ADVERTISEMENT

ಮೂರು ರೇಸ್ ಕಾರು ಪರಿಚಯ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 19:30 IST
Last Updated 14 ಜನವರಿ 2018, 19:30 IST

ಬೆಂಗಳೂರು: ಆರ್.ವಿ.ಎಂಜಿನಿಯರಿಂಗ್ ಕಾಲೇಜಿನ ಅಶ್ವ ತಂಡವು ಕಂಬಷನ್ ಕಾರು, ಹೈಬ್ರಿಡ್ ಕಾರು ಹಾಗೂ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಿದೆ.

ಈ ವರ್ಷದ ಅಂತರರಾಷ್ಟ್ರೀಯ ರೇಸ್ ಸ್ಪರ್ಧೆಗಾಗಿ ಈ ಕಾರುಗಳನ್ನು ತಯಾರಿಸಲಾಗಿದೆ. ಇದೇ 24ರಿಂದ 28ರ ವರೆಗೆ ನಡೆಯಲಿರುವ ಫಾರ್ಮುಲಾ ಭಾರತ್ ರೇಸಿಂಗ್‌ನಲ್ಲಿ ಕಂಬಷನ್ ಹಾಗೂ ಎಲೆಕ್ಟ್ರಿಕ್ ಕಾರುಗಳು ಸ್ಪರ್ಧಿಸಲಿವೆ.

ಇಟಲಿಯ ಫಾರ್ಮುಲಾ ಸ್ಟೂಡೆಂಟ್ ರೇಸ್‌ನಲ್ಲಿ ಭಾಗವಹಿಸುವ ಇರಾದೆಯನ್ನು ಈ ತಂಡವು ಹೊಂದಿದೆ. ಅಮೆರಿಕದಲ್ಲಿ ಮೇ ತಿಂಗಳಿನಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಈ ಕಾರುಗಳು ಸ್ಪರ್ಧಿಸಲಿವೆ. ಅರುಣ್ ರಾಜ್ ಸುಬ್ಬರಾಜ್ ಮಾರ್ಗದರ್ಶನದಲ್ಲಿ ಇವುಗಳನ್ನು ತಯಾರಿಸಲಾಗಿದೆ.

ADVERTISEMENT

ಎಲೆಕ್ಟ್ರಿಕ್ ಕಾರು ತಯಾರಿಕೆಯ ನೇತೃತ್ವ ವಹಿಸಿರುವ ಪ್ರಣವ್ ನಂದ, ‘ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ಪೂರ್ಣ ಪ್ರಮಾಣದಲ್ಲಿ ಲಗ್ಗೆ ಇಡುವ ವೇಳೆಗೆ ಅದರಲ್ಲಿ ನನ್ನ ಕೊಡುಗೆಯೂ ಇರಬೇಕೆಂದು ಬಯಸಿದ್ದೇನೆ’ ಎಂದರು.

ತಂಡದ ಮುಖ್ಯ ಸಲಹೆಗಾರ ಡಾ.ರವೀಂದ್ರ ಕುಲಕರ್ಣಿ, ‘ತರಗತಿಯ ಕಲಿಕೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಅಶ್ವ ರೇಸಿಂಗ್ ಫಾರ್ಮುಲಾ ವಿದ್ಯಾರ್ಥಿ ಕಾರ್ಯಕ್ರಮವು ನೆರವಾಗುತ್ತಿದೆ. ಎಂಜಿನಿಯರಿಂಗ್ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಸಹಾಯವಾಗಿದೆ’ ಎಂದರು.

ಕಾರುಗಳ ಬಗ್ಗೆ ವಿವರ:

ಕಂಬಷನ್ ಕಾರಿನ ತೂಕ 210 ಕೆ.ಜಿ. ಇದ್ದು, ಇದು ಪ್ರತಿ ಗಂಟೆಗೆ 120 ಕಿ.ಮೀ. ಸಂಚರಿಸುತ್ತದೆ. ಹೈಬ್ರಿಡ್‌ ಕಾರು 300 ಕೆ.ಜಿ. ತೂಕವಿದ್ದು, ಗಂಟೆಗೆ 80 ಕಿ.ಮೀ ಸಂಚರಿಸಲಿದೆ. 220 ಸಿಸಿ ಸಾಮರ್ಥ್ಯದ ಎಂಜಿನ್‌ ಹೊಂದಿರುವ ಈ ಕಾರು ಲಿಥಿಯಮ್ ಐರನ್ ಫಾಸ್ಫೇಟ್ ಬ್ಯಾಟರಿಯಿಂದ ಚಲಿಸುತ್ತದೆ. ಎಲೆಕ್ಟ್ರಿಕ್ ಕಾರು 200 ಕೆ.ಜಿ. ತೂಕವಿದ್ದು, ಪ್ರತಿ ಗಂಟೆಗೆ 90 ಕಿ.ಮೀ. ಚಲಿಸುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.