ADVERTISEMENT

ಪೊಲೀಸರಿಗೆ ಹೊಡೆದು ರೈಫೆಲ್ ಕದ್ದೊಯ್ದರು!

ಪೊಲೀಸರು–ಮನೆಗಳ್ಳರ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 20:23 IST
Last Updated 18 ಜನವರಿ 2018, 20:23 IST
ಪರಮೇಶಪ್ಪ
ಪರಮೇಶಪ್ಪ   

ಬೆಂಗಳೂರು: ಕೊಡಿಗೇಹಳ್ಳಿ ಸಮೀಪದ ಟಾಟಾನಗರದಲ್ಲಿ ಬುಧವಾರ ರಾತ್ರಿ ತಮ್ಮನ್ನು ಹಿಡಿಯಲು ಬಂದ ಗಸ್ತು ಪೊಲೀಸರ ಮೇಲೆಯೇ ಹಲ್ಲೆ ನಡೆಸಿರುವ ನಾಲ್ವರು ಕಳ್ಳರು, ಕಾನ್‌ಸ್ಟೆಬಲ್‌ ಪರಮೇಶಪ್ಪ ಅವರಿಂದ ರೈಫೆಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.

ರಸ್ತೆ ಕಾಮಗಾರಿಗೆ ಹಾಕಲಾಗಿದ್ದ ಜಲ್ಲಿ ಕಲ್ಲುಗಳನ್ನು ಪೊಲೀಸರತ್ತ ತೂರಿರುವ ಆರೋಪಿಗಳು, ಅವರು ಕೆಳಗೆ ಬೀಳುತ್ತಿದ್ದಂತೆಯೇ ರೈಫೆಲ್ ಕಸಿದು
ಕೊಂಡು ಹೋಗಿದ್ದಾರೆ. ಈ ದೃಶ್ಯಗಳು ಸಿ.ಸಿ ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಹಲ್ಲೆಗೊಳಗಾದ ಕಾನ್‌ಸ್ಟೆಬಲ್‌ ಸಿದ್ದಪ್ಪ ಹಾಗೂ ಪರಮೇಶಪ್ಪ ಯಲಹಂಕದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಆಗಿದ್ದೇನು: ‘ರಾತ್ರಿ 8.30ರ ಸುಮಾರಿಗೆ ಠಾಣೆಗೆ ತೆರಳಿ ಕರ್ತವ್ಯಕ್ಕೆ ವರದಿ ಮಾಡಿಕೊಂಡ ನಾನು, ಮೇಲಧಿಕಾರಿಗಳ ಸೂಚನೆಯಂತೆ ಸಿದ್ದಪ್ಪನ ಜತೆ ಬೈಕ್‌ನಲ್ಲಿ ಗಸ್ತು ಹೊರಟೆ. ಎಂದಿನಂತೆ ಒಂದು ವಾಕಿಟಾಕಿ, 303 ರೈಫೆಲ್ ಹಾಗೂ ಜೀವಂತ ಗುಂಡು ನಮ್ಮ ಜತೆ ಇದ್ದವು’ ಎಂದು ಪರಮೇಶಪ್ಪ ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

‘ಆಮ್ಕೊ ಲೇಔಟ್‌ನ ಗಣೇಶ ದೇವಸ್ಥಾನ ರಸ್ತೆಯಲ್ಲಿ ನಾಲ್ವರು ಅಪರಿಚಿತರು ಮನೆಗಳಿಗೆ ಹೊರಗಿನಿಂದ ಚಿಲಕ ಹಾಕುತ್ತಿರುವ ಬಗ್ಗೆ ಹಾಗೂ ರಾಡ್‌
ಗಳನ್ನು ಹಿಡಿದುಕೊಂಡು ಓಡಾಡುತ್ತಿರುವ ಬಗ್ಗೆ ರಾತ್ರಿ 1 ಗಂಟೆ ಸುಮಾರಿಗೆ ವಾಕಿಟಾಕಿ ಮೂಲಕ ಸಂದೇಶ ಬಂತು. ಕೂಡಲೇ ನಾವಿಬ್ಬರೂ ಅಲ್ಲಿಗೆ ತೆರಳಿದೆವು. ಅಷ್ಟರಲ್ಲಾಗಲೇ ಹೆಡ್‌ಕಾನ್‌ಸ್ಟೆಬಲ್ ವೀರಣ್ಣ, ಕಾನ್‌ಸ್ಟೆಬಲ್ ಸುಬ್ಬರಾಯಪ್ಪ ಸೇರಿ ನಾಲ್ವರು ಸಿಬ್ಬಂದಿ ಹೊಯ್ಸಳ ವಾಹನದಲ್ಲಿ ಅಲ್ಲಿಗೆ ಬಂದಿದ್ದರು.’

