ADVERTISEMENT

‘ನಮ್ಮೂರ ಶಾಲೆ’ ಸುತ್ತ ನಾಲ್ಕು ಟವರ್!

​ಪ್ರಜಾವಾಣಿ ವಾರ್ತೆ
Published 21 ಜನವರಿ 2018, 19:35 IST
Last Updated 21 ಜನವರಿ 2018, 19:35 IST
ಹೆಸರಘಟ್ಟದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸುತ್ತ ನಿರ್ಮಿಸಿರುವ ಮೊಬೈಲ್ ಟವರ್
ಹೆಸರಘಟ್ಟದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸುತ್ತ ನಿರ್ಮಿಸಿರುವ ಮೊಬೈಲ್ ಟವರ್   

ಬೆಂಗಳೂರು: ಹೆಸರಘಟ್ಟದ ನಮ್ಮೂರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯೊಳಗೆ ನಾಲ್ಕು ಮೊಬೈಲ್ ಟವರ್‌ಗಳಿವೆ. ಇವುಗಳಿಂದ ಶಾಲೆಯ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

‘ಐದು ವರ್ಷಗಳ ಹಿಂದೆಯೇ ಇಲ್ಲಿ ಟವರ್‌ಗಳನ್ನು ನಿರ್ಮಿಸಲಾಗಿದೆ. ಶಾಲೆ ಆವರಣದಲ್ಲಿಯೇ ಅಂಗನವಾಡಿ ಕೇಂದ್ರವೂ ಇದೆ. ಶಾಲೆಯ ಸುತ್ತಮುತ್ತ ಮತ್ತು ಜನವಸತಿ ಪ್ರದೇಶಗಳಲ್ಲಿ ಟವರ್ ಅಳವಡಿಸಬಾರದೆಂಬ ನಿಯಮ ಇದೆ. ಆದರೆ, ಜಾಗದ ಮಾಲೀಕರಿಗೆ ಹೆಚ್ಚು ಹಣ ನೀಡಿ ಕಾನೂನು ಬಾಹಿರವಾಗಿ ಇಲ್ಲಿ ಟವರ್ ಅಳವಡಿಸಿದ್ದಾರೆ. ಇವುಗಳನ್ನು ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದರೂ ಪಂಚಾಯಿತಿ ಅಧಿಕಾರಿಗಳು ಕ್ರಮಕೈಗೊಂಡಿಲ್ಲ’ ಎಂದು ಬಿಳಿಜಾಜಿ ಗ್ರಾಮದ ನಿವಾಸಿ ಗೋವಿಂದರಾಜು ದೂರಿದರು.

ಹೆಸರಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಲಕ್ಷ್ಮೀ ‘ನಾವು ಮನವಿ ಮಾಡಿದರೂ ಜಾಗದ ಮಾಲೀಕರು ಟವರ್‌ಗಳನ್ನು ತೆರವು ಮಾಡಿಸುತ್ತಿಲ್ಲ. ಶಾಲಾ ಮಕ್ಕಳು ಮತ್ತು ಸುತ್ತಲಿನ ನಿವಾಸಿಗಳ ಆರೋಗ್ಯಕ್ಕಿಂತ ಮೊಬೈಲ್‌ ಟವರ್‌ ಕಂಪನಿಗಳು ನೀಡುತ್ತಿರುವ ಬಾಡಿಗೆ ಹಣವೇ ಕೆಲವರಿಗೆ ಮುಖ್ಯವಾಗಿದೆ. ಕಾನೂನಿನ ಅಡಿಯಲ್ಲಿ ತೆರವು ಗೊಳಿಸಲು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.

ADVERTISEMENT

‘ಟವರ್‌ಗಳು ಹೊರಸೂಸುವ ವಿದ್ಯುತ್‌ಕಾಂತೀಯ ವಿಕಿರಣಗಳು ಮಕ್ಕಳ ಮೆದುಳಿಗೆ ಹಾನಿ ಮಾಡುತ್ತವೆ. ಕೆಲವು ಮಕ್ಕಳು ಈ ವಿಕಿರಣಗಳಿಂದ ಬುದ್ಧಿಮಾಂದ್ಯತೆ ಮತ್ತು ಕ್ಯಾನ್ಸರ್ ರೋಗಕ್ಕೂ ತುತ್ತಾಗಬಹುದು. ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳಬಹುದು’ ಎಂದು ತಜ್ಞವೈದ್ಯರು ಎಚ್ಚರಿಸಿದ್ದಾರೆ.

ಸುಪ್ರೀಂಕೋರ್ಟ್‌ ತೀರ್ಪು ಪಾಲಿಸಬೇಕು: ಜನವಸತಿ ಪ್ರದೇಶದಲ್ಲಿ ಮೊಬೈಲ್ ಟವರ್ ಸ್ಥಾಪಿಸದಂತೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ಸ್ಥಳೀಯ ಪಂಚಾಯಿತಿ ಮತ್ತು ಮೊಬೈಲ್‌ ಟವರ್‌ ಕಂಪನಿಗಳು ಪಾಲಿಸಬೇಕು ಎನ್ನುತ್ತಾರೆ ವಕೀಲ ನಾಗರಾಜ್‌.

'ಮಧ್ಯಪ್ರದೇಶದ ಗ್ವಾಲಿಯರ್‍ನ ದಾಲ್ ಬಜಾರ್ ಪ್ರದೇಶದ ನಿವಾಸಿ ಹರೀಶ್ ಚಾಂದ್ ತಾವರ್ ತಮ್ಮ ಮನೆಯ ಸುತ್ತ ಇರುವ ಮೊಬೈಲ್ ಟವರ್‌ಗಳಿಂದ ತನಗೆ ಕ್ಯಾನ್ಸರ್ ಬಂದಿದೆ. ಟವರ್‌ಗಳನ್ನು ಸ್ಥಳಾಂತರಿಸಬೇಕೆಂದು 2002ರಲ್ಲಿ ಸುಪ್ರೀಂ ಕೋಟ್‍ನಲ್ಲಿ ದಾವೆ ಹೂಡಿದ್ದರು. ಮೊಬೈಲ್ ಟವರ್‍ ಹೊರಸೂಸುವ ವಿಕಿರಣಗಳಿಂದ ಕ್ಯಾನ್ಸರ್ ಬರುವುದನ್ನು ಖಚಿತ ಪಡಿಸಿಕೊಂಡ ನಂತರ ನ್ಯಾಯಮೂರ್ತಿಗಳಾದ ರಂಜನ್ ಗಗೋಯ್ ಹಾಗೂ ನವೀನ್ ಸಿನ್ಹಾ ಅವರ ನೇತೃತ್ವದ ದ್ವಿಸದಸ್ಯ ಪೀಠ ಟವರ್ ಸ್ಥಳಾಂತರಿಸುವಂತೆ ತೀರ್ಪು ನೀಡಿತ್ತು. ಜನವಸತಿ ಪ್ರದೇಶಗಳಲ್ಲಿ ಟವರ್ ನಿರ್ಮಿಸದಂತೆ ಆದೇಶ ನೀಡಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.