ADVERTISEMENT

ಹಳ್ಳದಲ್ಲಿ ಉರುಳಿ ಬಿದ್ದ ಟ್ರಕ್‌; ಎಂಜಿನಿಯರ್‌ ಸಾವು

ಮೆಟ್ರೊ ಕಾಮಗಾರಿಗಾಗಿ ತೋಡಿದ್ದ ಹಳ್ಳದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 19:30 IST
Last Updated 13 ಜನವರಿ 2018, 19:30 IST

ಬೆಂಗಳೂರು: ಮೆಟ್ರೊ ಕಾಮಗಾರಿಗಾಗಿ ತೊಡಿದ್ದ ಹಳ್ಳದಲ್ಲಿ ಟ್ರಕ್‌ ಉರುಳಿಬಿದ್ದು ಎಂಜಿನಿಯರ್‌ ಸೋನು ಸಿಂಗ್‌ (32) ಮೃತಪಟ್ಟಿದ್ದಾರೆ.

ದೆಹಲಿಯ ನಿವಾಸಿಯಾದ ಅವರು ಕಾಮಗಾರಿಗೆ ಬಳಸುತ್ತಿದ್ದ ಜನರೇಟರ್‌ ನಿರ್ವಹಣೆಗಾಗಿ ಶುಕ್ರವಾರ ನಗರಕ್ಕೆ ಬಂದಿದ್ದರು. ಟಿನ್ ಫ್ಯಾಕ್ಟರಿ ಬಳಿ ತೊಡಲಾಗಿದ್ದ ಹಳ್ಳದಲ್ಲಿದ್ದ ಕಂಟೇನರ್‌ನಲ್ಲಿ ಮಲಗಿದ್ದರು. ಮರಳು ತುಂಬಿಕೊಂಡು ಹೊಸಕೋಟೆ ಕಡೆಯಿಂದ ಬರುತ್ತಿದ್ದ ಟ್ರಕ್‌ ಶನಿವಾರ ಬೆಳಿಗ್ಗೆ 4.30ರ ಸುಮಾರಿಗೆ ಬ್ಯಾರಿಕೇಡ್‌ಗೆ ಗುದ್ದಿ ಹಳ್ಳದಲ್ಲಿದ್ದ ಕಂಟೇನರ್‌ ಮೇಲೆ ಬಿದ್ದಿತ್ತು.

ಅದನ್ನು ಗಮನಿಸಿದ ಸ್ಥಳದಲ್ಲಿದ್ದ ಕಾರ್ಮಿಕರು, ಕ್ರೇನ್‌ ಮೂಲಕ ಟ್ರಕನ್ನು ಮೇಲೆತ್ತಿದ್ದರು. ಅದಾದ ಬಳಿಕ ಕಂಟೇನರ್‌ ಒಳಗೆ ಹೋಗಿ ನೋಡಿದಾಗ, ಸೋನುಸಿಂಗ್‌  ಮೃತಪಟ್ಟಿದ್ದು ಗೊತ್ತಾಗಿದೆ.

ADVERTISEMENT

‘ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದ್ದು, ಆತನಿಗೂ ಗಾಯವಾಗಿದ್ದು ಆಸ್ಪತ್ರೆಗೆ ಸೇರಿಸಿದ್ದೇವೆ. ಕಂಟೇನರ್‌ನಲ್ಲಿದ್ದ ಕಾರ್ಮಿಕರೊಬ್ಬರನ್ನು ರಕ್ಷಿಸಿದ್ದೇವೆ’ ಎಂದು ಕೆ.ಆರ್‌.ಪುರ ಸಂಚಾರ ಪೊಲೀಸರು ತಿಳಿಸಿದರು.

ಕ್ಲೀನರ್‌ ಸಾವು: ನೈಸ್ ರಸ್ತೆಯಲ್ಲಿ ನಿಂತಿದ್ದ ಕಂಟೈನರ್‌ಗೆ ಮಿನಿ ಲಾರಿ ಡಿಕ್ಕಿ ಹೊಡೆದಿದ್ದರಿಂದ ಕ್ಲೀನರ್‌ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪ್ರೇಮ್‌ಕುಮಾರ್‌ (25) ಮೃತಪಟ್ಟಿದ್ದಾರೆ.

ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಿಂದ ಲಾರಿಯಲ್ಲಿ ಈರುಳ್ಳಿ ತುಂಬಿಕೊಂಡು ಶುಕ್ರವಾರ ರಾತ್ರಿ 12 ಗಂಟೆಗೆ ತಮಿಳುನಾಡಿಗೆ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಚಾಲಕ ಬಾಬು ಅವರಿಗೆ ಗಾಯವಾಗಿದೆ ಎಂದು ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.