ADVERTISEMENT

ಗಾಂಜಾ ಮತ್ತಿನಲ್ಲಿ ಮಾರಾಮಾರಿ; ಆತಂಕ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 19:59 IST
Last Updated 15 ಜನವರಿ 2018, 19:59 IST

ಬೆಂಗಳೂರು: ಗಾಂಜಾ ಮತ್ತಿನಲ್ಲಿದ್ದ ಯುವಕರ ಎರಡು ಗುಂಪುಗಳ ನಡುವೆ ಹಲಸೂರು ಠಾಣೆ ಸಮೀಪವೇ ಭಾನುವಾರ ಮಾರಾಮಾರಿ ನಡೆದಿದೆ. ಕೈಯಲ್ಲಿ ದೊಣ್ಣೆ, ಬ್ಯಾಟ್‌ ಹಿಡಿದು ಯುವಕರು ಓಡಾಡಿದ್ದರಿಂದ ಕೆಲಹೊತ್ತು ಸ್ಥಳೀಯರು ಆತಂಕಗೊಂಡಿದ್ದರು.

ಯುವತಿಯ ವಿಚಾರವಾಗಿ ಯುವಕರಿಬ್ಬರ ನಡುವೆ ಕೆಲದಿನಗಳಿಂದ ಮನಸ್ತಾಪವಿತ್ತು. ಅದೇ ಕಾರಣಕ್ಕೆ ಆ ಯುವಕರಿಬ್ಬರು ಕಂಠಪೂರ್ತಿ ಕುಡಿದು ಗಾಂಜಾ ಸೇವಿಸಿ, ಅದರ ಮತ್ತಿನಲ್ಲಿ ಜಗಳ ಮಾಡಲೆಂದು ಹಲಸೂರು ಬಳಿ ಬಂದಿದ್ದರು. ಪರಸ್ಪರ ಕೈ ಕೈ ಮಿಲಾಯಿಸಿ ರಸ್ತೆಯಲ್ಲೇ ಹೊಡೆದಾಡಿದರು.

ಒಂದು ಗುಂಪಿನ ಯುವಕರು ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಮತ್ತೊಂದು ಗುಂಪಿನ ಯುವಕರು ಅವರನ್ನು ರಸ್ತೆಯಲ್ಲೇ ಬೆನ್ನಟ್ಟಿದ್ದರು. ಈ ವೇಳೆ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದರು. ಒಬ್ಬಾತ, ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳ ಗಾಜಿಗೆ ಗುದ್ದಿದ್ದ. ಈ ವರ್ತನೆಯನ್ನು ಸ್ಥಳೀಯರೊಬ್ಬರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ADVERTISEMENT

‘ಮತ್ತಿನಲ್ಲಿದ್ದ ಯುವಕರು, ಎಲ್ಲೆಂದರಲ್ಲಿ ಓಡಾಡುತ್ತಿದ್ದರು. ಯಾರಿಗಾದರೂ ಹೊಡೆಯುತ್ತಾರೆಂಬ ಭಯ ಉಂಟಾಗಿತ್ತು. ಕೆಲವರಿಗೆ ಬೆದರಿಕೆ ಹಾಕಿ ಮುಂದೆ ಹೋದರು. ಅವರ ಕೈಯಲ್ಲಿದ್ದ ಬ್ಯಾಟ್, ದೊಣ್ಣೆ ನೋಡಿ ಯಾರೊಬ್ಬರೂ ಹತ್ತಿರ ಹೋಗಲಿಲ್ಲ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ದೃಶ್ಯ ಪರಿಶೀಲನೆ:  ‘ಇದುವರೆಗೂ ಯಾರೊಬ್ಬರೂ ದೂರು ನೀಡಿಲ್ಲ. ಕೆಲ ಸ್ಥಳೀಯರು ಹೊಡೆದಾಟದ ವಿಡಿಯೊ ಕೊಟ್ಟಿದ್ದಾರೆ. ಅದನ್ನು ಪರಿಶೀಲಿಸುತ್ತಿದ್ದೇವೆ’  ಎಂದು ಹಲಸೂರು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.