‘ಎಲ್ಲರೂ ಸೇರಿ ಅರ್ಧ ತಾಸು ಹುಡುಕಾಡಿದರೂ, ಯಾರೂ ಪತ್ತೆಯಾಗಲಿಲ್ಲ. ಈ ಬಗ್ಗೆ ಠಾಣೆಗೆ ವಿಷಯ ತಿಳಿಸಿ, ಗಸ್ತು ಕೆಲಸಕ್ಕೆ ನಮ್ಮ ಪಾಯಿಂಟ್‌ಗೆ ಮರಳಿದೆವು. 2.10ಕ್ಕೆ ಟಾಟಾನಗರ 9ನೇ ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದಾಗ ನಾಲ್ವರು ಅಪರಿಚಿತರು ಆಯುಧ ಹಿಡಿದುಕೊಂಡು ಹೋಗುತ್ತಿರುವುದು ಕಂಡುಬಂತು. ನಮ್ಮನ್ನು ನೋಡಿದ ಕೂಡಲೇ ಅವರು ಓಡಲಾರಂಭಿಸಿದರು.’

‘ನಾವು ಬೈಕ್ ನಿಲ್ಲಿಸಿ ಹುಡುಕಲು ಹೋದಾಗ, ಕಾರಿನ ಮರೆಯಲ್ಲಿ ಕುಳಿತಿದ್ದ ಅವರು ಏಕಾಏಕಿ ನಮ್ಮತ್ತ ಕಲ್ಲುಗಳನ್ನು ತೂರಿದರು. ಹೊಡೆತ ತಪ್ಪಿಸಿ
ಕೊಳ್ಳಲು ಓಡುವಾಗ ರೈಫೆಲ್ ಸಮೇತ ಕೆಳಗೆ ಬಿದ್ದೆವು. ಮಚ್ಚು–ರಾಡ್‌ನಿಂದ ಮುಗಿಬಿದ್ದ ಆ ಅಪರಿಚಿತರು, ಹಲ್ಲೆಮಾಡಿ ರೈಫೆಲ್ ತೆಗೆದುಕೊಂಡು ಓಡಿದರು. ಆ ನಂತರ ವಾಕಿಟಾಕಿ ಮೂಲಕ ಎಎಸ್‌ಐ ರೆಡ್ಡಿ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದೆವು.’

‘ಹಲ್ಲೆಯಿಂದ ನನ್ನ ಬಲಗೈ, ಬೆನ್ನು ಹಾಗೂ ತೊಡೆಗೆ ಪೆಟ್ಟು ಬಿದ್ದಿದೆ. ಸಿದ್ದಪ್ಪ ಅವರಿಗೆ ಬೆನ್ನು, ಕಾಲು ಹಾಗೂ ಮೂಗಿಗೆ ಏಟಾಗಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಆರೋಪಿಗಳು, ಹಿಂದಿ ಭಾಷೆ ಮಾತನಾಡುತ್ತಿದ್ದರು.’

‘ಮನೆಕಳ್ಳತನ ಅಥವಾ ಇನ್ನಾವುದೋ ಘೋರ ಅಪರಾಧ ಕೃತ್ಯ ಎಸಗುವ ಸಲುವಾಗಿ ಬಂದಿದ್ದ ಆರೋಪಿಗಳು, ಅದನ್ನು ತಡೆಯಲು ಮುಂದಾದ ಪೊಲೀಸರ ಮೇಲೆ ಹಲ್ಲೆ ಮಾಡಿ ರೈಫೆಲ್ ಕದ್ದೊಯ್ದಿದ್ದಾರೆ. ಹೀಗಾಗಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಪರಮೇಶಪ್ಪ ದೂರಿನಲ್ಲಿ ಕೋರಿದ್ದಾರೆ.

ಮೂರು ವಿಶೇಷ ತಂಡಗಳ ರಚನೆ

‘ರಾತ್ರಿ ಪೊಲೀಸರು ಹಾಗೂ ಮನೆಗಳ್ಳರ ನಡುವೆ ಜಟಾಪಟಿ ನಡೆದಿದೆ. ಈ ವೇಳೆ ಕಳ್ಳರಿಗೂ ಪೆಟ್ಟು ಬಿದ್ದಿದೆ. ಪೊಲೀಸರು ತಮ್ಮತ್ತ ಗುಂಡು ಹಾರಿಸಿಬಿಡಬಹುದು ಎಂಬ ಭಯದಲ್ಲಿ ಅವರು ರೈಫೆಲ್ ಕದ್ದೊಯ್ದಂತೆ ಕಾಣುತ್ತದೆ. ಅವರ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದೇವೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಎಸ್.ಗಿರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.