ADVERTISEMENT

ಹಿಂಬಾಗಿಲಿನಲ್ಲಿ ಮದ್ಯ ಮಾರಾಟ; ಪೊಲೀಸರ ದಾಳಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 20:06 IST
Last Updated 15 ಜನವರಿ 2018, 20:06 IST

ಬೆಂಗಳೂರು: ಸುರಕ್ಷತಾ ಕ್ರಮಗಳಿಲ್ಲದ ಕಾರಣಕ್ಕೆ ಬೀಗ ಜಡಿದಿದ್ದರೂ ಹಿಂಬಾಗಿಲ ಮೂಲಕ ಮದ್ಯ ಮಾರಾಟ ಮಾಡುತ್ತಿದ್ದ ಮೆಜೆಸ್ಟಿಕ್‌ನ ‘ರಜನಿ ಬಾರ್ ಆ್ಯಂಡ್‌ ರೆಸ್ಟೊರೆಂಟ್‌’ ಮೇಲೆ ದಾಳಿ ನಡೆಸಿದ ಪೊಲೀಸರು, ಮಾಲೀಕರು ಸೇರಿ 9 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಕಲಾಸಿಪಾಳ್ಯದ ಕೈಲಾಶ್ ಬಾರ್‌ ಆ್ಯಂಡ್‌ ರೆಸ್ಟೊರೆಂಟ್‌ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಐವರು ಕಾರ್ಮಿಕರು ಮೃತಪಟ್ಟಿದ್ದರಿಂದ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು, ನಗರದಲ್ಲಿರುವ ಬಾರ್‌ ಹಾಗೂ ರೆಸ್ಟೊರೆಂಟ್‌ನಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದರು. ಅದೇ ವೇಳೆ ರಜನಿ ಬಾರ್ ಆ್ಯಂಡ್‌ ರೆಸ್ಟೊರೆಂಟ್‌ನಲ್ಲಿ ಸುರಕ್ಷತಾ ಕ್ರಮಗಳಿಲ್ಲದಿರುವುದು ಪತ್ತೆಯಾಗಿತ್ತು. ಹೀಗಾಗಿ ಜ. 11ರಂದು ಬಾರ್‌ ಬಾಗಿಲಿಗೆ ಅಧಿಕಾರಿಗಳು ಬೀಗ ಜಡಿದು ಸೀಜ್‌ ಮಾಡಿದ್ದರು.

ಅದಾದ ಮರುದಿನದಿಂದ ಈ ಬಾರ್‌ ಆ್ಯಂಡ್‌ ರೆಸ್ಟೊರೆಂಟ್‌ನ ಹಿಂಬಾಗಿಲು ತೆರೆದು ವ್ಯಾಪಾರ ಮಾಡಲಾಗುತ್ತಿತ್ತು. ಕೆಲವು ಬಾರಿ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಹೋಗಿದ್ದಾಗ, ಮುಂದಿನ ಬಾಗಿಲು ಮುಚ್ಚಿರುವುದನ್ನು ನೋಡಿ ವ್ಯಾಪಾರ ನಡೆಯುತ್ತಿಲ್ಲವೆಂದು ತಿಳಿದು ವಾಪಸ್‌ ಹೋಗಿದ್ದರು. ಆದರೆ, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ADVERTISEMENT

ಅದರನ್ವಯ ಉಪ್ಪಾರಪೇಟೆ ಪಿಎಸ್ಐ ರಾಜೇಂದ್ರ ನೇತೃತ್ವದ ತಂಡ, ಬೆಳಿಗ್ಗೆ 8.30 ಗಂಟೆಗೆ  ದಾಳಿ ನಡೆಸಿ ಅಕ್ರಮವನ್ನು ಪತ್ತೆ ಮಾಡಿದೆ.

ಕ್ಯಾಷಿಯರ್‌, ಕೆಲಸಗಾರರು ವಶಕ್ಕೆ: ದಾಳಿ ವೇಳೆ ಬಾರ್‌ನಲ್ಲಿ ಕ್ಯಾಷಿಯರ್‌ಗಳಾದ ಸುನೀಲ್, ರಘು ಹಾಗೂ ಸಪ್ಲೈಯರ್‌ಗಳಾದ ರಮೇಶ್, ಹರೀಶ್, ಆದರ್ಶ ಮಾತ್ರ ಇದ್ದರು. ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ₹5,550 ನಗದು, ₹7,200 ನಗದು ಜಪ್ತಿ ಮಾಡಿದ್ದಾರೆ.

ಅವರು ನೀಡಿದ ಮಾಹಿತಿಯಂತೆ, ಮಾಲೀಕ ದಯಾನಂದ, ವ್ಯವಸ್ಥಾಪಕ ಕೃಷ್ಣಪ್ಪ, ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸೋಮಶೇಖರ್‌, ಶ್ರೀನಿವಾಸ್ ವಿರುದ್ಧ ‘ಕರ್ನಾಟಕ ಅಬಕಾರಿ ಕಾಯ್ದೆ 1965’ರ ಸೆಕ್ಷನ್‌ 34, 36, 41ರಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಗರದ 110ಕ್ಕೂ ಹೆಚ್ಚು ಬಾರ್‌ ಮತ್ತು ರೆಸ್ಟೊರೆಂಟ್‌ಗಳು ಉದ್ದಿಮೆ ಪರವಾನಗಿ ಪಡೆದಿಲ್ಲ ಎಂಬುದನ್ನು ಬಿಬಿಎಂಪಿ ಅಧಿಕಾರಿಗಳೇ ಇತ್ತೀಚೆಗೆ ಪತ್ತೆ ಹಚ್ಚಿದ್ದಾರೆ. ಅವುಗಳ ಪೈಕಿ ಕೆಲ ಬಾರ್‌ಗಳಿಗೆ ಅವರೇ ಬೀಗ ಜಡಿದು ಬಂದಿದ್ದಾರೆ. ಹಲವು ಬಾರ್‌ಗಳು ಪುನಃ ಆರಂಭವಾಗಿದ್ದು, ಆ ಬಗ್ಗೆ ಪರಿಶೀಲನೆ ನಡೆಸುತ್ತಿಲ್ಲ.

‘ಅಧಿಕಾರಿಗಳು ಜಡಿದ ಬೀಗವನ್ನು ರಾಜಾರೋಷವಾಗಿ ಬಾರ್‌ ಮಾಲೀಕರು ಒಡೆಸಿ, ವ್ಯಾಪಾರ ಆರಂಭಿಸಿದ್ದಾರೆ. ಕೆಲವನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದೇವೆ. ಉಳಿದ ಬಾರ್‌ಗಳನ್ನು ಬಿಬಿಎಂಪಿ ಅಧಿಕಾರಿಗಳೇ ಗುರುತಿಸಿ ಪುನಃ ಕಾರ್ಯಾಚರಣೆ ನಡೆಸಬೇಕು. ಈ ಬಗ್ಗೆ ಅವರಿಗೂ ಮಾಹಿತಿ ನೀಡಿದ್ದೇವೆ. ಅವರು ನಿಖರ ಮಾಹಿತಿ ಕೊಟ್ಟರೆ ನಾವೂ ಕ್ರಮ ಕೈಗೊಳ್ಳುತ್ತೇವೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.