತ ದರದ ಬಗ್ಗೆ ಕ್ಯಾಬ್‌ ಚಾಲಕರಿಗೆ ನಿಖರವಾದ ಮಾಹಿತಿ ಇಲ್ಲ. ಪ್ರಯಾಣಕ್ಕೆ ಎಷ್ಟು ಹಣ ಪಡೆಯಬೇಕು ಎಂಬ ಕುರಿತು ಅವರು ಇನ್ನೂ ಖಚಿತ ನಿರ್ಧಾರಕ್ಕೆ ಬಂದಿಲ್ಲ. ಹೆಚ್ಚಿನ ಚಾಲಕರು ಪ್ರಯಾಣಿಕರಿಂದ ಈಗಲೂ ಹಿಂದಿನ ದರದ ಪ್ರಕಾರವೇ ಹಣ ಪಡೆಯುತ್ತಿದ್ದಾರೆ.

‘ಸಾರಿಗೆ ಇಲಾಖೆ ಪ್ರಯಾಣ ದರ ಪರಿಷ್ಕರಣೆ ಮಾಡಿದೆ ಎಂಬ ಮಾಹಿತಿಯಷ್ಟೇ ಸಿಕ್ಕಿದೆ. ಓಲಾ ಕಂಪನಿಯಿಂದ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಬಂದಿಲ್ಲ. ಈ ಬಗ್ಗೆ ನಾವೂ ಗೊಂದಲದಲ್ಲಿದ್ದೇವೆ’ ಎಂದು ಚಾಲಕ ಸುರೇಶ್ ಹೇಳಿದರು.

ADVERTISEMENT

ಪರಿಷ್ಕೃತ ದರದ ಪ್ರಕಾರ 4 ಕಿ.ಮೀ.ವರೆಗಿನ ಪ್ರಯಾಣಕ್ಕೆ ಕನಿಷ್ಠ ₹ 44 ಪಡೆಯಬಹುದು. ಈ ಆದೇಶ ಹೊರಬಿದ್ದ ಬಳಿಕವೂ ಉಬರ್ ಹಾಗೂ ಓಲಾ ಕಂಪನಿಗಳು 4 ಕಿ.ಮೀ.ವರೆಗಿನ ಪ್ರಯಾಣಕ್ಕೆ ಈ ಹಿಂದಿನಂತೆಯೇ ₹80ರಂತೆ ದರ ವಸೂಲಿ ಮಾಡುತ್ತಿವೆ.  ಈ ಬಗ್ಗೆ ಚಾಲಕರನ್ನು ಪ್ರಶ್ನಿಸಿದರೆ, ‘ಕಂಪನಿಯವರನ್ನೇ ಕೇಳಿ’ ಎನ್ನುತ್ತಿದ್ದಾರೆ. ಈ ಗೊಂದಲಕ್ಕೆ ಅಧಿಕಾರಿಗಳೇ ಪರಿಹಾರ ಸೂಚಿಸಬೇಕು ಎಂದು ಶಾಂತಿನಗರದ ಬಿಂದುಶ್ರೀ ಒತ್ತಾಯಿಸಿದರು.

‘4 ಕಿ.ಮೀ.ವರೆಗಿನ ಪ್ರಯಾಣಕ್ಕೆ ಕನಿಷ್ಠ ₹ 44 ದರ ನಿಗದಿ ಮಾಡಿದ್ದರಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಆದರೆ, ನಂತರದ ಪ್ರತಿ ಕಿಲೊಮೀಟರ್‌ಗೆ ಕನಿಷ್ಠ ಹಾಗೂ ಗರಿಷ್ಠ ದರವನ್ನು ಕಾರುಗಳ ಮೌಲ್ಯಕ್ಕೆ ಅನುಗುಣವಾಗಿ ಏರಿಕೆ ಮಾಡಿರುವುದು ಸರಿಯಲ್ಲ. ನಿತ್ಯ ಕ್ಯಾಬ್ ಮೂಲಕ ಸಂಚಾರಿಸುವ ನಮ್ಮಂಥವರಿಗೆ ಇದು ಹೊರೆಯಾಗಲಿದೆ’ ಎಂದು ಸಾಫ್ಟ್‌ವೇರ್ ಎಂಜಿನಿಯರ್ ಲಕ್ಷ್ಮಿ ಬೇಸರ ವ್ಯಕ್ತಪಡಿಸಿದರು.

ಸಮಯ ಬೇಕು: ಪ್ರಯಾಣಿಕರಿಂದ ಪರಿಷ್ಕೃತ ದರದ ಪ್ರಕಾರ ಹಣ ಪಡೆಯಲು ಆ್ಯಪ್‌ಗಳಲ್ಲೂ ತಾಂತ್ರಿಕ ಮಾರ್ಪಾಡು ಮಾಡಬೇಕಿದೆ. ಇದಕ್ಕೆ ಆ್ಯಪ್ ಆಧಾರಿತ ಕ್ಯಾಬ್ ಕಂಪನಿಗಳಿಗೆ ಇನ್ನೂ ಎರಡು ದಿನ ಬೇಕು ಎಂದು ಉಬರ್ ಹಾಗೂ ಓಲಾ ಕ್ಯಾಬ್ ಚಾಲಕ ಕೃಷ್ಣಮೂರ್ತಿ ತಿಳಿಸಿದರು.

‘ಆ್ಯಪ್‌ನಲ್ಲಿ ತಾಂತ್ರಿಕ ಬದಲಾವಣೆ ಮಾಡುವವರೆಗೆ ಪ್ರಯಾಣಿಕರಿಂದ ಈ ಹಿಂದಿನ ದರವನ್ನೇ ಪಡೆಯಿರಿ ಎಂದು ಕಂಪನಿಯ ಅಧಿಕಾರಿಗಳು ಸೂಚಿಸಿದ್ದಾರೆ. ಪ್ರಯಾಣಿಕರಿಗೂ ಈ ವಿಚಾರ ತಿಳಿಸುತ್ತಿದ್ದೇವೆ’ ಎಂದರು.

ಕನಿಷ್ಠ ಪ್ರಯಾಣ ದರ ನಿಗದಿಗೆ ಆಕ್ಷೇಪ: ‘4 ಕಿ.ಮೀ.ವರೆಗಿನ ಪ್ರಯಾಣಕ್ಕೆ ಕನಿಷ್ಠ ₹44 ನಿಗದಿ ಮಾಡಿರುವುದರಿಂದ ನಮ್ಮ ವರಮಾನಕ್ಕೆ ಭಾರಿ ಹೊಡೆತ ಬೀಳಲಿದೆ. ಆ ಮೊತ್ತದಲ್ಲಿ ಸೇವಾ ತೆರಿಗೆ ಹಾಗೂ ಕಂಪನಿಗಳ ಕಮಿಷನ್ ಕಡಿತವಾಗಿ ನಮಗೆ ಉಳಿಯುವುದು ಕೇವಲ ₹24. ಹೀಗಾಗಿ, ಕನಿಷ್ಠ ದರವನ್ನು ಅಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಬೇಕು’ ಎಂದು ಓಲಾ ಕ್ಯಾಬ್ ಚಾಲಕ ಶ್ರೀನಿವಾಸ್ ಆಗ್ರಹಿಸಿದರು.

‘ಟೋಲ್ ಶುಲ್ಕವನ್ನು ನಾವೇ ಪಾವತಿಸುತ್ತಿದ್ದೇವೆ. ಆದರೆ ಓಲಾ ಹಾಗೂ ಉಬರ್‌ ಕಂಪೆನಿಗಳು ಟೋಲ್‌ ಶುಲ್ಕವನ್ನು ಭರಿಸುತ್ತಿರುವುದಾಗಿ ಸುಳ್ಳು ಹೇಳುತ್ತಿವೆ. ಪ್ರಯಾಣಿಕರಿಂದ ಇದನ್ನು ವಸೂಲಿ ಮಾಡಲು ಅನುಮತಿ ನೀಡಿರುವುದು ಸಂತಸದ ವಿಷಯ’ ಎಂದು ಎಸ್.ಮಂಜುನಾಥ್ ತಿಳಿಸಿದರು.

ಪರಿಷ್ಕೃತ ಆದೇಶ ಹೊರಬಿದ್ದ ದಿನದಿಂದ ಕ್ಯಾಬ್‌ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಇದು ದೈನಂದಿನ ಗಳಿಕೆಯ ಮೇಲೂ ಪರಿಣಾಮ ಬೀರಿದೆ ಎಂದು ಉಬರ್ ಚಾಲಕ ವಿಜಯ್ ಅಳಲು ತೋಡಿಕೊಂಡರು

‘ನಮಗೆ ಲಾಭವಿಲ್ಲ’

‘ಪ್ರತಿ ಕಿಲೊ ಮೀಟರ್‌ಗೆ ಇಂತಿಷ್ಟು ಹಣ ನೀಡುವುದಾಗಿ ಓಲಾ ಹಾಗೂ ಉಬರ್‌ ಕಂಪನಿಗಳು ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಅದರಂತೆ ನಾವು ಕೆಲಸ ಮಾಡುತ್ತಿದ್ದೇವೆ. ದರ ಪರಿಷ್ಕರಣೆಯಿಂದ ಆ ಕಂಪನಿಗಳಿಗಷ್ಟೇ ಲಾಭ. ಈ ಲಾಭವನ್ನು ಅವರು ನಮಗೆ ವರ್ಗಾಯಿಸುವುದಿಲ್ಲ. ಹೀಗಾಗಿ, ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ’ ಎಂದು ಕಾರು ಚಾಲಕ ರಾಜಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅತ್ಯಾಧುನಿಕ ವಾಹನಗಳಿಗೆ ಹಾಗೂ ಹಳೆಯ ವಾಹನಗಳಿಗೆ ಅದು ನೋಂದಣಿಯಾದ ವರ್ಷದ ಆಧಾರದಲ್ಲಿ ಪ್ರತಿ ಕಿ.ಮೀ.ಗೆ ಒಂದೊಂದು ರೀತಿಯ ದರವನ್ನು ಕಂಪನಿಗಳು ನಿಗದಿಪಡಿಸಿವೆ. ಪರಿಷ್ಕೃತ ದರದ ಕುರಿತ ಆದೇಶದಲ್ಲೂ ಕಾರುಗಳ ಮೌಲ್ಯಕ್ಕೆ ತಕ್ಕಂತೆ ಪ್ರತಿ ಕಿ.ಮೀ.ಗೆ ಇಂತಿಷ್ಟು ದರ ಎಂದು ನಿಗದಿ ಮಾಡಲಾಗಿದೆ. ಸಮಾನ ಕೆಲಸ ಮಾಡುವ ನಮಗೆ ಇದರಿಂದ ವಂಚನೆಯಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.